Pavagada News: ಕಾಂಗ್ರೆಸ್‌ನವರು ಏನ್ ದಬಾಕಿದ್ದಾರೆ; ಸಿಎಂ, ಗ್ಯಾರಂಟಿಗಳ ಬಗ್ಗೆ ಮಹಿಳಾ ಅಧಿಕಾರಿ ಟೀಕಿಸಿದ ವಿಡಿಯೋ ವೈರಲ್!
Pavagada News: ಪಾವಗಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಗೆ ಬಂದವರ ಬಳಿ ಮಹಿಳಾ ಅಧಿಕಾರಿ ಸಿದ್ದರಾಮಯ್ಯರನ್ನು ತೆಗಳಿ, ಮೋದಿಯನ್ನು ಹೊಗಳಿದ್ದಾರೆ. ಕೆಲಸದ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಬಗ್ಗೆ ಕೀಳಾಗಿ ಮಾತನಾಡಿರುವ ಅಧಿಕಾರಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದರಿಂದ, ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.


ಪಾವಗಡ: ಸಿಎಂ ಸಿದ್ದರಾಮಯ್ಯ ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಪಾವಗಡದ (Pavagada News) ಮಹಿಳಾ ಅಧಿಕಾರಿಯೊಬ್ಬರು ಟೀಕಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ಅಧಿಕಾರಿ ಹೇಳಿಕೆ ಖಂಡಿಸಿ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಮಹಿಳಾ ಸಬ್ ರಿಜಿಸ್ಟ್ರಾರ್ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪಾವಗಡ ತಾಲೂಕಿನ ಸಬ್ ರಿಜಿಸ್ಟ್ರಾರ್ ರಾಧಮ್ಮ ಎಂಬುವವರು ಕೆಲಸದ ಸಮಯದಲ್ಲಿ ಆಫೀಸ್‌ಗೆ ಬಂದವರ ಜತೆ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಬಗ್ಗೆ ಕೀಳಾಗಿ ಮಾತನಾಡಿರುವ ಅಧಿಕಾರಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದರಿಂದ, ರಾಧಮ್ಮ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನೋಂದಣಿಗೆ ಬಂದವರ ಬಳಿ ಮಹಿಳಾ ಅಧಿಕಾರಿ ಸಿದ್ದರಾಮಯ್ಯರನ್ನು ತೆಗಳಿ, ಮೋದಿಯನ್ನು ಹೊಗಳಿದ್ದಾರೆ. ವ್ಯಕ್ತಿಯೊಬ್ಬರು ಬಿಜೆಪಿಯವರು, ಆರ್‌ಎಸ್‌ಎಸ್‌ನ ಪ್ರಮುಖರೆಲ್ಲಾ ಮುಸ್ಲಿಮರನ್ನೇ ಮದುವೆಯಾಗಿದ್ದಾರೆ ಎಂದಿದ್ದಾರೆ. ಈ ವೇಳೆ ಕಾಂಗ್ರೆಸ್‌ನವರು ಏನ್ ದಬಾಕಿದ್ದಾರೆ ಎಂದಿರುವ ಮಹಿಳಾ ಅಧಿಕಾರಿ, ಇಂದಿರಾಗಾಂಧಿ ಗಂಡ ಮುಸ್ಲಿಂ... ಕಾಂಗ್ರೆಸ್‌ಗೆ ಏನಾದರೂ ಅಧಿಕಾರ ಕೊಟ್ಟಿದ್ದರೆ ಇಂಡಿಯಾವನ್ನು ಧೂಳಿಪಟ ಮಾಡುತ್ತಿದ್ದರು. ಅಲ್ಲದೇ ಫ್ರೀ ಬಸ್‌ನಿಂದಾಗಿ ಹೆಣ್ಣು ಮಕ್ಕಳು ಸುಮ್ಮ ಸುಮ್ಮನೆ ಓಡಾಡ್ತಾ ಇದ್ದಾರೆ. ಫ್ರೀ ಫ್ರೀ ಎಂದು ಕೊಟ್ಟು ಎಲ್ಲ ವಸ್ತುಗಳ ರೇಟ್ ಜಾಸ್ತಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಸಬ್‌ರಿಜಿಸ್ಟ್ರಾರ್ ರಾಧಮ್ಮ ವಿಡಿಯೋ ವೈರಲ್ ಅಗುತ್ತಿದ್ದಂತೆ, ಮಹಿಳಾ ಅಧಿಕಾರಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಎತ್ತಂಗಡಿ ಮಾಡಬೇಕು ಎಂದು ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಒಂದು ವೇಳೆ ರಾಧಮ್ಮನನ್ನು ವರ್ಗಾವಣೆ ಮಾಡದಿದ್ದರೆ ಇದೇ ತಿಂಗಳ 21ರಂದು ಪಾವಗಡಕ್ಕೆ ಸಿಎಂ ಭೇಟಿ ನೀಡಲಿದ್ದು, ಅಂದು ಸಿಎಂಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮಹಿಳಾ ಅಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ಮಾತನಾಡಿ, ಪಾವಗಡ ಪಟ್ಟಣದ ನೋಂದಣಿ ಇಲಾಖೆಯ ಅಧಿಕಾರಿ ರಾಧಮ್ಮ ಇಲಾಖೆಗೆ ಬಂದ ದಿನದಿಂದಲೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹಲವು ಬಾರಿ ಇಲಾಖೆಯವರ ಗಮನಕ್ಕೆ ತಂದು ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನಾಗಿಲ್ಲ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ಮುಖಂಡ ಮಾಜಿ ಪುರಸಭೆ ಸದಸ್ಯ ಮನು ಮಹೇಶ್ ಮಾತನಾಡಿ, ಸಬ್ ರಿಜಿಸ್ಟ್ರಾರ್ ರಾಧಮ್ಮ ಪಾವಗಡ ಕಚೇರಿಗೆ ಬಂದಾಗಿನಿಂದ ಈ ಭಾಗದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.