ತುಮಕೂರು: ಬೀದಿ ನಾಯಿಯೊಂದು (Stray dog) ಮಾನವನ ಕೈ ತುಂಡು ಹಿಡಿದುಕೊಂಡು ಓಡಾಡುತ್ತಿದ್ದ ಭಯಾನಕ ಘಟನೆ ಕರ್ನಾಟಕ ಗೃಹ ಸಚಿವ ಜಿ. ಪರಮೇಶ್ವರ ಅವರ ವಿಧಾನಸಭಾ ಕ್ಷೇತ್ರವಾದ (Karnataka Home Minister G Parameshwara) ತುಮಕೂರು (Tumakur) ಜಿಲ್ಲೆಯ ಚಿಂಪಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ದಾರಿ ಹೋಕರೊಬ್ಬರು ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಸುಮಾರು 3 ಕಿ.ಮೀ. ದೂರದಲ್ಲಿ ಸತ್ತ ಮನುಷ್ಯನ ದೇಹದ ಇತರ ಭಾಗಗಳು ಪತ್ತೆಯಾಗಿದೆ. ಮೃತದೇಹದ ತಲೆ ಇನ್ನೂ ಕಂಡುಬಂದಿಲ್ಲ. ಇದು ಗ್ರಾಮದಲ್ಲಿ ಭಾರಿ ಆತಂಕವನ್ನು ಉಂಟು ಮಾಡಿದೆ.
ತುಮಕೂರು ಜಿಲ್ಲೆಯನ್ನೇ ಈ ಘಟನೆ ಬೆಚ್ಚಿಬೀಳಿಸಿದೆ. ಗುರುವಾರ ಬೆಳಗ್ಗೆ ಬೀದಿ ನಾಯಿಯೊಂದು ಕತ್ತರಿಸಿದ ಮಾನವ ಕೈಯನ್ನು ಬಾಯಲ್ಲಿ ಹಿಡಿದುಕೊಂಡು ಪೊದೆಗಳಿಂದ ಹೊರ ಬರುತ್ತಿರುವುದನ್ನು ದಾರಿ ಹೋಕರೊಬ್ಬರು ನೋಡಿದ್ದರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದವು. ಹಲವು ಗಂಟೆಗಳ ಬಳಿಕ ಸುಮಾರು 3 ಕಿ.ಮೀ. ದೂರದಲ್ಲಿ ಬಹುತೇಕ ಕೊಳೆತ ಸ್ಥಿತಿಯಲ್ಲಿ ಮಾನವನ ದೇಹದ ಅವಶೇಷಗಳು ಕಂಡು ಬಂದಿವೆ. ಇದರಲ್ಲಿ ಎರಡು ಕೈಗಳು, ಎರಡು ಅಂಗೈಗಳು, ಒಂದು ದೊಡ್ಡ ಮಾಂಸದ ತುಂಡು ಮತ್ತು ಕರುಳಿನ ಭಾಗಗಳು ಇದ್ದವು. ದೇಹದ ಬಹುತೇಕ ಭಾಗಗಳು ಕೊಳೆಯಲಾರಂಭಿಸಿದ್ದು, ವಿಲೇವಾರಿ ಸಮಯ ಮತ್ತು ವಿಧಾನದ ಬಗ್ಗೆ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ.
ದೇಹದ ಬಹುತೇಕ ಭಾಗ ಪತ್ತೆಯಾದರೂ ತಲೆ ನಾಪತ್ತೆಯಾಗಿದೆ. ಹೀಗಾಗಿ ಗುರುತು ಪತ್ತೆಯು ಕಷ್ಟವಾಗಿದೆ. ಪೊಲೀಸರು ಸುತ್ತಮುತ್ತ ಸಾಕಷ್ಟು ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗಿಲ್ಲ. ಶವವು ಮಹಿಳೆಯದ್ದು ಎಂದು ಪೊಲೀಸರು ತಿಳಿಸಿದ್ದು, ಇದನ್ನು ದೃಢಪಡಿಸಲು ಮೂಳೆಗಳು ಮತ್ತು ಅಂಗಾಂಶ ಮಾದರಿಗಳ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕಿದೆ. ಅಲ್ಲಿಂದ ವರದಿ ಬಂದ ಬಳಿಕವೇ ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ.
ಸ್ಥಳಕ್ಕೆ ಬೆಂಗಳೂರಿನಿಂದ ವಿಧಿವಿಜ್ಞಾನ ತಂಡ ಮತ್ತು ಶ್ವಾನ ದಳವನ್ನು ಕರೆಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಸುತ್ತಮುತ್ತಲಿನ ಪ್ರದೇಶವನ್ನು ಶೋಧಿಸುತ್ತಿದ್ದಾರೆ. ಪ್ರಕರಣದ ಕುರಿತು ಬೆಂಗಳೂರು, ತುಮಕೂರು, ರಾಮನಗರ ಮತ್ತು ಚಿಕ್ಕಬಳ್ಳಾಪುರದ ನಿಯಂತ್ರಣ ಕೊಠಡಿಗಳಿಗೆ ಪೊಲೀಸರು ಎಚ್ಚರಿಕೆ ಸಂದೇಶವನ್ನು ಕಳುಹಿಸಿದ್ದಾರೆ. ಇತ್ತೀಚಿನ ನಾಪತ್ತೆ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: Election Commission of India: ಮತಗಳ್ಳತನ ಆರೋಪ ಸಾಬೀತಾಗದಿದ್ದರೆ ಕ್ಷಮೆಯಾಚಿಸಿ; ರಾಹುಲ್ ಗಾಂಧಿಗೆ ಚುನಾವಣಾ ಆಯೋಗದ ಸವಾಲು
ಇದನ್ನು ತುಂಬಾ ಗಂಭೀರ ಪ್ರಕರಣವೆಂದು ಪರಿಗಣಿಸಲಾಗಿದೆ. ಮೃತರ ತಲೆ ಅಥವಾ ಗುರುತಿಸಬಹುದಾದ ಇತರ ಯಾವುದೇ ಅಂಶ ಪತ್ತೆಯಾಗುವವರೆಗೆ ಇತ್ತೀಚಿನ ಪ್ರತಿಯೊಂದು ನಾಪತ್ತೆ ಪ್ರಕರಣವನ್ನು ಪರಿಗಣಿಸಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.