ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tumkur News: ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ವಿಶ್ವೇಶ್ವರ ಭಟ್‌ ಕರೆ

Vishweshwar Bhat: ತುಮಕೂರು ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಜಿ ಆಡಿಟೋರಿಯಂ ಅನ್ನು ವಿಶ್ವವಾಣಿ ಸಮೂಹ ಸಂಸ್ಥೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ನೀವು ಏನಾಗಬೇಕೆಂಬುದನ್ನು ಇಂದೇ ನಿರ್ಧರಿಸಿ. ಅಚಲ ವಿಶ್ವಾಸದಿಂದ ಗುರಿಯಕಡೆಗೆ ನಡೆದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದ್ದಾರೆ.

ವಿಪುಲ ಅವಕಾಶಗಳಿವೆ ಸದುಪಯೋಗಪಡಿಸಿಕೊಳ್ಳಿ: ವಿಶ್ವೇಶ್ವರ ಭಟ್‌

ತುಮಕೂರಿನ ವಿದ್ಯಾನಿಧಿ ಕಾಲೇಜಿನಲ್ಲಿ ವಿಶ್ವೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು. -

Profile
Siddalinga Swamy Dec 12, 2025 6:23 PM

ತುಮಕೂರು, ಡಿ. 12: ಆಧುನಿಕವಾಗಿ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ ಸದುಪಯೋಗಪಡಿಸಿಕೊಳ್ಳಿ ಎಂದು ವಿಶ್ವವಾಣಿ ಸಮೂಹ ಸಂಸ್ಥೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ (Vishweshwar Bhat) ತಿಳಿಸಿದರು. ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಜಿ ಆಡಿಟೋರಿಯಂ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ನೀವು ಏನಾಗಬೇಕೆಂಬುದನ್ನು ಇಂದೇ ನಿರ್ಧರಿಸಿ. ಅಚಲ ವಿಶ್ವಾಸದಿಂದ ಗುರಿಯಕಡೆಗೆ ನಡೆದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಕಾಲೇಜಿನ ಆಡಿಟೋರಿಯಂ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದಕ್ಕೆ ಇರುವ ಅವಕಾಶ. ಭಾಷಣ, ನೃತ್ಯ, ಕಲೆ, ಸಂಗೀತ ಎಲ್ಲವೂ ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ನಿಮ್ಮೆದುರು ತೆರೆದುಕೊಳ್ಳುವ ಯಾವ ಅವಕಾಶವನ್ನೂ ಕಳೆದುಕೊಳ್ಳಬಾರದು ಎಂದರು.

ಸಾಧ್ಯವಾದಷ್ಟು ಭಾಷೆಗಳನ್ನು ಕಲಿತುಕೊಳ್ಳಿ. ಅಭಿವ್ಯಕ್ತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ. ಜಗತ್ತು ನಿಮ್ಮನ್ನು ಸ್ವೀಕರಿಸುವ ರೀತಿ ಬೇರೆಯದೇ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ‌ ಸಾಧ್ಯವಾದಷ್ಟೂ ದೇಶ ಸುತ್ತುವುದನ್ನು ಕೋಶ ಓದುವುದನ್ನು ರೂಢಿಸಿಕೊಳ್ಳಿ, ಅದರಿಂದ ಜ್ಞಾನ ಮತ್ತು ಅನುಭವಗಳೆರಡೂ ವಿಸ್ತಾರಗೊಳ್ಳುತ್ತವೆ. ಮೊಬೈಲ್‌ ಬಳಕೆಯು ಧನಾತ್ಮಕವಾಗಿದ್ದಲ್ಲಿ ನಿಮಗೆ ಇಡೀ ಜಗತ್ತನ್ನು ಪರಿಚಯಿಸಬಲ್ಲದು ಎಂದು ಹೇಳಿದರು.

ವಿಶ್ವೇಶ್ವರ ಭಟ್‌ ಅವರ ಪುಸ್ತಕ 'ಬದುಕುಳಿದವರು ಕಂಡಂತೆʼ ಬಿಡುಗಡೆ

ಕ್ರಮಬದ್ಧವಾದ ಸಮಯ ಹಂಚಿಕೆಯ ಮೂಲಕ ಶಬ್ದ ಭಂಡಾರವನ್ನು ಹೆಚ್ಚಿಸುವುದು, ಇ-ಪುಸ್ತಕಗಳನ್ನು ಓದುವುದು, ಕೃತಕ ಬುದ್ಧಿಮತ್ತೆಯ ಹೊಸ ಸಾಧ್ಯಗಳನ್ನು ಅನ್ವೇಷಿಸುವುದನ್ನು ಅಭ್ಯಾಸ ಮಾಡಿಕೊಂಡರೆ ಪ್ರತಿದಿನವೂ ಕೂಡಾ ಅರ್ಥಪೂರ್ಣವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇಂದಿನ ವಿದ್ಯಾರ್ಥಿಗಳಿಗೆ ಹೊಸತೊಂದು ಲೋಕವೇ ಸೃಷ್ಟಿಯಾಗಿದೆ. ನೀವು ಬದುಕುತ್ತಿರುವ ಯುಗವೇ ಉದ್ವೇಗದಿಂದ, ಸಂಭ್ರಮದಿಂದ ಕೂಡಿರುವಂಥದ್ದು. ಈಜನ್ನು ಹೊರತುಪಡಿಸಿ ಮತ್ತೆಲ್ಲ ಕೌಶಲಗಳನ್ನೂ ಆನ್‌ಲೈನ್‌ ಮೂಲಕ ಕಲಿಯಬಹುದು ಎಂದರು.

ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ. ಪ್ರದೀಪ್‌ ಕುಮಾರ್‌ ಮಾತನಾಡಿ, ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಆಪ್ತವಾಗಿಸುವ ನಿಟ್ಟಿನಲ್ಲಿ ಉನ್ನತ ವ್ಯವಸ್ಥೆಯ ಆಡಿಟೋರಿಯಂ ರೂಪುಗೊಂಡಿದೆ. ಮುಂದಿನ ದಿನಗಳಲ್ಲಿ ಕೌಶಲ ಆಧಾರಿತ ಕಲಿಕೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಲಿದೆ. ವಿದ್ಯಾರ್ಥಿಗಳಲ್ಲಿ ನಿರರ್ಗಳವಾಗಿ ಮಾತನಾಡುವ, ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಿಸುವ ಸಾಮರ್ಥ್ಯ ಹೆಚ್ಚಾಗಬೇಕು. ಅದಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಲು ಈ ಆಡಿಟೋರಿಯಂ ಒದಗಲಿದೆ ಎಂದು ಹೇಳಿದರು.

ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಕೆ.ಬಿ. ಜಯಣ್ಣ, ಉದ್ಯಮಿ ಓಂಕಾರ್‌, ಪ್ರಾಂಶುಪಾಲರಾದ ಸಿದ್ದೇಶ್ವರ ಸ್ವಾಮಿ, ಸುಬ್ರಹ್ಮಣ್ಯ, ಬೋಧಕ, ಬೋಧಕೇತರ ಸಿಬ್ಬಂದಿ, ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಹೇಮಲತಾ ಪ್ರಾರ್ಥಿಸಿ, ಅಕ್ಷತಾ ಸ್ವಾಗತಿಸಿದರು. ಡಾ. ಆರತಿ ಪಟ್ರಮೆ ಕಾರ್ಯಕ್ರಮ ನಿರೂಪಿಸಿದರು.

ವಿಶೇಷ ಸ್ವಾಗತ

ವಿಶೇಷ ಅತಿಥಿಯಾಗಿ ಆಗಮಿಸಿದ್ದ ವಿಶ್ವೇಶ್ವರ ಭಟ್‌ ಅವರನ್ನು ವಿದ್ಯಾನಿಧಿ ಕಾಲೇಜಿನ ಎನ್.ಸಿ.ಸಿ. ಘಟಕದಿಂದ ವಿಶೇಷವಾಗಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ನೃತ್ಯ ಪ್ರದರ್ಶಿಸಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್‌ ಅವರ ಜೀವನ ಸಾಧನೆಯ ವಿಡಿಯೊ ಪ್ರಸಾರ ಮಾಡಲಾಯಿತು. ಕಾಲೇಜಿನ ವತಿಯಿಂದ ವಿಶ್ವೇಶ್ವರ ಭಟ್‌ ಅವರನ್ನು ಅಭಿನಂದಿಸಲಾಯಿತು.

ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರು ನಡೆಸಿದ ಭೀಕರ ನರಮೇಧದ ಬಗ್ಗೆ ಕನ್ನಡಿಗರು ಓದಬೇಕು: ವಿಶ್ವೇಶ್ವರ ಭಟ್‌

ಸೆಲ್ಫಿ ಪಡೆದು ಸಂಭ್ರಮ

ವಿಶ್ವೇಶ್ವರ ಭಟ್‌ ಅವರ ಜತೆ ವಿದ್ಯಾರ್ಥಿಗಳು, ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡು ಸಂಭ್ರಮಪಟ್ಟರು. ಸಾಕಷ್ಟು ಅಭಿಮಾನಿಗಳು ಆಟೋಗ್ರಾಫ್ ಪಡೆದುಕೊಂಡು, ನಿಮ್ಮ ಬರವಣಿಗೆ ನಮಗೆ ಪ್ರೇರಣೆ, ನಿಮ್ಮ ವ್ಯಕ್ತಿತ್ವ ಮಾದರಿ ಎಂದು ಅಭಿಮಾನಿಗಳು ಸಂತಸಪಟ್ಟರು.