ತಿಪಟೂರು, ಮಾ.5: ಅತಿ ಹೆಚ್ಚು ಗುಣಮಟ್ಟದ ಸಾವಯವ ಕೃಷಿ ಆಧಾರಿತ ರಾಗಿಯನ್ನು ಹೊನ್ನವಳ್ಳಿ ಭಾಗದ ರೈತರು ಬೆಳೆಯುತ್ತಿದ್ದಾರೆ ಎಂದು ಶ್ರೀ ಸತ್ಯಸಾಯಿ ಆಶ್ರಮದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು (Sadhguru Shri Madhusudan Sai) ತಿಳಿಸಿದರು. ತಾಲೂಕಿನ ಶ್ರೀ ಮುನಿಯಪ್ಪನ ಕ್ಷೇತ್ರದ ಆಲದ ಮರ ಆವರಣದಲ್ಲಿ ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಗಿಯ ರಾಶಿಪೂಜೆ ಮತ್ತು ರೈತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ತಿಪಟೂರು, ಕಡೂರು ಅಕ್ಕ ಪಕ್ಕ ತಾಲೂಕುಗಳಲ್ಲಿ 2,000ಕ್ಕೂ ಅಧಿಕ ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ. ನಮ್ಮ ರಾಜ್ಯ ಸೇರಿದಂತೆ ಪಕ್ಕದ ರಾಜ್ಯಗಳಲ್ಲೂ ಇಲ್ಲಿ ಬೆಳೆದ ರಾಗಿಯಿಂದ ತಯಾರಾದ ಮಾಲ್ಟ್ (ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್) ಅನ್ನು ಶಾಲಾ ಮಕ್ಕಳಿಗೆ ವಿತರಿಸುತಿದ್ದೇವೆ. ಈಗಾಗಲೇ ಅದು ಒಂದು ಕೋಟಿ ವಿದ್ಯಾರ್ಥಿಗಳಿಗೆ ತಲುಪುತ್ತಿದೆ ಎಂಬುದು ಹೆಮ್ಮೆಯ ವಿಚಾರ ಎಂದರು
ಮುಂದಿನ ದಿನಗಳಲ್ಲಿ ಆರರಿಂದ ಎಂಟು ಕೋಟಿ ಮಕ್ಕಳಿಗೆ ವಿತರಿಸುವ ಉದ್ದೇಶವನ್ನು ಹೊಂದಿದ್ದೇವೆ. ಪ್ರತಿಯೊಬ್ಬ ತಂದೆ ತಾಯಂದಿರು ಮಕ್ಕಳಿಗೆ ವಿಷಮುಕ್ತ ಆಹಾರವನ್ನು ನೀಡಲು ಪ್ರತಿಜ್ಞೆ ಮಾಡೋಣ. ಪ್ರತಿ ಬಾರಿಯೂ ಈ ಭಾಗದ ಜನ ಮುದ್ದೇನಹಳ್ಳಿಗೆ ಬರುತ್ತಿದ್ದರು, ಆದರೆ ಇಂದು ನಾನು ಇಲ್ಲಿಗೆ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿ ನೆರೆದಿರುವ ರೈತರನ್ನು ಕಂಡರೆ ಮುಂದಿನ ದಿನಗಳಲ್ಲಿ ಆರೋಗ್ಯಕರ ಸಮಾಜವನ್ನು ಕಟ್ಟುತ್ತೇವೆಂಬ ನಮ್ಮ ಸಂಕಲ್ಪ ಈಡೇರುತ್ತದೆ ಎಂದುಕೊಂಡಿದ್ದೇನೆ ಎಂದು ಹೇಳಿದರು.
ಮಧುಗಿರಿಯ ಶ್ರೀ ದಂಡಿನ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಎಸಿ ಗೋಟೂರು ಶಿವಪ್ಪ ಚಾಲನೆ
ರೈತರ ಮಕ್ಕಳಿಗೆ ಉಚಿತ ಶಿಕ್ಷಣ
ನಮ್ಮಲ್ಲಿ ಇರುವ ಮೆಡಿಕಲ್ ಕಾಲೇಜಿನಲ್ಲಿ ಶೇ.60 ರಷ್ಟು ರೈತರ ಮಕ್ಕಳೇ ಓದುತ್ತಿದ್ದಾರೆ. ಅವರಿಗೆ ಉಚಿತ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮುಂದಿನ ಬಾರಿಯೂ ಇದೇ ವೇಳೆಗೆ ರಾಗಿ ರಾಶಿ ಪೂಜೆಗೆ ನಾವು ಬರುವಂತಾಗಲಿ. ಮುದ್ದೇನಹಳ್ಳಿಯಲ್ಲಿರುವ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಮಾತನಾಡಿ, ನಾನು ಇಲ್ಲಿಗೆ ಒಬ್ಬ ರಾಜಕಾರಣಿಯಾಗಿ ಬಂದಿಲ್ಲ, ಶ್ರೀಗಳ ಭಕ್ತನಾಗಿ ಬಂದಿದ್ದೇನೆ. ಶ್ರೀಗಳು ನುಡಿದಂತೆ ನಡೆಯುತ್ತಾರೆ. ವಿಷಪೂರಿತ ಆಹಾರ ಮಕ್ಕಳಿಗೆ ದೊರಕಬಾರದು ಎಂಬ ಸದುದ್ದೇಶವನ್ನು ಇಟ್ಟುಕೊಂಡು ಶ್ರೀಗಳು ಸಾಯಿ ಶೂರ್ ರಾಗಿ ಮಾಲ್ಟ್ ಅನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿದ್ದಾರೆ ಎಂದರು.
ಈಗಾಗಲೇ 50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ. ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನಿಮಗೆ ಯಾವ ಖಾತೆ ಬೇಕು ಕೇಳಿ ಎಂದು ಹೇಳಿದರು ಆಗ ನಾನು ನನಗೆ ಕೃಷಿ ಸಚಿವನಾಗಬೇಕು ಕೇಳಿದ್ದೆ. ಆಗಲೇ ನಾನು ಸಾವಯವ ಕೃಷಿ ಬಗ್ಗೆ ಮನಸ್ಸು ಮಾಡಿದ್ದೆ ಎಂದು ತಿಳಿಸಿದರು.
ಒಮ್ಮೆ ನಾನು ಚೀನಾ ದೇಶಕ್ಕೆ ಹೋಗಿದ್ದೆ, ಅಲ್ಲಿ ಪ್ರತಿಯೊಬ್ಬ ಮಕ್ಕಳಿಗೂ ಪ್ರತಿದಿನ ಅರ್ಧ ಲೀಟರ್ ಫ್ರೂಟ್ ಜ್ಯೂಸನ್ನು ನೀಡುತ್ತಿದ್ದನ್ನು ಗಮನಿಸಿದ್ದೆ. ನಂತರ ಪಶು ಸಂಗೋಪನೆ ಸಚಿವನಾದಾಗ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ಕೆ ಕೈ ಹಾಕಿದಾಗ ಮುಖ್ಯಮಂತ್ರಿಗಳು ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿ ಕ್ಷೀರ ಭಾಗ್ಯವನ್ನು ಜಾರಿಗೆ ತಂದರು. ನಂತರ ಹಾಲಿನ ಜತೆ ಪೌಷ್ಟಿಕಾಂಶವುಳ್ಳ ರಾಗಿ ಮಾಲ್ಟ್ ಅನ್ನು ಶ್ರೀಗಳ ನೀಡುತ್ತಿದ್ದಾರೆ. ಈಗ ಅದು ಅಂಗನವಾಡಿ ಮಕ್ಕಳಿಂದ ಹಿಡಿದು ಪ್ರೌಢಶಾಲಾ ಮಕ್ಕಳವರೆಗೆ ತಲುಪಿದೆ. ಸ್ವಾಮೀಜಿಗಳ ಆಶಯದಂತೆ ಆರೋಗ್ಯವಂತ ಸಮಾಜವನ್ನು ಕಟ್ಟಲು ಸಾವಯವ ಕೃಷಿಯೊಂದಿಗೆ ರೈತರು ಸಹಕರಿಸಬೇಕು, ಜತೆಗೆ ನಾವು ಕೂಡ ಕೈ ಜೋಡಿಸುತ್ತೇವೆ ಎಂದು ನುಡಿದರು.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರನ್ನು ಮಹಿಳೆಯರು ಪೂರ್ಣ ಕುಂಭಗಳೊಂದಿಗೆ ಸಮಾರಂಭಕ್ಕೆ ಬರಮಾಡಿಕೊಂಡರು. ಶ್ರೀಗಳ ಅಮೃತ ಹಸ್ತದಿಂದ ರಾಗಿ ರಾಶಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ಇದೇ ವೇಳೆ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿರುವ ರೈತರನ್ನು ಅಭಿನಂದಿಸಲಾಯಿತು.
Holi Festival : ಬಣ್ಣಗಳ ಹಬ್ಬ ಹೋಳಿ; ಈ ಹಬ್ಬದ ಇತಿಹಾಸ ಏನು? ಯಾಕೆ ಆಚರಿಸುತ್ತಾರೆ ಗೊತ್ತಾ?
ಕಾರ್ಯಕ್ರಮದಲ್ಲಿ ಕೊಡಗಿನ ಕೇಂದ್ರೀಯ ವಿದ್ಯಾಲಯದ ಕುಲಪತಿ ಡಾ ಅಶೋಕ್ ಆಲೂರು. ಕೃಷಿ ಇಲಾಖೆಯ ಆಯುಕ್ತ ವೈ ಎಸ್ ಪಾಟೀಲ್, ಇಲಾಖೆಯ ನಿರ್ದೇಶಕರಾದ ಮಾನ್ಯ ಪುತ್ರ ಮತ್ತು ವೆಂಕಟರಾಮ ರೆಡ್ಡಿ ಪಾಟೀಲ್, ಭಾಗ್ಯಲಕ್ಷ್ಮೀ ಕಮರ್ಷಿಯಲ್ ಕಾರ್ಪೋರೇಶನ್ ಮಾಲೀಕ ಶ್ರೀನಿವಾಸ ಗುಪ್ತಾ, ಭೂಮಿತ್ರ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಗಣೇಶ್ ಬಾಬು. ಸುಭಿಕ್ಷಾ ಸಂಸ್ಥೆಯ ಅಧ್ಯಕ್ಷ ಆನಂದ , ಸಿಇಒ ಭರಣಿ ಪ್ರಸಾದ್, ಕಾಂಗ್ರೆಸ್ ಯುವ ಮುಖಂಡ ನಿಖಿಲ್ ರಾಜಣ್ಣ ಸೇರಿದಂತೆ ಸಾವಿರಾರು ರೈತರು ಉಪಸ್ಥಿತರಿದ್ದರು.