ತುಮಕೂರು, ಸೆ. 30: ಮಂಗಳವಾರ (ಸೆಪ್ಟೆಂಬರ್ 29) ತಡರಾತ್ರಿ ಸುರಿದ ಭಾರಿ ಮಳೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನಗರದ (Tumkur News) ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಕೇವಲ ಒಂದೇ ದಿನದ ಮಳೆಗೆ ಇಡೀ ಬಸ್ ನಿಲ್ದಾಣದ ಆವರಣದಲ್ಲಿ ಅಪಾರ ಪ್ರಮಾಣದ ನೀರು ಶೇಖರಣೆಯಾಗಿದ್ದು, ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ತೀವ್ರ ಅಡಚಣೆ ಉಂಟಾಯಿತು. ಮೊಣಕಾಲು ಮಟ್ಟದ ಗಲೀಜು ನೀರಿನಲ್ಲೇ ಪ್ರಯಾಣಿಕರು ಮತ್ತು ಸಾರ್ವಜನಿಕರು ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿತ್ತು.
ಅಧಿಕಾರಿಗಳ ನಿರ್ಲಕ್ಷ್ಯ
ಎಂಜಿನಿಯರ್‌ಗಳ ಅವೈಜ್ಞಾನಿಕ ಯೋಜನೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯೇ ಈ ಪ್ರಮುಖ ಸಮಸ್ಯೆಗೆ ಮೂಲ ಕಾರಣ ಎಂದು ಸಾರ್ವಜನಿಕರು ಮತ್ತು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ಖರ್ಚು ಮಾಡಿ ನಿರ್ಮಿಸಿದ ಬಸ್ ನಿಲ್ದಾಣದಲ್ಲಿ ಕನಿಷ್ಠ ಮಳೆನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಮಾಡದಿರುವುದು ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು, "ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಸರ್ಕಾರದ ಅನುದಾನ ಹಾಗೂ ತೆರಿಗೆ ಹಣವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ. ಬಸ್ ನಿಲ್ದಾಣದಲ್ಲಿ ನಿಂತಿರುವ ಮಳೆ ನೀರನ್ನು ತಕ್ಷಣವೇ ಹೊರಹಾಕಲು ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು" ಎಂದು ಜಿಲ್ಲಾಡಳಿತಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ; ಲೈಸನ್ಸ್ ಅಮಾನತು, ದಂಡ ಹೆಚ್ಚಳ
ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯಕ್ಕಾಗಿ ನಿರ್ಮಿಸಿದ ನೂತನ ಬಸ್ ನಿಲ್ದಾಣದಲ್ಲೇ ಈ ರೀತಿಯ ಅವ್ಯವಸ್ಥೆ ಉಂಟಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.