ತುಮಕೂರು, ಫೆ.10: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಮಠ ಸಿದ್ದರಬೆಟ್ಟದಲ್ಲಿ ಫೆ.15ರಂದು ವಿಶೇಷ ಜಾಗರಣೆ ಕಾರ್ಯಕ್ರಮ ನೆರವೇರಲಿದೆ ಎಂದು ಶ್ರೀಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಶ್ರೀ ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ತುಮಕೂರು ಜಿಲ್ಲೆಯ (Tumkur News) ಕೊರಟಗೆರೆ ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟ ಶ್ರೀ ಮಠದಲ್ಲಿ ಶಿವರಾತ್ರಿ ಹಬ್ಬದಂದು ವಿಶೇಷ ಜಾಗರಣೆ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುವರು ಎಂದು ತಿಳಿಸಿದರು.
ಜಾಗರಣೆ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಭಕ್ತರಿಗೆ ದಾಸೋಹ ಕಾರ್ಯಕ್ರಮ ಏರ್ಪಡಿಸಲಾಗುವುದು. ಕಾರ್ಯಕ್ರಮದಲ್ಲಿ ನಟರಾದ ಜಗ್ಗೇಶ್, ಡಾಲಿ ಧನಂಜಯ್, ನಿರೂಪಕಿ ಅನುಶ್ರೀ, ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ, ಗಾಯಕರಾದ ಅಂಕಿತ ಕುಂಡು, ಅನುಪಮ ಭಟ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಆಯೋಜಿಸಲು ಪೂರ್ಣ ಸಾರಥ್ಯ ವಹಿಸಿಕೊಂಡಿರುವ ಉದ್ಯಮಿ ನೀಲೇಶ್ ಅವರಿಗೆ ಶ್ರೀಮಠದಿಂದ ಅಭಿನಂದನೆಗಳು ಎಂದು ತಿಳಿಸಿದರು.
ಉದ್ಯಮಿ ನೀಲೇಶ್ ಅವರು ಮಾತನಾಡಿ, ಸಿದ್ದರಬೆಟ್ಟದಲ್ಲಿ ಮಹಾಶಿವರಾತ್ರಿಯ ಜಾಗರಣೆ ಪ್ರಯುಕ್ತ ಜಾನಪದ ನೃತ್ಯ ಸೇರಿ ಅನೇಕ ಮಹತ್ವಪೂರ್ಣ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಚಿಕ್ಕಬಳ್ಳಾಪುರ ಈಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಈ ಜಾಗರಣೆಯಲ್ಲಿ ಶಿವ ಸ್ತುತಿ, ಭಜನೆ ಹಾಡುಗಳು, ಹಾಸ್ಯ ಮತ್ತು ಮನರಂಜನೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
Tumkur News: ಬಾಳಿಗೊಂದು ಗುರಿ ಇರಲಿ: ಶ್ರೀ ರಂಭಾಪುರಿ ಜಗದ್ಗುರು
ಕುಂಚಿಟಿಗ ಮಠದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ಮಾತನಾಡಿ, ನಾವು ಒಂದು ಕಾರ್ಯಕ್ರಮದಲ್ಲಿ ಎಷ್ಟು ಹಣ ಖರ್ಚಾಗುತ್ತದೆ ಎಂದು ಯೋಚಿಸಿ ಕಾರ್ಯಕ್ರಮ ಮಾಡುತ್ತೇವೆ. ಆದರೆ ಉದ್ಯಮಿ ನೀಲೇಶ್ ಈ ಬಗ್ಗೆ ಯೋಚಿಸದೆ ಕಾರ್ಯಕ್ರಮ ಆಯೋಜಿಸಲು ಕೈ ಜೋಡಿಸಿದ್ದಾರೆ.
ಈ ಹಿಂದೆ ಜನರಿಗೆ ದೈವ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಇರುತಿತ್ತು. ಇತ್ತೀಚೆಗೆ ನಮ್ಮ ಜನರ ಭಕ್ತಿ ಸಹ ಕಡಿಮೆ ಆಗುತ್ತಿದೆ. ದುಬೈನಲ್ಲಿ ಉದ್ಯಮ ಮಾಡಿ, ಬಹಳಷ್ಟು ಜನರಿಗೆ ಉದ್ಯೋಗ ನೀಡುವ ಮೂಲಕ ಮತ್ತು ತಾಯ್ನಾಡಿನಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಉದ್ಯಮಿ ನೀಲೇಶ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವರಾತ್ರಿಯಂದು ಶಾಸ್ತ್ರೀಯ ಸಂಗೀತ, ಭಾವಗೀತೆ, ಭಕ್ತಿಗೀತೆ, ಲೇಸರ್ ಶೋ, ಶಿವತಾಂಡವ ಸೇರಿ ಅನೇಕ ಮಹತ್ವಪೂರ್ಣ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದು, ಸುಮಾರು ಹತ್ತು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ.