ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pawan Kalyan Udupi Visit: ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್‌ ಕಲ್ಯಾಣ್‌; ಪುತ್ತಿಗೆ ಶ್ರೀಗಳಿಂದ ʼಅಭಿನವ ಕೃಷ್ಣದೇವರಾಯʼ ಬಿರುದು ನೀಡಿ ಗೌರವ

ಗೀತೋತ್ಸವ ಸಮಾರೋಪದಲ್ಲಿ ಭಾಗವಹಿಸಲು ಉಡುಪಿಗೆ ಪವನ್‌ ಕಲ್ಯಾಣ್‌ ಅವರು ಭಾನುವಾರ ಭೇಟಿ ನೀಡಿದ್ದರು. ಪರ್ಯಾಯ ಪುತ್ತಿಗೆ ಮಠದಿಂದ ಪವನ್ ಕಲ್ಯಾಣ್‌ಗೆ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ಕನಕನ ಕಿಂಡಿಯ ಮೂಲಕ ಅವರು ಕೃಷ್ಣನ ದರ್ಶನ ಮಾಡಿದರು.

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌

ಉಡುಪಿ ಶ್ರೀಕೃಷ್ಣ ಮಠದಲ್ಲಿ ಪವನ್‌ ಕಲ್ಯಾಣ್‌. -

Prabhakara R
Prabhakara R Dec 7, 2025 8:36 PM

ಉಡುಪಿ, ಡಿ.7: ಪ್ರಧಾನಿ ನರೇಂದ್ರ ಮೋದಿ ಬಳಿಕ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಭೇಟಿ (Pawan Kalyan Udupi Visit) ನೀಡಿ, ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ. ಗೀತೋತ್ಸವ ಸಮಾರೋಪದಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿದ್ದ ಅವರು, ಕನಕನ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ.

ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಬಂದಿದ್ದ ಅವರು ಅಲ್ಲಿಂದ ಉಡುಪಿ ತಲುಪಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಉಡುಪಿಗೆ ಒಂದು ಗಂಟೆ ಮುಂಚೆಯೇ ಆಗಮಿಸಿದ್ದ ಪವನ್ ಕಲ್ಯಾಣ್ ಅವರು, ಉಡುಪಿಯ ಪ್ರವಾಸಿ ಮಂದಿರದಲ್ಲಿ ಊಟ ಸವಿದರು. ಬಳಿಕ ಕೃಷ್ಣ ಮಠಕ್ಕೆ ಭೇಟಿ ನೀಡಿದರು.

ಪರ್ಯಾಯ ಪುತ್ತಿಗೆ ಮಠದಿಂದ ಪವನ್ ಕಲ್ಯಾಣ್‌ಗೆ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡಿದರು. ಇದೇ ವೇಳೆ ಅನಂತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕೃಷ್ಣ ಮಠಕ್ಕೆ ಭೇಟಿ ನೀಡಿದ ವೇಳೆ ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ ಮಾಡಲಾಯಿತು. ಬಳಿಕ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು ಭೇಟಿಯಾಗಿ ಸುವರ್ಣ ತೀರ್ಥಮಂಟಪದಲ್ಲಿ ಕೂತು ಪ್ರಸಾದ ಸ್ವೀಕರಿಸಿದರು. ಬಳಿಕ ಮಠದ ಗೀತೋತ್ಸವ ಸಮಾರೋಪದಲ್ಲಿ ಭಾಗವಹಿಸಿದರು.

ಪವನ್‌ ಕಲ್ಯಾಣ್‌ ಉಡುಪಿ ಭೇಟಿ ವಿಡಿಯೋ



ಉಡುಪಿಯಲ್ಲಿ ಪ್ರಧಾನಿ ಮೋದಿಗೆ ʼಭಾರತ ಭಾಗ್ಯ ವಿಧಾತʼ ಬಿರುದು ಸಲ್ಲಿಕೆ

ಪರ್ಯಾಯ ಪುತ್ತಿಗೆ ಶ್ರೀಗಳ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಶ್ರೀಗಳು, ಇಸ್ಕಾನ್ ಮಾಯಾಪುರಿ ಶ್ರೀ ಭಾಗವಹಿಸಿದ್ದರು.

ಅಭಿನವ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ನಟ ಪವನ್ ಕಲ್ಯಾಣ್‌ ಅವರಿಗೆ ʼಅಭಿನವ ಕೃಷ್ಣದೇವರಾಯ ಪ್ರಶಸ್ತಿʼ ಪ್ರದಾನ ಮಾಡಲಾಗಿದೆ. ಕೃಷ್ಣದೇವರಾಯ ಆದರ್ಶ ರಾಜ್ಯ ನಿರ್ಮಾಣ ಮಾಡಿದ್ದರು. ಸನಾತನ ಧರ್ಮ ರಕ್ಷಣೆಗೆ ಪವನ್ ಕಲ್ಯಾಣ್ ಶ್ರಮ ಶ್ಲಾಘನೀಯ. ಹಾಗಾಗಿ ಪವನ್ ಕಲ್ಯಾಣ್ ಅವರಿಗೆ ಈ ಬಿರುದು ನೀಡುತ್ತಿದ್ದೇವೆ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳು ಹೇಳಿದ್ದಾರೆ.

ಏಕಕಾಲದಲ್ಲಿ ಒಂದು ಲಕ್ಷ ಜನ ಗೀತಾ ಪಾರಾಯಣ ವಿಶೇಷ

ಉಡುಪಿ ಭೇಟಿ ವೇಳೆ ಮಾತನಾಡಿದ ನಟ, ಡಿಸಿಎಂ ಪವನ್ ಕಲ್ಯಾಣ್ ಅವರು, ಉಡುಪಿಗೆ ಬರುವುದು ನನಗೆ ದೇವರು ನೀಡಿದ ಡಿವೈನ್ ಕಾಲ್. ಪುತ್ತಿಗೆ ಶ್ರೀಗಳು ವೈಯಕ್ತಿಕವಾಗಿ ನನ್ನನ್ನು ಆಮಂತ್ರಿಸಿದರು. ನಾನು ಅವರಿಗೆ ಆಭಾರಿಯಾಗಿದ್ದೇನೆ, ಒಂದು ಕೋಟಿಗೂ ಅಧಿಕ ಮಂದಿ ಕೈಯಲ್ಲಿ ಭಗವದ್ಗೀತೆ ಬರೆದಿರುವುದು ಅದ್ಭುತ. ಏಕಕಾಲದಲ್ಲಿ ಒಂದು ಲಕ್ಷ ಜನ ಗೀತಾ ಪಾರಾಯಣ ಮಾಡಿರುವುದು ವಿಶೇಷ ಎಂದು ತಿಳಿಸಿದರು.

ಕಾಂತಾರ ಸಿನಿಮಾ ಕುರಿತು ಪ್ರತಿಕ್ರಿಯಿಸಿ, ಪ್ರತಿ ಊರಿಗೂ ತನ್ನದೇ ಆದ ವೈಯಕ್ತಿಕ ಸಂಸ್ಕೃತಿ ಇರುತ್ತದೆ. ಕಾಂತಾರ ತುಳುನಾಡಿನ ಕಥೆ ಹೇಳುತ್ತದೆ. ಆಂಧ್ರ ತೆಲಂಗಾಣ ಭಾಗದಲ್ಲಿ ಇಂತಹ ಸಾಂಸ್ಕೃತಿಕ ಕಥೆಗಳಿವೆ. ಇತ್ತೀಚೆಗೆ ಬಿಡುಗಡೆಯಾದ ಕಾಂತಾರ 1 ನಾನು ನೋಡಿಲ್ಲ. ಹಿಂದೆ ಬಿಡುಗಡೆಯಾದ ಕಾಂತಾರ ನೋಡಿ ಖುಷಿ ಪಟ್ಟಿದ್ದೇನೆ. ಸಾಂಸ್ಕೃತಿಕ ಹಿನ್ನೆಲೆಯ ಕಥೆ ಹೇಳುವ ಇಂತಹ ಸಿನಿಮಾಗಳು ಹೆಚ್ಚು ಹೆಚ್ಚು ಬರಬೇಕು ಎಂದು ಹೇಳಿದರು.