#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bare Keshava Bhat: ಹಿರಿಯ ಅರ್ಥಧಾರಿ, ಲೇಖಕ ಬರೆ ಕೇಶವ ಭಟ್ಟ ಇನ್ನಿಲ್ಲ

ಶೇಣಿ, ಸಾಮಗ, ಮೂಡಂಬೈಲು, ಜೋಷಿ, ಕುಂಬ್ಳೆ, ಪೆರ್ಲರ ಸಾಲಲ್ಲಿ ಬೆಳೆದ ಅವರದು ವಿದ್ವತ್ಪೂರ್ಣ ಅರ್ಥಗಾರಿಕೆಯಾಗಿತ್ತು. ಅವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶೇಣಿ ಗೋಪಾಲಕೃಷ್ಣ ಭಟ್‌ ಪ್ರಶಸ್ತಿ, ದೇರಾಜೆ ಸೀತಾರಾಮಯ್ಯ ಪ್ರಶಸ್ತಿ, ಪೆರ್ಲ ಕೃಷ್ಣ ಭಟ್‌ ಪ್ರಶಸ್ತಿಗಳು ಸಂದಿದ್ದವು.

ಹಿರಿಯ ಅರ್ಥಧಾರಿ, ಲೇಖಕ ಬರೆ ಕೇಶವ ಭಟ್ಟ ಇನ್ನಿಲ್ಲ

ಬರೆ ಕೇಶವ ಭಟ್

ಹರೀಶ್‌ ಕೇರ ಹರೀಶ್‌ ಕೇರ Jan 26, 2025 10:04 AM

ಮಂಗಳೂರು: ಯಕ್ಷಗಾನ ತಾಳಮದ್ದಳೆಯ ಹಿರಿಯ ಅರ್ಥಧಾರಿ ಬರೆ ಕೇಶವ ಭಟ್ಟ (84) (Bare Keshava Bhat) ನಿಧನರಾಗಿದ್ದಾರೆ. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದ ಕೇಶವ ಭಟ್ಟರು ಅರ್ಥಧಾರಿ, ಹವ್ಯಾಸಿ ವೇಷಧಾರಿ, ಲೇಖಕ, ಸಂಘಟಕರಾಗಿದ್ದವರು.

ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಹಿರಿಯ ಮತ್ತು ಗತಪರಂಪರೆಯ ಕೊಂಡಿಯಾಗಿದ್ದ ನುರಿತ ಅರ್ಥದಾರಿ ಬರೆ ಕೇಶವ ಭಟ್ ಬಹುಕಾಲದ ಅನಾರೋಗ್ಯದಿಂದ ಅಶಕ್ತರಾಗಿದ್ದರು. ಹವ್ಯಾಸಿ ವೇಷಧಾರಿ, ಅರ್ಥಧಾರಿ, ವಿಮರ್ಶಕ, ಅಧ್ಯಾಪಕ, ಕಲಾ ಸಂಯೋಜಕ, ನಿರ್ದೇಶಕ, ಲೇಖಕ, ಚಿಂತಕರಾಗಿ ಬಹುಮುಖೀ ಪ್ರತಿಭೆಯ ಜಿಜ್ಞಾಸುವಾಗಿದ್ದರು.

ತಾಳಮದ್ದಳೆ ಕ್ಷೇತ್ರದ ದಂತಕತೆ ಎನಿಸಿದ ಕಲಾವಿದರ ಜತೆ ಅರ್ಥ ಹೇಳಿ ಪಳಗಿದ್ದ ಅವರು ಕಲೆಯ ಕುರಿತಾಗಿ ಕರಾರುವಕ್ಕಾಗಿ ಹೇಳಬಲ್ಲವರಾಗಿದ್ದರು. ಶೇಣಿ, ಸಾಮಗ, ಮೂಡಂಬೈಲು, ಜೋಷಿ, ಕುಂಬ್ಳೆ, ಪೆರ್ಲರ ಸಾಲಲ್ಲಿ ಬೆಳೆದ ಅವರದು ವಿದ್ವತ್ಪೂರ್ಣ ಅರ್ಥಗಾರಿಕೆಯಾಗಿತ್ತು. ಅವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶೇಣಿ ಗೋಪಾಲಕೃಷ್ಣ ಭಟ್‌ ಪ್ರಶಸ್ತಿ, ದೇರಾಜೆ ಸೀತಾರಾಮಯ್ಯ ಪ್ರಶಸ್ತಿ, ಪೆರ್ಲ ಕೃಷ್ಣ ಭಟ್‌ ಪ್ರಶಸ್ತಿಗಳು ಸಂದಿದ್ದವು. ನಿವೃತ್ತಿಯ ನಂತರ ವಾಸುದೇವ ಸಾಮಗರ ಸಂಯಮಂ ತಾಳಮದ್ದಳೆ ತಂಡದಲ್ಲಿ ಹಲವು ಕಾಲ ತಿರುಗಾಟ ನಡೆಸಿದ್ದರು.

ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ 1941ರ ನ.30ರಂದು ಜನಿಸಿದ ಕೇಶವ ಭಟ್ಟರು ಬರೆ ವೆಂಕಟ್ರಮಣ – ಗೌರಿ ದಂಪತಿಗಳ ಪುತ್ರ. ಕೈರಂಗಳ, ವಿಟ್ಲ ಶಾಲೆಗಳಲ್ಲಿ ಓದಿದ್ದ ಇವರದ್ದು ಕೃಷಿ ಕುಟುಂಬ. ಶಿಕ್ಷಣದ ಬಳಿಕ ಅಧ್ಯಾಪನ ತರಬೇತಿ ಪಡೆದು ಶಿಕ್ಷಕರಾಗಿ ನೇಮಕಗೊಂಡು ಕೈರಂಗಳ ಶಾಲೆಯಲ್ಲಿ 1 ವರ್ಷ, ಶಿರಂಕಲ್ಲು ಶಾಲೆ 3 ವರ್ಷ, ಅಡ್ಯನಡ್ಕ ಜನತಾ ಪ್ರೌಢ ಶಾಲೆಯಲ್ಲಿ ನಿರಂತರ 31 ವರ್ಷ ಸೇವೆ ಸಲ್ಲಿಸಿ ಕಲಾ, ಸಂಸ್ಕೃತಿ ಪ್ರೀತಿಯ ಶಿಷ್ಯ ಪರಂಪರೆಯನ್ನು ರೂಪಿಸಿದ್ದರು.

ಇವರು ಹುಟ್ಟಿ ಬೆಳೆದ ಕೈರಂಗಳ ಪರಿಸರ ನಿರಂತರ ಯಕ್ಷಗಾನದ ತವರೂರಾಗಿದ್ದು, ಇವರ ಯಕ್ಷಪ್ರೀತಿಗೆ ಪೋಷಣೆಯ ನೀರೆರೆಯಿತು. ಇವರ ಕುಟುಂಬವೂ ಯಕ್ಷಗಾನ ಪ್ರೀತಿಯ ಮನೆತನ. ಕೈರಂಗಳ ಸಂಘದಲ್ಲಿ ವೇಷ ಮಾಡಿ, ಅರ್ಥ ಹೇಳಿ ಪಳಗಿದ ಇವರು ಅಧ್ಯಾಪನದೊಂದಿಗೆ ತಾಳಮದ್ದಳೆ ಮತ್ತು ಹವ್ಯಾಸಿ ಬಯಲಾಟದ ಅನಿವಾರ್ಯ ಕಲಾವಿದನಾಗಿ ಮಿಂಚಿದರು. ಶ್ರೀರಾಮ ನಿರ್ಯಾಣದ ರಾಮ, ಪಾದುಕಾಪ್ರದಾನದ ಭರತ, ರಾಮ ಪಟ್ಟಾಭಿಷೇಕದ ದಶರಥ, ಅತಿಕಾಯ ಕಾಳಗದ ಅತಿಕಾಯ ಪಾತ್ರಗಳು ಕೇಶವ ಭಟ್ಟರಿಗೆ ಇಷ್ಟ. ಭಾವನಾತ್ಮಕವಾದ ಈ ಪಾತ್ರಗಳಿಗೆ ಅಷ್ಟೇ ಭಾವುಕವಾಗಿ ಜೀವ ತುಂಬುತ್ತಿದ್ದರು.

ಬಂಟ್ವಾಳ ತಾಲೂಕಿನ ಸಣ್ಣಯ್ಯಬೈಲು ಎಂಬಲ್ಲಿ ವಾಸಿಸಿದ್ದ ಅವರು ಪತ್ನಿ ದುರ್ಗಾಪರಮೇಶ್ವರಿ, ಮಕ್ಕಳಾದ ವೆಂಕಟೇಶ್ವರ, ಸತ್ಯಶಂಕರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.