ತುಮಕೂರು, ಫೆ. 26: ಮೊಬೈಲ್‌ನಲ್ಲಿ ವಿದಾಯ ಸಂದೇಶ ಬರೆದು 19 ವರ್ಷದ ಯುವಕ ಆತ್ಮಹತ್ಯೆ (Self Harming) ಮಾಡಿಕೊಂಡ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ನಡೆದಿದೆ. ಮೃತ ಯುವಕನನ್ನು ಡಿಪ್ಲೊಮಾ ಕಾಲೇಜು ವಿದ್ಯಾರ್ಥಿ ಧನುಷ್ ಎಂದು ಗುರುತಿಸಲಾಗಿದೆ (Turuvekere News). ಬುಧವಾರ (ಫೆಬ್ರವರಿ 25) ಕಾಲೇಜಿಗೆಂದು ಮನೆಯಿಂದ ಹೊರಟಿದ್ದ ಧನುಷ್ ನೀರಿನ ಕಟ್ಟೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಧನುಷ್ ತುರುವೇಕೆರೆ ತಾಲೂಕಿನ ಕೊಂಡಜ್ಜಿ ಸಮೀಪದ ಗೋಪ್ಪೆನಹಳ್ಳಿ ಗ್ರಾಮದ ನಿವಾಸಿ. ಈತ ತುರುವೇಕೆರೆ ಪಟ್ಟಣದಲ್ಲಿರುವ ಡಿಪ್ಲೊಮಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ.
ವ್ಯಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಏನಿದೆ?
ಧನುಷ್ ಮೃತದೇಹ ಪತ್ತೆಯಾದಾಗ ಆರಂಭದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿತ್ತು. ಅದಾದ ಬಳಿಕ ವ್ಯಾಟ್ಸ್‌ಆ್ಯಪ್ ಸ್ಟೇಟಸ್, ಫೇಸ್‌ಬುಕ್‌ನಲ್ಲಿನ ಆತನ ಸಂದೇಶ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ''ನೀನೇ ಖುಷಿಯಾಗಿರು, ನಾನು ಈ ಪ್ರಪಂಚವನ್ನೇ ಬಿಟ್ಟು ಹೋಗುತ್ತಿದ್ದೇನೆ… ಬಾಯ್” ಎಂದು ಬರೆದುಕೊಂಡು ನೀರಿನ ಕಟ್ಟೆಯ, ಯುವತಿಯೊಬ್ಬಳ ಜತೆಗಿನ ಫೋಟೊ ಹಾಕಿದ್ದ ಎನ್ನಲಾಗಿದೆ.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಪ್ತ ಕಾರ್ಯದರ್ಶಿಯ ಮಗ ಆತ್ಮಹತ್ಯೆ
ಹುಡುಕಾಡಿದ್ದ ಮನೆಯವರು
ತುರುವೇಕೆರೆ ಪಟ್ಟಣದ ಸರ್ಕಾರಿ ಡಿಪ್ಲೊಮಾ ಕಾಲೇಜಿನಲ್ಲಿ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದ ಧನುಷ್ ಬುಧವಾರ ಬೆಳಗ್ಗೆ ಮನೆಯಿಂದ ಹೊರಟಿದ್ದ. ಆದರೆ ಸಂಜೆಯಾದರೂ ವಾಪಸ್ ಆಗಿರಲಿಲ್ಲ. ಪೋಷಕರು ಕರೆ ಮಾಡಿದರೂ ರಿಸೀವ್ ಮಾಡದಿದ್ದಾಗ ಆತಂಕಗೊಂಡು ಹುಡುಕಾಟ ನಡೆಸಲಾಯಿತು. ಈ ವೇಳೆ ಕಾಲೇಜಿನ ಹಿಂಭಾಗದ ಕಟ್ಟೆಯೊಂದರ ಬಳಿ ಬ್ಯಾಗ್, ಚಪ್ಪಲಿ, ಮೊಬೈಲ್ ಪತ್ತೆಯಾಗಿತ್ತು. ಬಳಿಕ ಪೊಲೀಸರಿಗೆ ದೂರು ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ವೇಳೆ ಧನುಷ್ ಮೃತದೇಹ ಪತ್ತೆಯಾಗಿತ್ತು.
ಪ್ರೇಮ ವೈಫಲ್ಯ ಕಾರಣವೆ?
ಧನುಷ್‌ನ ಕೊನೆಯ ಸಂದೇಶ ಗಮನಿಸಿದ ಪೊಲೀಸರು ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಊಹಿಸಿದ್ದಾರೆ. ಅದಾಗ್ಯೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ತುರುವೇಕೆರೆ ಠಾಣೆಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.