ತುಮಕೂರು, ಜ.9: ರಾಜ್ಯದಾದ್ಯಂತ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರಿಗೆ ಅಂಬೇಡ್ಕರ್ ಅಭಿವೃದ್ದಿ ನಿಗಮದಲ್ಲಿ ಹೆಚ್ಚಳ ಮಾಡಿರುವಂತೆ ಎಲ್ಲಾ ಇಲಾಖೆಗಳಲ್ಲೂ ಕನಿಷ್ಠ ವೇತನ ನೀಡಬೇಕು ಎಂದು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸುಧಾಕರ್ ಒತ್ತಾಯಿಸಿದರು. ನಗರದ (Tumkur News) ಖಾಸಗಿ ಹೋಟೆಲ್‌ನಲ್ಲಿ ಸಂಘದ ತುಮಕೂರು ಜಿಲ್ಲಾ ಘಟಕ ಉದ್ಘಾಟನೆ ಸಂಬಂಧ ನಡೆದ ಪೂರ್ವ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ಇಲಾಖೆಗಳಲ್ಲಿ ಹೊರ ಗುತ್ತಿಗೆ ನೌಕರರಿಗೆ ನೀಡುತ್ತಿರುವ ವೇತನ ಸಾಕಾಗುತ್ತಿಲ್ಲ. ಇದನ್ನು ಮನಗಂಡು ಈಗಾಗಲೇ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಹೊರ ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಹೆಚ್ಚಳ ಮಾಡಿಸಲಾಗಿದೆ. ಇನ್ನೆರಡು ದಿನದಲ್ಲಿ ಈ ಆದೇಶ ಹೊರ ಬೀಳಲಿದ್ದು, ಎಲ್ಲಾ ಸರ್ಕಾರಿ ಇಲಾಖೆಗಳಿಗೂ ಈ ಆದೇಶ ಪತ್ರ ನೀಡಿ ಹೊರ ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನೀಡಬೇಕು ಎಂದು ಮನವಿ ಮಾಡಲಾಗುವುದು ಎಂದರು.
ಸರ್ಕಾರ ಸುಮಾರು ಇಲಾಖೆಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುವ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರ ಸಂಘ ರಚನೆ ಮಾಡುವ ಸಂದರ್ಭದಲ್ಲೂ ಈಗ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಮರುಗೇಶ ಮಾತನಾಡಿ, ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರಿಗೆ 1 ಲಕ್ಷ ಅಪಘಾತ ವಿಮೆ ನೀಡಬೇಕು. ಸಂಘದ ಪ್ರತಿ ಸದಸ್ಯರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯಾದ್ಯಂತ ಸಂಘಟನೆ ಮಾಡಲಾಗುತ್ತಿದೆ ಎಂದರು.
ಪಾವಗಡದಲ್ಲಿ ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್, ಡೈರಿ ಬಿಡುಗಡೆಗೊಳಿಸಿದ ಮಾಜಿ ಸಚಿವ ವೆಂಕಟರಮಣಪ್ಪ
ಪ್ರಸ್ತುತ ರಾಜ್ಯ ಸರ್ಕಾರ ರಾಜ್ಯಾದ್ಯಂತ ಕೈಗೊಂಡಿರುವ ಬೀದರ್ ಮಾದರಿ ಸಹಕಾರ ಸಂಘದ ರಚನೆ ಕುರಿತು ಸಂಪುಟ ಉಪ ಸಮಿತಿ ಕೈಗೊಂಡಿರುವ ವರದಿಯಲ್ಲಿ ಕೆಲವು ಶಿಫಾರಸ್ಸುಗಳನ್ನು ಬದಲಾಯಿಸಿ ನೌಕರರ ಹಿತ ಕಾಯುವ ನಿಟ್ಟಿನಲ್ಲಿ ಹಾಲಿ ಕೆಲಸ ಮಾಡುವ ನೌಕರರನ್ನು ಸಂಘದ ಅಡಿಯಲ್ಲಿ ಮುಂದುವರಿಸಬೇಕು ಹಾಗೂ ನೌಕರರು ಅವರ 60 ವರ್ಷ ವಯಸ್ಸಿನವರೆಗೂ ಸದರಿ ಸ್ಥಳದಲ್ಲೇ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು. ಸಭೆಯಲ್ಲಿ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ವಕ್ತಾರ ಸುನೀಲ್, ರಾಜ್ಯ ಸಂಚಾಲಕ ಗಂಗಾಧರ್ ಮತ್ತಿತರರು ಇದ್ದರು.