ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಿದ ನರೇಂದ್ರ ಮೋದಿ: ಸೆಪ್ಟೆಂಬರ್‌ 17ರಿಂದ ಅಕ್ಟೋಬರ್‌ 17ರವರೆಗೆ ಸೇವಾ ಸಂಕಲ್ಪ ಅಭಿಯಾನ

Seva Sankalp Abhiyan: ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಜೀವನದಲ್ಲಿ 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಿದೆ. ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ, ಪ್ರದರ್ಶನಗಳು, ವಿಚಾರ ಸಂಕಿರಣಗಳು ಹಾಗೂ ಜನಕಲ್ಯಾಣ ಯೋಜನೆಗಳ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಮೋದಿ 25 ವರ್ಷಗಳ ಸಾರ್ವಜನಿಕ ಸೇವೆ: ಸೆ. 17ರಿಂದ ‘ಸೇವಾ ಸಂಕಲ್ಪ ಅಭಿಯಾನ’

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -

Profile
Sushmitha Jain Sep 9, 2026 6:27 PM

ನವದೆಹಲಿ, ಸೆ. 9: ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಾರ್ವಜನಿಕ ಜೀವನದಲ್ಲಿ 25 ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (Nitin Nabin) ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ದೇಶಾದ್ಯಂತ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನ (Seva Sankalp Abhiyan) ಹಮ್ಮಿಕೊಳ್ಳುವುದಾಗಿ ಬುಧವಾರ (ಸೆಪ್ಟೆಂಬರ್‌ 9) ಘೋಷಿಸಿದರು.

ನವದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಿತಿನ್ ನಬಿನ್, ''2026ರ ಅಕ್ಟೋಬರ್ 7ರಂದು ಪ್ರಧಾನಿ ಮೋದಿ ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಲಿದ್ದಾರೆ'' ಎಂದು ಹೇಳಿದರು. ʼʼ2001ರ ಅಕ್ಟೋಬರ್ 7ರಂದು ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಅವರ 25 ವರ್ಷಗಳ ಸಾರ್ವಜನಿಕ ಸೇವಾ ಪಯಣ ಆರಂಭವಾಯಿತುʼʼ ಎಂದು ತಿಳಿಸಿದರು.

ಸೇವಾ ಸಂಕಲ್ಪ ಅಭಿಯಾನದ ಬಗ್ಗೆ ಮಾಹಿರಿ ನೀಡಿದ ನಿತಿನ್ ನಬಿನ್:



ʼʼಮೋದಿ ನೇತೃತ್ವದಲ್ಲಿ ಭಾರತವು ‘ನಿರಾಶೆ ಮತ್ತು ಕತ್ತಲೆ’ಯ ವಾತಾವರಣದಿಂದ ಹೊರಬಂದು ಇಂದು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆʼʼ ಎಂದು ನಬಿನ್ ಪ್ರತಿಪಾದಿಸಿದರು. ʼʼ2014ಕ್ಕೂ ಮುನ್ನ ದೇಶದಲ್ಲಿ ನೀತಿ ನಿರ್ಧಾರಗಳ ಸ್ಥಗಿತದ ಪರಿಸ್ಥಿತಿ ಇತ್ತು ಹಾಗೂ ಭಾರತವನ್ನು ‘ಫ್ರ್ಯಾಜೈಲ್ ಫೈವ್’ ಆರ್ಥಿಕತೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದು ಭಾರತದ ಜಾಗತಿಕ ಸ್ಥಾನಮಾನ ಗಣನೀಯವಾಗಿ ಹೆಚ್ಚಿದೆʼʼ ಎಂದು ಅವರು ಬಣ್ಣಿಸಿದರು.

ʼʼದೇಶದ ಯುವಕರಲ್ಲಿ ನಿರಾಶೆಯ ಬದಲು ಭರವಸೆ ಮತ್ತು ಆಶಾವಾದ ಮೂಡಿಸುವ ನಿಟ್ಟಿನಲ್ಲಿ 2014ರಿಂದ ಪ್ರಧಾನಿ ಮೋದಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಸ್ಟಾರ್ಟ್‌ಅಪ್‌ಗಳು ಮತ್ತು ಯೂನಿಕಾರ್ನ್‌ಗಳ ಮೂಲಕ ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್‌ ರಾಷ್ಟ್ರವಾಗಿದೆ. ಯುವಕರು ಉದ್ಯೋಗ ಹುಡುಕುವವರಷ್ಟೇ ಅಲ್ಲದೆ ಉದ್ಯೋಗ ಸೃಷ್ಟಿಸುವವರಾಗುತ್ತಿದ್ದಾರೆʼʼ ಎಂದು ಅವರು ಹೇಳಿದರು.

ʼʼಕ್ರೀಡಾ ಕ್ಷೇತ್ರದಲ್ಲೂ ಬದಲಾವಣೆ ಕಂಡುಬಂದಿದ್ದು, ‘ಖೇಲೋ ಇಂಡಿಯಾ’ ಮತ್ತು ‘ಫಿಟ್ ಇಂಡಿಯಾ’ದಂತಹ ಕಾರ್ಯಕ್ರಮಗಳ ಮೂಲಕ ಯುವಕರಿಗೆ ಹೆಚ್ಚಿನ ಅವಕಾಶಗಳು ದೊರೆತಿವೆ. ‘ಬೇಟಿ ಬಚಾವೋ–ಬೇಟಿ ಪಢಾವೋ’ದಿಂದ ‘ಲಖ್ಪತಿ ದೀದಿ’ವರೆಗೆ ಮಹಿಳಾ ನೇತೃತ್ವದ ಅಭಿವೃದ್ಧಿಯ ಪಯಣ ಮುಂದುವರಿದಿದೆ. ‘ನಾರಿ ಶಕ್ತಿ ವಂದನ್ ಅಧಿನಿಯಮ’ದ ಮೂಲಕ ಮಹಿಳೆಯರ ರಾಜಕೀಯ ಹಾಗೂ ನೀತಿ ನಿರ್ಧಾರಗಳಲ್ಲಿ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆʼʼ ಎಂದು ನಬಿನ್ ತಿಳಿಸಿದರು.

ಪ್ರಧಾನಿ ಕಚೇರಿಯ ನಕಲಿ ಐಡಿ, ಬಂದೂಕು ಹೊಂದಿದ್ದ ಇಬ್ಬರ ಬಂಧನ

ʼʼಗಡಿ ಪ್ರದೇಶಗಳಲ್ಲಿನ ಗ್ರಾಮಗಳನ್ನು ಈ ಹಿಂದೆ ಭಾರತದ ‘ಕೊನೆಯ ಗ್ರಾಮಗಳು’ ಎಂದು ಕರೆಯಲಾಗುತ್ತಿತ್ತು. ಇದೀಗ ಅವುಗಳನ್ನು ‘ಮೊದಲ ಗ್ರಾಮಗಳು’ ಎಂದು ಕರೆಯುವ ಮೂಲಕ ಅಲ್ಲಿನ ಜನರ ಬಗ್ಗೆ ಇರುವ ದೃಷ್ಟಿಕೋನವೇ ಬದಲಾಗಿದೆ. ಮೋದಿ ಅವರ ಅಭಿವೃದ್ಧಿ ಪಯಣ ಗುಜರಾತ್‌ನಿಂದಲೇ ಆರಂಭವಾಗಿದ್ದು, ನರ್ಮದಾ ಯೋಜನೆ ಹಾಗೂ ‘ವೈಬ್ರಂಟ್ ಗುಜರಾತ್’ ಮೂಲಕ ರಾಜ್ಯವನ್ನು ಹೂಡಿಕೆ ಮತ್ತು ಅಭಿವೃದ್ಧಿಯ ಪ್ರಮುಖ ಕೇಂದ್ರವನ್ನಾಗಿ ರೂಪಿಸಲಾಯಿತುʼʼ ಎಂದು ಅವರು ಹೇಳಿದರು.

ʼʼನಕ್ಸಲಿಸಂ ನಿರ್ಮೂಲನೆ ಸೇರಿ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ಮೋದಿ ಅವರ ಆಡಳಿತದಲ್ಲಿ ಅಭಿವೃದ್ಧಿ ಕೇವಲ ಭೌತಿಕ ಪ್ರಗತಿಗೆ ಸೀಮಿತವಾಗಿಲ್ಲ. ದೇಶದ ಸಾಂಸ್ಕೃತಿಕ ಗುರುತು ಮತ್ತು ಪರಂಪರೆಯ ಸಂರಕ್ಷಣೆಯೂ ನಡೆದಿದೆʼʼ ಎಂದು ಹೇಳಿದರು. ʼʼರಾಮಮಂದಿರದಿಂದ ಕಾಶಿ ವಿಶ್ವನಾಥ ಧಾಮದವರೆಗೆ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಅಭಿವೃದ್ಧಿಪಡಿಸುವ ಕೆಲಸ ನಡೆದಿದೆʼʼ ಎಂದರು.

ʼʼಸಾಮಾನ್ಯ ಪಕ್ಷದ ಕಾರ್ಯಕರ್ತನಾಗಿ ಆರಂಭಗೊಂಡ ಮೋದಿ ಅವರ ಪಯಣ ಇಂದು ದೇಶದ ‘ಪ್ರಧಾನ ಸೇವಕ’ ಸ್ಥಾನಕ್ಕೆ ತಲುಪಿದೆ. ಅವರ ಸ್ಪಷ್ಟ ದೃಷ್ಟಿಕೋನ, ದೃಢ ಸಂಕಲ್ಪ ಮತ್ತು ನಿರಂತರ ಪ್ರಯತ್ನಗಳು ಈ ಬದಲಾವಣೆಗೆ ಕಾರಣʼʼ ಎಂದು ನಬಿನ್ ವಿವರಿಸಿದರು.

ಸೆ. 17ರಿಂದ ವಿವಿಧ ಕಾರ್ಯಕ್ರಮಗಳು

ʼʼಸೆಪ್ಟೆಂಬರ್ 17ರಂದು ಮೋದಿ ಅವರ ಜನ್ಮದಿನದ ಅಂಗವಾಗಿ ‘ಸೇವಾ ದಿವಸ್’ ಆಚರಿಸಲಾಗುತ್ತಿದ್ದು, ಇದೇ ದಿನ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ ನೀಡಲಾಗುತ್ತದೆ. ಅಂದು ರಕ್ತದಾನ ಶಿಬಿರ ಸೇರಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ‘ಆಶೀರ್ವಾದದ ಬತ್ತಿ’ ಅಭಿಯಾನ ನಡೆಯಲಿದೆ. ಅಕ್ಟೋಬರ್ 2ರಂದು ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆʼʼ ಎಂದು ಹೇಳಿದರು.

ʼʼಪ್ರಧಾನಿ ಮೋದಿ ಅವರ 25 ವರ್ಷಗಳ ರಾಜಕೀಯ ಹಾಗೂ ಆಡಳಿತಾತ್ಮಕ ಪಯಣವನ್ನು ಪರಿಚಯಿಸುವ ಫೋಟೊ ಮತ್ತು ಡಿಜಿಟಲ್ ಪ್ರದರ್ಶನಗಳು, ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ಅಂತ್ಯೋದಯ ಕುರಿತ ವಿಚಾರ ಸಂಕಿರಣಗಳು, ಯುವಕರೊಂದಿಗೆ ಸಂವಾದ ಹಾಗೂ ವಿವಿಧ ಸಮುದಾಯಗಳಿಗಾಗಿ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಜನಕಲ್ಯಾಣ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ವಿಶೇಷ ಶಿಬಿರಗಳನ್ನೂ ನಡೆಸಲಾಗುತ್ತದೆʼʼ ಎಂದರು.

ಈ ಅಭಿಯಾನದ ರಾಷ್ಟ್ರೀಯ ಸಂಚಾಲಕರಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಅವರನ್ನು ನೇಮಿಸಲಾಗಿದೆ. ಪ್ರತಿ ರಾಜ್ಯದಲ್ಲೂ ಸಚಿವರು, ಸಂಘಟನಾ ಪ್ರಧಾನ ಕಾರ್ಯದರ್ಶಿ ಹಾಗೂ ಐವರು ಹಿರಿಯ ನಾಯಕರನ್ನೊಳಗೊಂಡ ಏಳು ಸದಸ್ಯರ ತಂಡವನ್ನು ರಚಿಸಿ ಕಾರ್ಯಕ್ರಮಗಳನ್ನು ಸಂಯೋಜಿಸಲಾಗುತ್ತದೆ.

ನರೇಂದ್ರ ಮೋದಿ 2001ರ ಅಕ್ಟೋಬರ್ 7ರಂದು ಗುಜರಾತ್‌ನ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸುಮಾರು 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಬಳಿಕ 2014ರಲ್ಲಿ ರಾಷ್ಟ್ರೀಯ ರಾಜಕೀಯಕ್ಕೆ ಪ್ರವೇಶಿಸಿ ಪ್ರಧಾನಮಂತ್ರಿಯಾದರು.