ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದ್ವಿಚಕ್ರ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸಬಹುದು ಎಂದ ಹೈಕೋರ್ಟ್

ದ್ವಿಚಕ್ರ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸಬಹುದು ಎಂದು ಹೈಕೋರ್ಟ್ ಹೇಳಿದ್ದು, ಇದರಿಂದ ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ನಿಷೇಧಿಸಿದ್ದ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆಯುಂಟಾದಂತಾಗಿದೆ. ರಾಜ್ಯ ಸರ್ಕಾರದ ಆದೇಶವನ್ನು ಈ ಹಿಂದೆ ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು. ಆದರೆ ಇದೀಗ ಅದನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಬೈಕ್‌ ಟ್ಯಾಕ್ಸಿ ನಿಷೇಧಿಸಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆ

ಸಂಗ್ರಹ ಚಿತ್ರ -

ಬೆಂಗಳೂರು: ಏಕಸದಸ್ಯ ಪೀಠದ (Single Judge Bench) ಆದೇಶ ರದ್ದುಗೊಳಿಸಿರುವ ಕರ್ನಾಟಕ ರಾಜ್ಯ ಹೈಕೋರ್ಟ್ (karnataka High Court) ಬೈಕ್‌ ಟ್ಯಾಕ್ಸಿ (Bike taxi) ಸೇವೆಗೆ ಅನುಮತಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆಯಾದಂತಾಗಿದೆ. ದ್ವಿಚಕ್ರ ವಾಹನಗಳನ್ನು (two wheelers taxi service) ಸಾರಿಗೆ ವಾಹನವಾಗಿ ಬಳಸಲು ಅನುಮತಿ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಈ ಹಿಂದೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದನ್ನು ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು. ಈ ಕುರಿತು ಪ್ರಶ್ನಿಸಿರುವ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಶುಕ್ರವಾರ ಆದೇಶವನ್ನು ರದ್ದುಗೊಳಿಸಿ ದ್ವಿಚಕ್ರ ವಾಹನವನ್ನು ಟ್ಯಾಕ್ಸಿಯಾಗಿ ಬಳಸಲು ಅಗತ್ಯ ಷರತ್ತುಗಳನ್ನು ವಿಧಿಸಿ ಸರ್ಕಾರ ಅನುಮತಿ ನೀಡಬಹುದು ಎಂದು ಹೇಳಿದೆ.

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶವನ್ನು ಏಕಸದಸ್ಯ ನ್ಯಾಯಪೀಠವು ಎತ್ತಿ ಹಿಡಿದಿದ್ದು, ಮೋಟಾರು ವಾಹನಗಳ ಕಾಯಿದೆ 1988ರ ಅನ್ವಯ ಮಾರ್ಗಸೂಚಿ ಮತ್ತು ನಿಯಮಗಳನ್ನು ರೂಪಿಸುವವರೆಗೆ ಬೈಕ್ ಟ್ಯಾಕ್ಸಿಗಳು ಕಾರ್ಯಾಚರಣೆ ಮಾಡುವಂತಿಲ್ಲ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ ಓಲಾ, ಉಬರ್‌, ರ‍್ಯಾಪಿಡೊ ಸೇರಿದಂತೆ ಹಲವು ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸಂಸ್ಥೆಗಳು ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠವು ವಿಚಾರಣೆಯನ್ನು ನಡೆಸಿ ಆದೇಶವನ್ನು ಹೊರಡಿಸಿದೆ.



ವಿಬಿ ಜಿ ರಾಮ್ ಜಿ ಮಸೂದೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಬೈಕ್‌ ಟ್ಯಾಕ್ಸಿಗಳು ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರ ನೇಮಕ ಮಾಡಿದ್ದ ಸಮಿತಿಯು ಬೆಂಗಳೂರಿಗೆ ಬೈಕ್‌ ಟ್ಯಾಕ್ಸಿ ಅಗತ್ಯವಿಲ್ಲ ಎಂದು ತಿಳಿಸಿದೆ. ಆದರೆ ಬೈಕ್‌ ಟ್ಯಾಕ್ಸಿ ಸೇವೆ ಪಡೆಯಬೇಕು ಎಂದು ಬಯಸುವವರನ್ನು ನಿರ್ಬಂಧಿಸಲಾಗುವುದಿಲ್ಲ. ಪ್ರತಿಯೊಬ್ಬರು ಕೂಡ ಅತ್ಯಂತ ಕಡಿಮೆ ದರ ಮತ್ತು ಸಮಯದಲ್ಲಿ ತಲುಪಬಹುದಾದ ಸಾರಿಗೆಯನ್ನು ಬಯಸುತ್ತಾರೆ. ಸಾರಿಗೆ ವಾಹನಕ್ಕೆ ಸಂಬಂಧಿಸಿ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ. ಈಗಾಗಲೇ ದೇಶದ 11 ರಾಜ್ಯಗಳಲ್ಲಿ ಬೈಕ್‌ ಟ್ಯಾಕ್ಸಿ ಕಾರ್ಯಾಚರಣೆ ನಡೆಯುತ್ತಿದೆ. ಇದು ಹಲವರಿಗೆ ಜೀವನೋಪಾಯವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದರು.

ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರದ ಪರವಾಗಿ ವಕೀಲರಾದ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು ವಾದ ಮಂಡಿಸಿದ್ದು, ದ್ವಿಚಕ್ರ ವಾಹನಗಳು ಬಾಡಿಗೆಗೆ ಬಳಸಬಹುದು ಎಂದು ಶಾಸನದಲ್ಲಿ ಅಥವಾ ಮೋಟಾರು ವಾಹನಗಳ ಕಾಯಿದೆಯಲ್ಲಿ ಹೇಳಿಲ್ಲ ಎಂದು ಹೇಳಿದ್ದರು.

ಸಮವಸ್ತ್ರದ ಆಚೆಗೂ ಮುಂದುವರಿಯುವ ಧ್ಯೇಯ: ಭಾರತೀಯ ಸೇನೆಯಿಂದ ಎಡಬ್ಲ್ಯೂಎಸ್ ವರೆಗೆ ಕುಮಾರ್ ವಿಕ್ರಮ್ ಸಿಂಗ್ ಅವರ ಪ್ರಯಾಣ

ತಮ್ಮ ವಾಹನಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ದ್ವಿಚಕ್ರ ವಾಹನ ಮಾಲೀಕರು ಕೂಡ ಅರ್ಹರಾಗಿದ್ದಾರೆ. ಇಂತಹ ಅರ್ಜಿಗಳನ್ನು ಪರಿಗಣಿಸಿ ನೋಂದಣಿ ಮಾಡಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಇದಕ್ಕೆ ಸಂಬಂಧಿಸಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಮೋಟಾರು ವಾಹನ ಕಾಯಿದೆಯ ಸೆಕ್ಷನ್ 74(2)ರ ಅಡಿಯಲ್ಲಿ ನಿಯಮಾವಳಿಗಳನ್ನು ರೂಪಿಸಬಹುದು ಎಂದು ಹೇಳಿರುವ ಹೈಕೋರ್ಟ್, ಇದಕ್ಕಾಗಿ ಅನುಮತಿ ನಿರಾಕರಿಸುವಂತಿಲ್ಲ ಎಂದು ತಿಳಿಸಿದೆ.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ರೂಪಿಸುವ ಷರತ್ತುಗಳಿಗೆ ಸಂಬಂಧಿಸಿ ವಾಹನ ಮಾಲೀಕರು ಮತ್ತೆ ಹೊಸ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸ್ವತಂತ್ರರಾಗಿದ್ದಾರೆ. ಅಂತಹ ಅರ್ಜಿಗಳನ್ನು ಹೈಕೋರ್ಟ್ ಆದೇಶದ ಅನ್ವಯ ಪರಿಶೀಲಿಸಬೇಕು ಮತ್ತು ಕಾನೂನಿನ ಚೌಕಟ್ಟಿನಡಿಯಲ್ಲಿ ಪರಿಗಣಿಸಬೇಕು ಎಂದು ಹೈಕೋರ್ಟ್ ಹೇಳಿದೆ.