#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Lake encroachment: ಕೆರೆಗಳ ಒತ್ತುವರಿ ತೆರವುಗೊಳಿಸಿ; ತುಮಕೂರು ಡಿಸಿ ಶುಭ ಕಲ್ಯಾಣ್ ಸೂಚನೆ

Lake encroachment: ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಕೆರೆಗಳನ್ನು ಸಂರಕ್ಷಿಸುವ ಯೋಜನೆಗಳನ್ನು ಕೈಗೊಳ್ಳುಬೇಕು. ಕೆರೆಗಳ ಅತಿಕ್ರಮಣ ಅಥವಾ ಒತ್ತುವರಿ ಮಾಡಿದವರಿಗೆ ನೋಟಿಸ್ ನೀಡಿ ಒತ್ತುವರಿಯನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತುಮಕೂರು ಜಿಲ್ಲಾಧಿಕಾರಿ ಸೂಚಿಸಿದರು.

ಕೆರೆಗಳ ಒತ್ತುವರಿ ತೆರವುಗೊಳಿಸಿ; ತುಮಕೂರು ಡಿಸಿ ಶುಭ ಕಲ್ಯಾಣ್ ಸೂಚನೆ

Profile Prabhakara R Feb 11, 2025 10:26 PM

ತುಮಕೂರು: ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಗುರುತಿಸಿ ಮಾರ್ಚ್ 31ರೊಳಗಾಗಿ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಪಡಿಸುವ ಕುರಿತ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಕೆರೆಗಳನ್ನು ಸಂರಕ್ಷಿಸುವ ಯೋಜನೆಗಳನ್ನು ಕೈಗೊಳ್ಳುಬೇಕು. ಕೆರೆಗಳ ಅತಿಕ್ರಮಣ ಅಥವಾ ಒತ್ತುವರಿ ಮಾಡಿದವರಿಗೆ ನೋಟಿಸ್ ನೀಡಿ ಒತ್ತುವರಿಯನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು. ಕೈಗಾರಿಕೆಗಳು ಮತ್ತು ಜನವಸತಿ ಪ್ರದೇಶಗಳಿಂದ ಹರಿಯುವ ತ್ಯಾಜ್ಯ ಮತ್ತು ಮಲಿನಗೊಂಡ ನೀರು ಕೆರೆಗಳಿಗೆ ಸೇರಿ ಮಲಿನವಾಗದಂತೆ ಅಗತ್ಯ ಮುನ್ಸೂಚನೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಇಲಾಖೆ, ಅರಣ್ಯ ಇಲಾಖೆ ಮುಂತಾದ ಇಲಾಖೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 2061 ಕೆರೆಗಳಿದ್ದು, ಅದರಲ್ಲಿ 874 ಕೆರೆಗಳು ಒತ್ತುವರಿಯಿಂದ ಮುಕ್ತಗೊಂಡಿವೆ. ಒತ್ತುವರಿ ಗುರುತಿಸಿರುವ ಕೆರೆಗಳನ್ನು ತೆರವುಗೊಳಿಸಲು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಕೆರೆಗಳನ್ನು ಸಂರಕ್ಷಿಸುವಲ್ಲಿ ರೈತರ ಪಾತ್ರ ಮಹತ್ವದ್ದು. ಹಾಗಾಗಿ ಕೆರೆಗಳ ಒತ್ತುವರಿ ತೆರವಿಗಾಗಿ ರೈತರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಸಭೆಯ ಮೂಲಕ ಮನವಿ ಮಾಡಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನೂ ಓದಿ | Fire Accident: ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ; ಹಸು ಸಜೀವ ದಹನ, ರೈತನಿಗೆ ಗಾಯ

ಗಣಿ ಬಾಧಿತ ಕುಟುಂಬಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ

DC meeting

ತುಮಕೂರು: ಗಣಿಬಾಧಿತ ಕುಟುಂಬಗಳಿಗೆ ಆದ್ಯತೆ ಮೇರೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ(ಕೆಎಂಇಆರ್‌ಸಿ)ದ ವ್ಯವಸ್ಥಾಪಕ ನಿರ್ದೇಶಕ ಡಾ: ಸಂಜಯ್ ಎಸ್. ಬಿಜ್ಜೂರ್ ಸೂಚಿಸಿದರು.

ಜಿಲ್ಲಾಧಿಕಾರಿಯ ಕಚೇರಿಯಲ್ಲಿ ನಡೆದ ಕೆಎಂಇಆರ್‌ಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಹಲವಾರು ಕುಟುಂಬಗಳಿಗೆ ತೊಂದರೆಯುಂಟಾಗುತ್ತಿದ್ದು, ಗಣಿಬಾಧಿತ ಕುಟುಂಬಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸರ್ಕಾರವು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಮೂಲಕ ರಾಜ್ಯದ ಗಣಿಬಾಧಿತ ಪ್ರದೇಶಗಳಲ್ಲಿ ಪರಿಸರ ಪುನಶ್ಚೇತನ ಮತ್ತು ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಸಮಗ್ರ ಪರಿಸರ ಯೋಜನೆ ಮತ್ತು ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಯೋಜನೆಯು ಪ್ರಮುಖವಾಗಿದ್ದು, ಈ ಯೋಜನೆಯಡಿ ಗಣಿಬಾಧಿತ ಪ್ರದೇಶಗಳಲ್ಲಿ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಜನರ ಜೀವನ ಮಟ್ಟದ ಸುಧಾರಣೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಗಣಿಬಾಧಿತ ಯೋಜನೆಗಳನ್ನು ಕಲ್ಪಿಸಬೇಕು. ಗಣಿಬಾಧಿತ ಪ್ರದೇಶಗಳಲ್ಲಿ ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಜಿಲ್ಲೆಯ ಗಣಿಬಾಧಿತ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಹಾಗೂ ವೈಯಕ್ತಿಕ ಸೌಲಭ್ಯ ಒದಗಿಸುವ ಕಾರ್ಯಕ್ರಮಗಳಿಗೆ 2500 ಕೋಟಿ ರೂ. ನಿಗದಿಯಾಗಿದ್ದು, ಇದುವರೆಗೆ ನಿಗಮದಿಂದ 1500 ಕೋಟಿ ರೂ.ಗಳ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಜಿಲ್ಲೆಯ ಗಣಿಬಾಧಿತ ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ ಸೇರಿದಂತೆ ಗಣಿಬಾಧಿತ ತಾಲೂಕುಗಳಿಗೆ ಪರಿಸರ ಪುನಶ್ಚೇತನ, ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಗಣಿಬಾಧಿತ ತಾಲೂಕುಗಳಲ್ಲಿರುವ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದರೊಂದಿಗೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕೆಂದು ಸೂಚನೆ ನೀಡಿದರು.

ಈ ಸುದ್ದಿಯನ್ನೂ ಓದಿ | Murder Case: ಪ್ರೇಯಸಿ ಕೊಂದ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಲೋಕೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಮತ್ತಿತರರ ಅಧಿಕಾರಿಗಳು ಹಾಜರಿದ್ದರು.