ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

T.G.M.C. Bank: ಟಿ.ಜಿ.ಎಂ.ಸಿ ಬ್ಯಾಂಕ್‌ನಲ್ಲಿ 200 ಕೋಟಿ ಅವ್ಯವಹಾರ ಆರೋಪ; ಎಫ್‌ಐಆರ್‌ ದಾಖಲು

T.G.M.C. Bank: ಟಿ.ಜಿ.ಎಂ.ಸಿ ಬ್ಯಾಂಕ್‌ನಲ್ಲಿ (T.G.M.C. Bank) ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪಿರ್ಯಾದುದಾರ ಜಿ.ಎಸ್.ಬಸವರಾಜು ದೂರಿನಲ್ಲಿ ಮನವಿ ಮಾಡಿದ್ದಾರೆ.

ಟಿ.ಜಿ.ಎಂ.ಸಿ ಬ್ಯಾಂಕ್‌ನಲ್ಲಿ 200 ಕೋಟಿ ಅವ್ಯವಹಾರ ಆರೋಪ; ಎಫ್‌ಐಆರ್‌ ದಾಖಲು

Profile Prabhakara R Jan 25, 2025 7:19 PM

ತುಮಕೂರು: ನಗರದ ಟಿ.ಜಿ.ಎಂ.ಸಿ ಬ್ಯಾಂಕ್‌ನಲ್ಲಿ 20 ಖಾತೆಗಳಿಂದ ಸುಮಾರು 200 ಕೋಟಿ ರೂ. ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ಜಿ.ಎಸ್.ಬಸವರಾಜು ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ 8 ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಬ್ಯಾಂಕ್‌ನ ದಿವ್ಯಾನಂದಮೂರ್ತಿ. ಎಚ್‌, ಉಪಾಧ್ಯಕ್ಷ ನಟರಾಜು ಸಿ.ಆರ್‌., ನಿರ್ದೇಶಕರಾದ ಪ್ರಭು ಎಸ್‌.ಬಿ., ಮಹೇಶ್‌ ಎಂ, ಸುರೇಶ್‌ ಕುಮಾರ್‌, ಬಲರಾಮಶೆಟ್ಟಿ, ಸಿಇಒ ಸುರೇಶ್‌. ಜೆ, ಮೂರ್ತಿ ಎಚ್‌ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಟಿ.ಜಿ.ಎಂ.ಸಿ ಬ್ಯಾಂಕ್‌ನ 20 ಖಾತೆಗಳಲ್ಲಿ 200 ಕೋಟಿ ರೂ. ಅವ್ಯವವಹಾರ ನಡೆದಿರುವ ಬಗ್ಗೆ ಹಲವಾರು ದೂರುಗಳು ಸಹಕಾರ ಇಲಾಖೆಗೆ ನೀಡಲಾಗಿದೆ. ಸಹಕಾರ ಸಂಘಗಳ ನಿಬಂಧಕರು ಆರ್.ಸಿ.ಎಸ್/ಯು.ಬಿ.ಸಿ-1/ ಸೆಕ್ಷನ್ 64/2022-23 ದಿನಾಂಕ 02/05/2023ರ ಆದೇಶದಲ್ಲಿ ತನಿಖೆ ಮತ್ತು ವರದಿ ಮಾಡಲು ಸಹಕಾರ ಸಂಘಗಳ ಉಪ ರಿಜಿಸ್ಟ್ರಾರ್ ಅವರಿಗೆ ಆದೇಶಿಸಿದ್ದಾರೆ. ಈ ಸಂಬಂಧ ಟಿ.ಜಿ.ಎಂ.ಸಿ ಬ್ಯಾಂಕ್ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸಿಇಒ, ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಇತರರು ಸಂಚು ರೂಪಿಸಿ ದಾಖಲೆ ಫೋರ್ಜರಿ ಮಾಡಿಸಿ ವಿಚಾರಣೆಗೆ ಹಾಜರುಪಡಿಸುವ ದಾಖಲೆಯನ್ನು ಹಿಂದಿನ ತಾರೀಖು ಹಾಕಿ ಪೋರ್ಜರಿ ಮಾಡಿ ಆರೋಪಿತರನ್ನು ರಕ್ಷಿಸಿ, ಕಾನೂನು ದಂಡನೆಯಿಂದ ತಪ್ಪಿಸಲು ಸುಳ್ಳು ಸಾಕ್ಷಿ ರಚಿಸಿ ಬ್ಯಾಂಕಿನಲ್ಲಿ ನಡೆದಿರುವ ಸುಮಾರು 200 ಕೋಟಿ ರೂ. ಹಣ ವಂಚನೆ ಬಗ್ಗೆ ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ಬಸವರಾಜು ದೂರಿನಲ್ಲಿ ತಿಳಿಸಿದ್ದಾರೆ.

2023ರ ಅ.30ರಂದು ಡಿ.ಆರ್.ಸಿ.ಎಸ್.ಗೆ ನೀಡಿರುವ ಟಿಜಿಎಂಸಿ.ಬಿ/ಆಡಳಿತ/421/2023-24ರಲ್ಲಿ ಟಿ.ಜಿ.ಎಂ.ಸಿ ಬ್ಯಾಂಕ್‌ನಿಂದ ಬರೆದ ಪತ್ರಕ್ಕೆ ಅಧ್ಯಕ್ಷರು ಮತ್ತು ನಿರ್ದೇಶಕರು ಸಹಿ ಹಾಕಿದಂತಿದೆ. ಈ ಉತ್ತರದಲ್ಲಿ ಯಾವುದೇ ದಾಖಲೆಗಳಿಲ್ಲದೆ ಲಿಖಿತ ವಿವರಣೆಯನ್ನು ಅವರಿಗೆ ಬೆಂಬಲವಾಗಿ ನೀಡಿದೆ. ನಿರ್ದೇಶಕ ಜಿ.ಸಿ.ಬಸವರಾಜು ಅವರ 2015-20ರ ಅವಧಿ ಮುಗಿದಿದ್ದು 2023ರಲ್ಲಿ ಅವರ ಸಹಿಯನ್ನು ನಕಲು ಮಾಡಲಾಗಿದೆ. ಅವರ ಹೆಸರನ್ನು ಜಿ.ಎಸ್.ಬಸವರಾಜು ಎಂದು ತಪ್ಪಾಗಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | DK Shivakumar: ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿನ ಪ್ರಮುಖ ಯೋಜನೆಗಳಿಗೆ ಅನುದಾನ ನೀಡಿ: ನಿರ್ಮಲಾ ಸೀತಾರಾಮನ್‌ಗೆ ಡಿಕೆಶಿ ಪತ್ರ

ಟಿ.ಜಿ.ಎಂ.ಸಿ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪಿರ್ಯಾದುದಾರ ಜಿ.ಎಸ್.ಬಸವರಾಜು ದೂರಿನಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ದೂರು ಆಧರಿಸಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.