MR.TIPTUR-2025: ದೇಹದಾರ್ಢ್ಯ ಸ್ಪರ್ಧೆ; ಪ್ರಜ್ವಲ್‌ಗೆ ʼಮಿಸ್ಟರ್ ತಿಪಟೂರುʼ ಗರಿ
Tiptur News: ತಿಪಟೂರು ನಗರದ ಜಿ.ಕೆ.ಎಂ. ನಗರದಲ್ಲಿ ಟೀಮ್ ಹಲ್ಕ್ ವತಿಯಿಂದ ‘ಮಿಸ್ಟರ್ ತಿಪಟೂರು’ ದೇಹದಾರ್ಢ್ಯ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಗೃಹ ಮಂಡಳಿ ಅಧ್ಯಕ್ಷ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.


ತಿಪಟೂರು: ಟೀಮ್ ಹಲ್ಕ್ ವತಿಯಿಂದ ನಗರದ (Tiptur News) ಜಿ.ಕೆ.ಎಂ. ನಗರದಲ್ಲಿ ಆಯೋಜಿಸಿದ್ದ ‘ಮಿಸ್ಟರ್ ತಿಪಟೂರು’ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಜ್ವಲ್ ಪ್ರಥಮ ಸ್ಥಾನ ಪಡೆದಿದ್ದಾರೆ. ತಿಮ್ಲಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಂದಿಹಳ್ಳಿ ದೇವರಾಜ್ ಅವರ ಪುತ್ರ ಎನ್.ಡಿ. ಪ್ರಜ್ವಲ್ ಅವರು 'ಮಿಸ್ಟರ್ ತಿಪಟೂರು-2025' ಆಗಿ ಹೊರಹೊಮ್ಮಿದ್ದು, ಪ್ರಥಮ ಬಹುಮಾನವಾಗಿ 10,000 ರೂ. ನಗದು, ಟ್ರೋಫಿ ಹಾಗೂ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.
ರಾಜ್ಯ ಗೃಹ ಮಂಡಳಿ ಅಧ್ಯಕ್ಷ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎನ್ನುವುದು ಈ ಭಾಗದ ಜನರ ಬಹಳಷ್ಟು ವರ್ಷಗಳ ಹೋರಾಟ. ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಮುಂದಿನ ವಾರ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಅನೇಕ ಜನ ಮಂತ್ರಿಗಳು ಅರಸೀಕೆರೆಗೆ ಆಗಮಿಸುತ್ತಿದ್ದು, ತೆಂಗು ಬೆಳೆಗಾರರಿಗೆ ಆಗಿರುವ ತೊಂದರೆ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿರಂತರ ವ್ಯಾಯಾಮಗಳು ಮುಖ್ಯವಾಗಿರುತ್ತದೆ. ಟೀಮ್ ಹಲ್ಕ್ ವತಿಯಿಂದ ಆಯೋಜಿಸಿರುವ ದೇಹದಾರ್ಢ್ಯ ಸ್ಪರ್ಧೆ ಸ್ಫೂರ್ತಿದಾಯಕವಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು. ಬಳಿಕ ʼಮಿಸ್ಟರ್ ತಿಪಟೂರುʼ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸ್ಪರ್ಧೆಯಲ್ಲಿ ಪ್ರಜ್ವಲ್ ಪ್ರಥಮ ಸ್ಥಾನ ಪಡೆದು, ʼಮಿಸ್ಟರ್ ತಿಪಟೂರುʼ ಆಗಿ ಹೊರಹೊಮ್ಮಿದರು.

ಈ ಸುದ್ದಿಯನ್ನೂ ಓದಿ | BOB Recruitment 2025: 2,500 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಿದ ಬ್ಯಾಂಕ್ ಆಫ್ ಬರೋಡಾ; ಹೊಸ ಅಪ್‌ಡೇಟ್ ಬಗ್ಗೆ ಇಲ್ಲಿದೆ ಮಾಹಿತಿ
ಈ ಸಂದರ್ಭದಲ್ಲಿ ನಿವೃತ್ತ ಎಸಿಪಿ ಲೋಕೇಶ್ವರ್, ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಉಪಾಧ್ಯಕ್ಷೆ ಮೇಘನಾ ಭೂಷಣ್, ಅರಸೀಕೆರೆ ನಗರಸಭೆ ಅಧ್ಯಕ್ಷ ಸಮ್ಮಿಉಲ್ಲಾ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಸೈಫುಲ್ಲ, ಜಿ.ಕೆ. ನಟರಾಜ್, ಮುತಾವಲ್ಲಿ ಮಹಮದ್ ದಸ್ತಗೀರ್, ಸಮೀಉಲ್ಲಾ ಹಾಗೂ ಇತರರು ಉಪಸ್ಥಿತರಿದರು.