ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Former CM Siddaramaiah: ಇಂದಿನ ಚುನಾವಣಾ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯವಸ್ಥೆ ಬಹಳಷ್ಟು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ, ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯು ತ್ತೇನೆ. ವೀರಣ್ಣನವರ ಪ್ರಾಮಾಣಿಕತೆ, ಬದ್ಧತೆ ಮತ್ತು ಸರಳತೆಯನ್ನು ಇಂದಿನ ರಾಜಕಾರಣದಲ್ಲಿ ಅಳವಡಿಸಿ ಕೊಳ್ಳುವುದು ಕಷ್ಟವಿದ್ದು, ಚುನಾವಣಾ ವ್ಯವಸ್ಥೆ ಸುಧಾರಣೆಗೆ ಜನರು ಹೋರಾಟ ನಡೆಸಬೇಕು ಎಂದರು

​ತುಮಕೂರು: ಇಂದಿನ ಚುನಾವಣಾ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವ್ಯವಸ್ಥೆಯಲ್ಲಿ ಸುಧಾರಣೆ ತರುವುದೇ ನಾವು ಹಿರಿಯ ರಾಜಕಾರಣಿ ವೀರಣ್ಣನವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Former CM Siddaramaiah) ತಿಳಿಸಿದ್ದಾರೆ.

​ವೀರಣ್ಣ ಅಭಿಮಾನಿ ಬಳಗ ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾನ ಮನಸ್ಕ ವೇದಿಕೆ ವತಿಯಿಂದ ನಗರದ ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ 'ವೀರಣ್ಣ ಅವರಿಗೆ ನುಡಿನಮನ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯವಸ್ಥೆ ಬಹಳಷ್ಟು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ, ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯು ತ್ತೇನೆ. ವೀರಣ್ಣನವರ ಪ್ರಾಮಾಣಿಕತೆ, ಬದ್ಧತೆ ಮತ್ತು ಸರಳತೆಯನ್ನು ಇಂದಿನ ರಾಜಕಾರಣದಲ್ಲಿ ಅಳವಡಿಸಿಕೊಳ್ಳುವುದು ಕಷ್ಟವಿದ್ದು, ಚುನಾವಣಾ ವ್ಯವಸ್ಥೆ ಸುಧಾರಣೆಗೆ ಜನರು ಹೋರಾಟ ನಡೆಸಬೇಕು ಎಂದರು.

ಇದನ್ನೂ ಓದಿ: Siddaramaiah: ಸಿದ್ದರಾಮಯ್ಯಗೆ ಎಐಸಿಸಿಯಲ್ಲಿ ಮಹತ್ವದ ಹುದ್ದೆ ನೀಡಿದ ಕಾಂಗ್ರೆಸ್ ಹೈಕಮಾಂಡ್

ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ಇಂದಿನ ಕಲುಷಿತ ರಾಜಕಾರಣದಲ್ಲಿ ವೀರಣ್ಣನವ ರಂತಹ ವ್ಯಕ್ತಿತ್ವ ಅಪರೂಪ. ಹಣವೇ ಎಲ್ಲವನ್ನೂ ನಿರ್ಧರಿಸುವ ಕಾಲದಲ್ಲಿ ಅವರ ರಾಜಿಯಾಗದ ಮನಸ್ಥಿತಿ ಶ್ಲಾಘನೀಯ. 2008ರ ಕೊರಟಗೆರೆ ಚುನಾವಣೆಯಲ್ಲಿ ಅವರು ಸಹಾಯ ಮಾಡಿದ್ದರು. ತುಮಕೂರು ಜಿಲ್ಲೆಯಲ್ಲಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸ ಮಾಡಲಾಗುವುದು ಎಂದರು.

ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪಕ್ಷೇತರವಾಗಿ ನಿಂತು ಗೆಲ್ಲುವ ಸಾಮರ್ಥ್ಯವಿದ್ದರೂ ಪಕ್ಷದ ನಿಷ್ಠೆಗೆ ಮತ್ತೊಂದು ಹೆಸರಾಗಿದ್ದವರು ವೀರಣ್ಣ. ಸರಕಾರವೇ ಚುನಾವಣಾ ವೆಚ್ಚ ಭರಿಸುವ ವ್ಯವಸ್ಥೆ (ಸ್ಟೇಟ್ ಫಂಡ್) ಜಾರಿಗೆ ಬಂದರೆ ಮಾತ್ರ ಪ್ರಾಮಾಣಿಕರು ರಾಜಕಾರಣಕ್ಕೆ ಬರಲು ಸಾಧ್ಯ ಎಂದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಮೌಲ್ಯಾಧಾರಿತ ರಾಜಕಾರಣ, ಸಾಮಾಜಿಕ ನ್ಯಾಯ ಮತ್ತು ಆದರ್ಶಗಳು ಕುಂಠಿತಗೊಂಡಿರುವ ಕಾಲದಲ್ಲಿ ವೀರಣ್ಣನವರ ರಾಜಕಾರಣ ಎಲ್ಲರಿಗೂ ಮಾದರಿ. ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆ, ನೈತಿಕತೆ ಮತ್ತು ಸರಳತೆಯ ಗ್ಯಾರಂಟಿ ಗಳನ್ನು ರಾಜಕೀಯ ನಾಯಕರು ಅಳವಡಿಸಿಕೊಳ್ಳಬೇಕು ಎಂದರು.

ಶಾಸಕ ​ಟಿ.ಬಿ.ಜಯಚಂದ್ರ (MLA T B Jayachandra)ಮಾತನಾಡಿ, ವಕೀಲ ವೃತ್ತಿಯನ್ನು ಸೇವೆ ಯಾಗಿ ಸ್ವೀಕರಿಸಿ, ಕಾನೂನು ಓದುವ ವಿದ್ಯಾರ್ಥಿಗಳಿಗೆ ಮತ್ತು ವಕೀಲ ವೃತ್ತಿಗೆ ಬೆನ್ನೆಲುಬಾಗಿ ನಿಂತು ಬದುಕಿನಲ್ಲಿ ಯಶಸ್ಸು ಗಳಿಸಲು ವೀರಣ್ಣ ಕಾರಣರಾಗಿದ್ದರು ಎಂದು ಸ್ಮರಿಸಿದರು.

ಶಾಸಕ ​ಕೆ.ಎನ್.ರಾಜಣ್ಣ(MLA K N Rajanna) ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರವಾಗಿ ನಿರಂತರವಾಗಿ ಕೆಲಸ ಮಾಡಿದ ವೀರಣ್ಣ, ಎಂದಿಗೂ ಹಣದ ಹಿಂದೆ ಹೋದವರಲ್ಲ. ದಾಬಸ್ ಪೇಟೆ ಪೇಟೆ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಅವರೇ ಕಾರಣಕರ್ತರು ಎಂದು ತಿಳಿಸಿದರು.

ಮಾಜಿ ಸಚಿವ ​ಪಿ.ಜಿ.ಆರ್.ಸಿಂಧ್ಯಾ(P G R Sindhia) ಮಾತನಾಡಿ, ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ಬರಲು ಪ್ರಮುಖ ಕಾರಣರಾದ ವೀರಣ್ಣ, ಸಣ್ಣ ಉಳಿತಾಯ, ಸಾರಿಗೆ ಸೇರಿದಂತೆ ಒಟ್ಟು ಏಳು ಖಾತೆಗಳನ್ನು ದಕ್ಷತೆಯಿಂದ ನಿರ್ವಹಿಸಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರ ಮೆಚ್ಚುಗೆಗೂ ಪಾತ್ರರಾಗಿದ್ದರು.

​ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ(Sogadu Shivanna),ಸಂಸದ ಜಿ.ಎಸ್. ಬಸವರಾಜು(G S Basavaraju), ಶಾಸಕರಾದ ಶ್ರೀನಿವಾಸ್, ಅಶೋಕ್ ಪಟ್ಟಣಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಎಸ್. ನಾಗಣ್ಣ, ವಿ.ಎನ್. ಮೂರ್ತಿ, ನರಸಿಂಹಯ್ಯ, ಎಚ್.ಸಿ. ಹನುಮಂತಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.