ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ಪ್ರಸ್ತುತ ದುಡಿದು ಹಂಚಿ ತಿನ್ನುವ ಗುಣ ಬೇಕಿದೆ : ಶ್ರೀ ಚಂದ್ರಶೇಖರ ಸ್ವಾಮೀಜಿ

ಮಕ್ಕಳಿಗೆ ಸನ್ಮಾನಿಸಿ ಗೌರವಿಸಿ ಪುರಸ್ಕಾರ ನೀಡುವ ಕೆಲಸ ಕಳೆದ 20 ವರ್ಷದಿಂದ ನಡೆಸಿರುವ ನೌಕರರ ಸಂಘ ಮೌಲ್ಯಾಧಾರಿತ ಅರಿವು ನೀಡುವ ವೇದಿಕೆ ಆಯೋಜಿಸುತ್ತಾರೆ. ಇಲ್ಲಿ ಸೇರುವ ಆಸ್ತಿಕ ಬಂಧುಗಳು ತಮ್ಮ ದಾನಧರ್ಮ ಎಂದಿಗೂ ನಿಲ್ಲಿಸದೆ ಹೆಚ್ಚಿಸಿ ನಮ್ಮ ಸಮುದಾಯ ಕಟ್ಟಬೇಕು. ಈ ಜೊತೆಗೆ ಕೋಟಿಗಟ್ಟಲೆ ಆಸ್ತಿ ಹೊಂದಿದ ನಮ್ಮ ಜನರಲ್ಲಿ ಸ್ವಾರ್ಥ ಬೆಳೆದು ಈಗ ವಾರಸುದಾರ ಇಲ್ಲದೇ ಹಾಗೆಯೇ ಆಸ್ತಿ ಬಿದ್ದಿರುವ ನಿದರ್ಶನ ನಮ್ಮ ತಾಲ್ಲೂಕಿನಲ್ಲಿದೆ

ಗುಬ್ಬಿ: ಕಾಯಕ ಹಾಗೂ ದಾಸೋಹ ವೀರಶೈವ ಲಿಂಗಾಯತ ಧರ್ಮದ ಮೂಲ ಉದ್ದೇಶವಾಗಿದೆ. ಪ್ರಸ್ತುತ ದಿನಮಾನದಲ್ಲಿ ಶರಣರ ನುಡಿಯಂತೆ ಕೆಲಸ ಮಾಡಿ ದುಡಿದು ಹಂಚಿ ತಿನ್ನುವ ಗುಣ ಬೆಳೆಸಿಕೊಂಡಲ್ಲಿ ಸ್ವಾಸ್ಥ್ಯ ಸಮಾಜ ಕಟ್ಟಬಹುದು ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಹೊರವಲಯ ಹೇರೂರು ಗ್ರಾಮದ ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯಭವನದಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ನೌಕರರ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ಸಮಾಜದ ಜೊತೆ ಬೆರೆತು ಸಾಗುವ ನಮ್ಮ ವೀರಶೈವ ಲಿಂಗಾಯತ ಸಮಾಜದಲ್ಲಿನ ರಾಜಕಾರಣಿಗಳು, ಅಧಿಕಾರಿ ವರ್ಗ ಮತ್ತು ಸಿರಿವಂತ ವರ್ಗ ಒಗ್ಗಟ್ಟಾಗಿ ಸಮಾಜ ಕಟ್ಟುವ ಕೆಲಸ ಮಾಡಿದರೆ ಮುಂದೆ ವಿಶ್ವದ ಗಮನ ಸೆಳೆಯುವ ಸಮಾಜವಾಗಿ ಗುರುತಿಸಿ ಕೊಳ್ಳುತ್ತದೆ ಎಂದರು.

ಮಕ್ಕಳಿಗೆ ಸನ್ಮಾನಿಸಿ ಗೌರವಿಸಿ ಪುರಸ್ಕಾರ ನೀಡುವ ಕೆಲಸ ಕಳೆದ 20 ವರ್ಷದಿಂದ ನಡೆಸಿರುವ ನೌಕರರ ಸಂಘ ಮೌಲ್ಯಾಧಾರಿತ ಅರಿವು ನೀಡುವ ವೇದಿಕೆ ಆಯೋಜಿಸುತ್ತಾರೆ. ಇಲ್ಲಿ ಸೇರುವ ಆಸ್ತಿಕ ಬಂಧುಗಳು ತಮ್ಮ ದಾನಧರ್ಮ ಎಂದಿಗೂ ನಿಲ್ಲಿಸದೆ ಹೆಚ್ಚಿಸಿ ನಮ್ಮ ಸಮುದಾಯ ಕಟ್ಟಬೇಕು. ಈ ಜೊತೆಗೆ ಕೋಟಿಗಟ್ಟಲೆ ಆಸ್ತಿ ಹೊಂದಿದ ನಮ್ಮ ಜನರಲ್ಲಿ ಸ್ವಾರ್ಥ ಬೆಳೆದು ಈಗ ವಾರಸುದಾರ ಇಲ್ಲದೇ ಹಾಗೆಯೇ ಆಸ್ತಿ ಬಿದ್ದಿರುವ ನಿದರ್ಶನ ನಮ್ಮ ತಾಲ್ಲೂಕಿನಲ್ಲಿದೆ. ಈ ನಿಟ್ಟಿನಲ್ಲಿ ಸಮಾಜಕ್ಕೆ ಕಾಣಿಕೆ, ಬಡವರಿಗೆ ಸಹಾಯ ಮಾಡುವ ಮೂಲಕ ವಂಶ ಬೆಳೆಸಿಕೊಂಡು ಸಾಗಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: Gubbi News: ರಸ್ತೆ ವಿವಾದಕ್ಕೆ ತೆರೆ: ತಹಶೀಲ್ದಾರ್ ಭೇಟಿ; ಜಮೀನುಗಳಿಗೆ ರಸ್ತೆ ಸುಗಮ

ದೊಡ್ಡಗುಣಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ನೌಕರರ ಸಂಘ ವೀರಶೈವ ಯುವ ಪ್ರತಿಭೆಗೆ ಬಲ ತುಂಬುವ ಕೆಲಸ ಮಾಡುತ್ತಿದೆ. ಶಿಕ್ಷಣ ಜೊತೆಗೆ ಮಕ್ಕಳು ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಂಡು ಸಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಮೂರು ಶಕ್ತಿ ಅಗತ್ಯವಿದೆ. ಗ್ರಹಣ, ಸ್ಮರಣ ಹಾಗೂ ಚಿಂತನಾ ಶಕ್ತಿ ಬೆಳೆಸಿಕೊಂಡಲ್ಲಿ ಮುಂದಿನ ಭವಿಷ್ಯ ಸುಂದರವಾಗುತ್ತದೆ. ನಮ್ಮಲ್ಲಿ ರಾಜಕೀಯ ಕೊರತೆ ಈಗ ಕಾಣುತ್ತಿದೆ. ಒಗ್ಗಟ್ಟು ಕೊರತೆ ಸಹ ಎದ್ದು ಕಾಣುತ್ತಿದೆ ಎಂದು ವಿಷಾದಿಸಿ ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ನೌಕರರ ಸಂಘ ಪ್ರತಿಭಾವಂತ ಮಕ್ಕಳಿಗೆ ಗುರುತಿಸಿ ಸನ್ಮಾನಿಸುವುದು ಸಾರ್ಥಕ ಕೆಲಸ. ಈ ಜೊತೆಗೆ ಕನಿಷ್ಠ ಅಂಕ ಗಳಿಸಿದ ಮಕ್ಕಳಿಗೂ ಭವಿಷ್ಯ ರೂಪಿಸುವ ಕೆಲಸ ಮಾಡಬೇಕಿದೆ. ಈ ಜತೆಗೆ ಅಧಿಕಾರಿಗಳ ಅಸೋಶಿ ಯೇಷನ್ ತುಮಕೂರಿನಲ್ಲಿ ಉನ್ನತ ಶಿಕ್ಷಣದ ಬಗ್ಗೆ ತರಬೇತಿ ಹಾಗೂ ಕೌನ್ಸಿಲಿಂಗ್ ಮಾಡಬೇಕು. ಒಳ್ಳೆದು ಮಾಡಿ ಇಲ್ಲವಾದಲ್ಲಿ ಸಮಾಜ ಕಟ್ಟುವ ಕೆಲಸಕ್ಕೆ ಕಳ್ಳುಮುಳ್ಳು ಹಾಕುವ ಕೆಲಸ ಮಾತ್ರ ಯಾರೂ ಮಾಡಬೇಡಿ ಎಂದು ಮನವಿ ಮಾಡಿದರು.

ಕೆಎಎಸ್ ಅಧಿಕಾರಿ ಎಚ್.ಪಿ.ಸೋಮಶೇಖರ್ ಮಾತನಾಡಿ, ಆಧುನಿಕತೆಗೆ ತಕ್ಕಂತೆ ಕೌಶಲ್ಯ ಬೆಳೆಸುವ ಹೊಸ ಶಿಕ್ಷಣದತ್ತ ಮಕ್ಕಳು ಚಿತ್ತ ಮಾಡಬೇಕಿದೆ. ಎಲ್ಲಾ ಕ್ಷೇತ್ರದಲ್ಲೂ ಅವಕಾಶ ಇರುವಾಗ ಕೇವಲ ಡಾಕ್ಟರ್, ಇಂಜಿನಿಯರ್ ಈ ಎರಡು ಮಾತ್ರ ಆಯ್ಕೆ ಎಂಬುದು ತಿಳಿಯುತ್ತಿಲ್ಲ. ಸ್ಪರ್ಧಾತ್ಮಕ ಜಗತ್ತಿ ನಲ್ಲಿ ನಾವು ಸಾಮಾನ್ಯ ಮೀಸಲಿನಲ್ಲಿ ಹೋರಾಟ ಮಾಡಬೇಕಿದೆ. ಜನರಲ್ ಕೆಟಗರಿ ಕೇಂದ್ರದಲ್ಲಿ ರುವ ಕಾರಣ ಇಡಬ್ಲ್ಯೂಎಸ್ ಮೂಲಕ ಶೇಕಡಾ 10 ಮೀಸಲು ಪಡೆದು ಉನ್ನತ ಶಿಕ್ಷಣ ಪಡೆಯ ಬೇಕಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಸಿ.ಸೋಮಶೇಖರ್ ವಹಿಸಿದ್ದರು.

ಜಿಪಂ ಮಾಜಿ ಸದಸ್ಯೆ ಡಾ.ನವ್ಯಾಬಾಬು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಶಶಿ ಹುಲಿಕುಂಟೆ, ಮಹಾಸಭಾ ತಾಲ್ಲೂಕು ಉಪಾಧ್ಯಕ್ಷ ವಿಶ್ವಾರಾಧ್ಯ, ಬಿ.ಜಿ.ದಿವ್ಯಾಪ್ರಕಾಶ, ಪಪಂ ಮಾಜಿ ಸದಸ್ಯ ಜಿ.ಆರ್.ಶಿವಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮಲಾಪುರ ಉಮೇಶ್, ನಿವೃತ್ತ ಪ್ರಾಚಾರ್ಯ ಪ್ರಸನ್ನ, ಉದ್ಯಮಿ ಬೆಣಚಿಗೆರೆ ರುದ್ರೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್, ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ.ಷಡಕ್ಷರಿ, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿ.ದಯಾನಂದ್, ಖಜಾಂಜಿ ರೇಣುಕಪ್ರಸಾದ್, ಗೌರವಾಧ್ಯಕ್ಷ ನಿಜಾನಂದಮೂರ್ತಿ, ಹಿರಿಯ ಉಪಾಧ್ಯಕ್ಷ ಅರುಣಕುಮಾರ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು. 

image

ಮಕ್ಕಳಿಗೆ ತಂದೆತಾಯಿಯ ಕಷ್ಟ ತಿಳಿಸಿರಬೇಕು. ಸಾಲ ಮಾಡಿ ಶಿಕ್ಷಣ ಕೊಡಿಸಿದ ತಪ್ಪಿಗೆ ಮುಂದೆ ಪಶ್ಚಾತಾಪ ಪಡುವ ಕುಟುಂಬಗಳು ಸಾಕಷ್ಟು ಕಣ್ಮುಂದೆ ಇದೆ. ಈ ಜೊತೆಗೆ ಸಂಬಂಧವನ್ನೇ ಮರೆಸುವ ಮೊಬೈಲ್ ನಮ್ಮ ಸಂಸ್ಕೃತಿಯನ್ನೇ ಬದಲಿಸಿದೆ. ವಿದೇಶದಲ್ಲಿ ನೆಲೆಸುವ ಮಕ್ಕಳು ಇಲ್ಲಿ ಪೋಷಕರನ್ನು ಹೈಟೆಕ್ ವೃದ್ಧಾಶ್ರಮದಲ್ಲಿ ಬಿಡುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಆಚಾರ ವಿಚಾರ, ವಿನಯ ಸಂಸ್ಕಾರ ಕಲಿಸಬೇಕು.

-ಎಸ್.ಡಿ.ದಿಲೀಪ್ ಕುಮಾರ್, ಬಿಜೆಪಿ ಮುಖಂಡರು, ಗುಬ್ಬಿ.
image

ಚಿಕ್ಕ ವಯಸ್ಸಿನ ಮಕ್ಕಳು ರೆಸಿಡೆಸ್ಶಿಯಲ್ ಶಾಲೆಗೆ ಸೇರಿಸಿ ಸಂಬಂಧದಿಂದ ದೂರ ಇಡಲಾಗುತ್ತಿದೆ. ಇದರ ಪರಿಣಾಮ ಮುಂದೆ ಮಕ್ಕಳು ಕೈ ತಪ್ಪಿ ಹೋಗಿರುತ್ತಾರೆ. ಮೊದಲ 15 ವರ್ಷದ ಶಿಕ್ಷಣ ನಿಮ್ಮ ಕಣ್ಮುಂದೆ ಕೊಡಿಸುವುದು ಉತ್ತಮ. ವಿಡಿಯೋ ಕಾಲ್ ನಲ್ಲಿ ಸಂಭಾಷಣೆ ಮಾಡುವ ಕುಟುಂಬ ಇಂದಿಗೂ ಚಾಲ್ತಿಯಲ್ಲಿದೆ. ಇದೆಲ್ಲದರ ಹೊರತಾಗಿ ಒಟ್ಟು ಕುಟುಂಬ ನಿರ್ವಹಣೆ ಮಾಡುವುದು ಉತ್ತಮ ಸಂಸ್ಕಾರ ಕಲಿಯಲು ಸೂಕ್ತ ವೇದಿಕೆಯಾಗುತ್ತದೆ.

-ಪಿ.ಬಿ.ಚಂದ್ರಶೇಖರಬಾಬು, ಜಿಪಂ ಮಾಜಿ ಸದಸ್ಯ, ಗುಬ್ಬಿ.