ತುಮಕೂರು, ಅ. 4: ʼʼಪ್ರಧಾನಿ ನರೇಂದ್ರ ಮೋದಿ 25 ವರ್ಷಗಳ ಸಾರ್ವಜನಿಕ ಜೀವನದಲ್ಲಿ ದೇಶವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವಾ ಸಂಕಲ್ಪದ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನವನ್ನು (Seva Sankalp Abhiyan) ಹಮ್ಮಿಕೊಂಡಿದ್ದು, ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದೆʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನ ಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಸೇವಾ ಸಂಕಲ್ಪ ಹಾಗೂ ಬೂತ್ ಸಂಕಲ್ಪವನ್ನು ಒಟ್ಟಾಗಿ ನಡೆಸಲಾಗುತ್ತಿದೆ. ಕಾಡುಗೊಲ್ಲರ ಜುಂಜಪ್ಪನ ಹಟ್ಟಿಯಲ್ಲಿ ದೇವರ ಸೇವೆ ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆʼʼ ಎಂದರು.
ʼʼಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾಯಿತ ಸರ್ಕಾರವೊಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ ಎಂಬ ಭಾವನೆ ಜನರಿಗೆ ಮೂಡುತ್ತಿಲ್ಲʼʼ ಎಂದು ವಿಜಯೇಂದ್ರ ಟೀಕಿಸಿದರು.
ʼʼರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾಯುತ್ತಾ ಕುಳಿತಿರುವ ರಾಜ್ಯ ಸರ್ಕಾರ, ಒಂದು ಹೆಕ್ಟೇರ್‌ಗೆ ಕೇವಲ ₹ 2,500 ಪರಿಹಾರ ಘೋಷಿಸಿರುವುದು ಅತ್ಯಂತ ಕಡಿಮೆ ಮೊತ್ತವಾಗಿದೆʼʼ ಎಂದು ಅವರು ಹೇಳಿದರು.
ಎಸ್‍ಐಆರ್ ಫಾರ್ಮ್ 7 ವಿಚಾರದಲ್ಲಿ ಎಫ್‍ಐಆರ್ ದಾಖಲಿಸಿದರೆ ಹೋರಾಟ: ಬಿ.ವೈ. ವಿಜಯೇಂದ್ರ
“ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಎಕರೆಗೆ ₹ 50 ಸಾವಿರ ಪರಿಹಾರ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ರೈತರ ಸಂಕಷ್ಟಕ್ಕೆ ಸೂಕ್ತ ಸ್ಪಂದನೆ ನೀಡುವ ಬದಲು ಸರ್ಕಾರ ಅತ್ಯಲ್ಪ ಪರಿಹಾರ ಘೋಷಿಸಿದೆ” ಎಂದು ವಿಜಯೇಂದ್ರ ಹೇಳಿದರು.
ʼʼಮುಖ್ಯಮಂತ್ರಿಗೆ ರೈತರಿಗಿಂತ ರಿಯಲ್ ಎಸ್ಟೇಟ್ ಕ್ಷೇತ್ರದ ಬಗ್ಗೆ ಹೆಚ್ಚಿನ ಕಾಳಜಿ ಇದೆ ಎಂಬ ಆರೋಪವನ್ನು ಜನರೇ ಮಾಡುತ್ತಿದ್ದಾರೆ. ಬರ ಪರಿಹಾರಕ್ಕಾಗಿ ಸರ್ಕಾರದ ಪಕ್ಷದ ಶಾಸಕರೇ ರಾಜೀನಾಮೆ ನೀಡುವ ಮಾತುಗಳನ್ನು ಆಡುತ್ತಿದ್ದಾರೆʼʼ ಎಂದು ತಿಳಿಸಿದರು.
ಗ್ಯಾರಂಟಿಗಳಿಂದ ಖಜಾನೆ ಖಾಲಿಯಾಗಿದೆ: ವಿಜಯೇಂದ್ರ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದ್ದು, ಸರ್ಕಾರಿ ನೌಕರರಿಗೆ ಸಂಬಳ ನೀಡಲೂ ಹಣದ ಕೊರತೆ ಎದುರಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು. “ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಪೊಲೀಸ್ ಇಲಾಖೆ ಹಾಗೂ ನೀರಾವರಿ ಇಲಾಖೆಯ ಸಿಬ್ಬಂದಿಗೂ ಸಂಬಳ ನೀಡಲು ಹಣವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ನೈಜ ಹಣಕಾಸು ಸ್ಥಿತಿಯನ್ನು ಜನರ ಮುಂದೆ ಇಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ವೇತಪತ್ರ ಹೊರಡಿಸಬೇಕು” ಎಂದು ಒತ್ತಾಯಿಸಿದರು. ಬಡವರು ಹಾಗೂ ರೈತರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅಧಿಕಾರ ದುರುಪಯೋಗದ ಆರೋಪ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು. ʼʼನೈಸ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಟೆಕ್‌ಓವರ್ ಮಾಡಲು ಮುಂದಾಗಿದೆ. ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸ್ಥಳೀಯರ ವಿರೋಧದ ನಡುವೆಯೂ ಮುಂದುವರಿಸಲು ಸರ್ಕಾರ ಪ್ರಯತ್ನಿಸುತ್ತಿದೆʼʼ ಎಂದು ಅವರು ಆರೋಪಿಸಿದರು.
ಫಾರಂ-7 ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್
ʼʼಚುನಾವಣಾ ಆಯೋಗದ ನಿಯಮಗಳ ಪ್ರಕಾರ ಮತದಾರರ ಪಟ್ಟಿಯಲ್ಲಿ ಅನುಮಾನಾಸ್ಪದವಾಗಿ ಕಂಡುಬರುವ ಮತದಾರರ ಬಗ್ಗೆ ಆಕ್ಷೇಪ ಸಲ್ಲಿಸಲು ಫಾರಂ-7 ಮೂಲಕ ಅವಕಾಶವಿದೆ. ಆದರೆ ಇದೇ ಫಾರಂ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಲಾಗಿದ್ದು, ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆʼʼ ಎಂದು ವಿಜಯೇಂದ್ರ ಹೇಳಿದರು.
“ನಾವು ಸಲ್ಲಿಸಿದ ಅರ್ಜಿಗಳು ನಿಯಮಬದ್ಧವಾಗಿಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಅವುಗಳನ್ನು ತಿರಸ್ಕರಿಸುತ್ತಾರೆ. ಅದಕ್ಕಾಗಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವ ಅಗತ್ಯವೇನು?” ಎಂದು ಪ್ರಶ್ನಿಸಿದರು.
“ಅಧಿಕಾರದ ಮದ ಏರಿದರೆ ಏನಾಗುತ್ತದೆ ಎಂಬುದನ್ನು ಡಿ.ಕೆ. ಶಿವಕುಮಾರ್ ಹಿಂದಿನ ಘಟನೆಗಳಿಂದ ಕಲಿಯಬೇಕು. ವೀರಶೈವ-ಲಿಂಗಾಯತ ಸ್ವಾಮೀಜಿಗಳ ಸಭೆಯಲ್ಲಿ ಮಠಗಳ ಸಂಖ್ಯೆಯನ್ನು ಉಲ್ಲೇಖಿಸುವ ರೀತಿಯಲ್ಲಿಯೂ ಅವರು ಮಾತನಾಡಿದ್ದಾರೆ. ಮೂರು ಸಾವಿರವೋ, ಆರು ಸಾವಿರವೋ ಮಠಗಳಿವೆ ಎಂದು ಹೇಳುವ ಮೂಲಕ ಮಠಾಧೀಶರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ” ಎಂದು ವಿಜಯೇಂದ್ರ ಆರೋಪಿಸಿದರು. ʼʼಜನರು ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಮ್ಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆʼʼ ಎಂದು ಅವರು ಹೇಳಿದರು.
2028ಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ: ವಿಜಯೇಂದ್ರ
ಜನರೊಂದಿಗೆ ಸೇರಿ ಬದಲಾವಣೆಗೆ ಸಂಕಲ್ಪ
ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ ವಿಜಯೇಂದ್ರ, ಬಡವರು ಮತ್ತು ರೈತರ ಪರವಾಗಿ ಬಿಜೆಪಿ ನಿರಂತರವಾಗಿ ಧ್ವನಿ ಎತ್ತಲಿದೆ ಎಂದರು. “ಈ ಸರ್ಕಾರವನ್ನು ಬದಲಾಯಿಸಬೇಕು ಎಂಬ ಸಂಕಲ್ಪವನ್ನು ನಾವು ಮತ್ತು ಜನರು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಸಂಘಟನೆ ಹಾಗೂ ಜನರೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತೇವೆ” ಎಂದು ವಿಜಯೇಂದ್ರ ಹೇಳಿದರು.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.