ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸರ್ಕಾರಿ ಶಾಲೆಯಲ್ಲಿ ಕಲಿತದ್ದು ನನ್ನ ಪಾಲಿಗೆ ಎಂದಿಗೂ ಹೆಮ್ಮೆಯ ವಿಷಯ: ನ್ಯಾಯಾಧೀಶ ಜಯಂತ್ ಕುಮಾರ್

Tumkur News: ವೃಕ್ಷಗಳ ಮಾರಣಹೋಮದಿಂದ ಮಳೆ ಕಡಿಮೆಯಾಗಿ ಕುಡಿಯುವ ನೀರಿಗೂ ಅಭಾವ ಎದುರಾಗಿದೆ. ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ನೆಟ್ಟಿರುವ ಸಸಿಗಳನ್ನು ದೈನಂದಿನ ಪಾಲನೆ ಮಾಡುವ ಮೂಲಕ ಬೆಳೆಸಬೇಕು ಎಂದು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಜಯಂತ್ ಕುಮಾರ್ ಕರೆ ನೀಡಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಕಲಿತದ್ದು ಹೆಮ್ಮೆಯ ವಿಷಯ: ನ್ಯಾ. ಜಯಂತ್ ಕುಮಾರ್

-

Profile
Siddalinga Swamy Sep 26, 2026 6:48 PM

ತುಮಕೂರು, ಸೆ.26: ಅಂದಿನ ಕಾಲದಲ್ಲಿ ಶಾಲೆ ಮತ್ತು ಶಿಕ್ಷಕರ ಮೇಲೆ ಅಪಾರ ಗೌರವವಿತ್ತು. ಶಿಕ್ಷಕರ ಮಾರ್ಗದರ್ಶನವೇ ತಾನು ಇಂದು ನ್ಯಾಯಾಧೀಶರಾಗಲು ಮೂಲ ಕಾರಣ ಎಂದು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಜಯಂತ್ ಕುಮಾರ್ ತಿಳಿಸಿದರು.

ನಗರದ ಬಿ.ಎಚ್. ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ಸಸಿ ನೆಡುವ ಕಾರ್ಯಕ್ರಮʼ ಹಾಗೂ ‘ಪೋಕ್ಸೋ ಮತ್ತು ಬಾಲನ್ಯಾಯ ಕಾಯ್ದೆʼ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲಿ ಕಲಿತದ್ದು ನನ್ನ ಪಾಲಿಗೆ ಎಂದಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು.

ವೃಕ್ಷಗಳ ಮಾರಣಹೋಮದಿಂದ ಮಳೆ ಕಡಿಮೆಯಾಗಿ ಕುಡಿಯುವ ನೀರಿಗೂ ಅಭಾವ ಎದುರಾಗಿದೆ. ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ನೆಟ್ಟಿರುವ ಸಸಿಗಳನ್ನು ದೈನಂದಿನ ಪಾಲನೆ ಮಾಡುವ ಮೂಲಕ ಬೆಳೆಸಬೇಕು ಎಂದು ಕರೆ ನೀಡಿದರು.

ಮೊಬೈಲ್ ಹಾಗೂ ಯೂಟ್ಯೂಬ್‌ಗಳಲ್ಲಿ ಜ್ಞಾನದ ಭಂಡಾರವಿದ್ದು, ವಿದ್ಯಾರ್ಥಿಗಳು ತಮಗೆ ಅಗತ್ಯವಿರುವ ಒಳ್ಳೆಯ ವಿಷಯಗಳನ್ನು ಹಾಗೂ ಶಿಕ್ಷಣಕ್ಕೆ ಪೂರಕವಾದ ಅಂಶಗಳನ್ನು ಮಾತ್ರ ಸ್ವೀಕರಿಸಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಲೋಕೇಶ ಧನಪಾಲ್ ಹವಾಲೆ ಮಾತನಾಡಿ, ವಿದ್ಯಾರ್ಥಿಗಳಿಗೆ ಕೇವಲ ಕಾನೂನಿನ ನಿಯಮಗಳನ್ನು ಹೇಳುತ್ತಾ ಹೋದರೆ ಬೇಸರವಾಗಬಹುದು. ಹಾಗಾಗಿ ಪ್ರಶ್ನೋತ್ತರ ಹಾಗೂ ಸಂವಾದದ ಮೂಲಕ ಕಾನೂನನ್ನು ಕಥೆಯ ರೂಪದಲ್ಲಿ ತಿಳಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ತಲುಪುತ್ತದೆ ಎಂದರು.

ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಕೆ.ಎಂ. ರಾಮಕೃಷ್ಣಪ್ಪ ಮಾತನಾಡಿ, ಪ್ರತಿಯೊಬ್ಬ ನಾಗರಿಕರು ಕನಿಷ್ಠ ಕಾನೂನು ಜ್ಞಾನ ಹೊಂದಿರುವುದು ಅತ್ಯಗತ್ಯ. 1988ರ ಮೋಟಾರು ವಾಹನ ಕಾಯ್ದೆ, ಅಪ್ರಾಪ್ತ ವಯಸ್ಕರ ವಾಹನ ಚಾಲನೆಗೆ ದಂಡ ಹಾಗೂ 1985ರ ಎನ್‌ಡಿಪಿಎಸ್ (ಮಾದಕ ದ್ರವ್ಯಗಳ) ಕಾಯ್ದೆ ಕುರಿತು ಮಾಹಿತಿ ನೀಡಿದರು. ವಕೀಲರಾದ ಶ ಗಣೇಶ್ ಪ್ರಸಾದ್, ಪೋಕ್ಸೋ ಮತ್ತು ಬಾಲನ್ಯಾಯ ಕಾಯ್ದೆಗಳ ಕುರಿತು ಕಾನೂನು ಜಾಗೃತಿ ಮೂಡಿಸಿದರು.

ಕರ್ನಾಟಕದಿಂದ ಮಾಲ್ಡೀವ್ಸ್‌ಗೆ ಕಲಬುರಗಿ ತೊಗರಿ ಬೇಳೆ ರಫ್ತಿಗೆ ಚಾಲನೆ; ರೈತರಿಗೆ ಶೇ.30ಕ್ಕಿಂತ ಹೆಚ್ಚು ಲಾಭ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ರಾಜಕುಮಾರ್ ಎಸ್. ವಹಿಸಿದ್ದರು. ವಲಯ ಅರಣ್ಯಾಧಿಕಾರಿ ಬಸವರಾಜು ಗೋಗೇರಿ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಮತ್ತು ಇತರರು ಉಪಸ್ಥಿತರಿದ್ದರು.