ತುಮಕೂರು, ಏ.10: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಯುವಜನರು ಹಾಗೂ ಮಹಿಳೆಯರು ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಪ್ರದೇಶದಲ್ಲಿ ದುಡಿಮೆಗೆ ಅವಕಾಶ ಕಲ್ಪಿಸಲು ಗ್ರಾಮ ನೆಟ್ ಭಾರತ 2030 (Gram Net Bharat 2030 Scheme) ರೂಪುಗೊಂಡಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಯೋಜನೆಗೆ ಮೇ ತಿಂಗಳ ಮೊದಲ ವಾರದಲ್ಲಿ ತುರುವೇಕೆರೆ ತಾಲೂಕಿನ ಸಂಪಿಗೆ ಗ್ರಾಮದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಲೋಕಸೇವಾ ಫೌಂಡೇಷನ್ ಅಧ್ಯಕ್ಷ ಸಂಪಿಗೆ ಜಗದೀಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಸಂಪಿಗೆ ಗ್ರಾಮದಲ್ಲಿ ಉದ್ಘಾಟನೆಯಾದ ನಂತರ ರಾಜ್ಯದ ವಿವಿಧೆಡೆ ವಿಸ್ತರಿಸಲಾಗುವುದು. ಕೇಂದ್ರ ಸಚಿವರಾದ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದ ಡಾ. ಮಂಜುನಾಥ್ ಹಾಗೂ ವಿವಿಧ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಪ್ರತಿಭೆ ಇರುವ ಯುವಜನರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ, ಅವರಿಗೆ ಸೂಕ್ತ ಉದ್ಯೋಗಾವಕಾಶಗಳು ಲಭ್ಯವಾಗುತ್ತಿಲ್ಲ. ಅದರ ಪರಿಣಾಮವಾಗಿ ನಗರಗಳಿಗೆ ವಲಸೆ ಹೆಚ್ಚುತ್ತಿದೆ. ನಿರುದ್ಯೋಗ ಸಮಸ್ಯೆ, ವಲಸೆಯಿಂದ ಗ್ರಾಮೀಣ ಆರ್ಥಿಕತೆ ದುರ್ಬಲವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಗ್ರಾಮ-ನೆಟ್ ಭಾರತ 2030 ರೂಪುಗೊಂಡಿದೆ. ಉದ್ಯೋಗವನ್ನು ನಗರಗಳಿಂದ ಗ್ರಾಮಗಳಿಗೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಟಿ, ಖಚಿತ ಆದಾಯದ ವ್ಯವಸ್ಥೆ, ಮಹಿಳೆಯರಿಗೆ ಮನೆಯಲ್ಲೇ ಉದ್ಯೋಗ, ಡಿಜಿಟಲ್ ಕೌಶಲ್ಯ ಅಭಿವೃದ್ಧಿ, ಸ್ವಾವಲಂಬಿ ಗ್ರಾಮ ನಿರ್ಮಾಣ ಈ ಯೋಜನೆಯ ಗುರಿಯಾಗಿದೆ. ಈ ಯೋಜನೆಯನ್ನು ಲೋಕಸೇವಾ ಫೌಂಡೇಷನ್, ಆರ್ಕೆಲೋಸ್ ಇಂಟೆಲೈನ್ಸ್ ಟೆಕ್ನಾಲಜೀಸ್ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿದೆ. ಲೋಕಸೇವಾ ಫೌಂಡೇಶನ್ ಗ್ರಾಮ ಮಟ್ಟದಲ್ಲಿ ಜನರನ್ನು ಸಂಪರ್ಕಿಸುವುದು, ನೋಂದಣಿ ಮತ್ತು ಜಾಗೃತಿ ಮೂಡಿಸುವುದು. ಆರ್ಕೆಲೋಸ್ ಇಂಟೆಲೈನ್ಸ್ ಟೆಕ್ನಾಲಜೀಸ್ ಡಿಜಿಟಲ್ ಪ್ಲಾಟ್‌ಫಾರ್ಮ್ ಒದಗಿಸುವುದು ಎಂದರು.
ಮಾಜಿ ಸಚಿವ, ಲೋಕಸೇವಾ ಫೌಂಡೇಶನ್ ಗೌರವಾಧ್ಯಕ್ಷ ಸೊಗಡು ಶಿವಣ್ಣ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಜನರು, ಮಹಿಳೆಯರಿಗೆ ಈ ಯೋಜನೆ ವರದಾನವಾಗಿದೆ. ಮನೆಯಿಂದಲೇ ಆದಾಯ ಗಳಿಸಬಹುದಾಗಿದೆ. ಈ ಕಾರ್ಯಕ್ರಮ ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ನಿರುದ್ಯೋಗ ಸಮಸ್ಯೆ ನಿಯಂತ್ರಣವಾಗಿ ಗ್ರಾಮೀಣ ಜನರಲ್ಲಿ ಆರ್ಥಿಕ ಸ್ವಾವಲಂಬನೆ ಹೆಚ್ಚುತ್ತದೆ ಎಂದರು.
ಅರ್ಕ್ಯಾಲೋಸ್ ಇಂಟೇನ್ಸ್ ಟೆಕ್ನಾಲಜೀಸ್‌ನ ಸಿಇಒ ಎಸ್.ಜೆ. ವಿಶ್ವನಾಥ್ ಮಾತನಾಡಿ, 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಥವಾ ಸ್ಥಳೀಯ ಕೇಂದ್ರಗಳಲ್ಲಿ ನೋಂದಣಿ ಮಾಡುಬೇಕು. ಅವರಿಗೆ ಸರಳ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ: ಇದು ಕೇವಲ ಯೋಜನೆ ಅಲ್ಲ, ಒಂದು ವ್ಯವಸ್ಥಿತ ಉದ್ಯೋಗ ಮಾದರಿ. ಯೋಜನೆಯಿಂದ ಜನರಿಗೆ ಹಲವು ರೀತಿಯ ಲಾಭಗಳಿವೆ. ಮನೆಯಲ್ಲೇ ಉದ್ಯೋಗ, ಮಹಿಳೆಯರಿಗೆ ಹೆಚ್ಚು ಅವಕಾಶ, ಯುವಕರಿಗೆ ಡಿಜಿಟಲ್ ಕೌಶಲ್ಯ, ಸ್ಥಿರ ಆದಾಯದ ಸಾಧ್ಯತೆ, ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆ ಸಾಧ್ಯವಾಗುತ್ತದೆ ಎಂದರು.
ಲೋಕಸೇವಾ ಫೌಂಡೇಶನ್ ಟ್ರಸ್ಟಿಗಳಾದ ರಾಮಕೃಷ್ಣ, ಡಾ.ಆರ್. ಮಂಜುನಾಥ್, ಎಸ್.ಆರ್. ಲೀಲಾವತಿ, ಅಪೂರ್ವ ಅರುಣ್‌ಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ. ಮಹೇಶ್ ಹಾಗೂ ಇತರರು ಹಾಜರಿದ್ದರು.