ನಾಳೆ ಕೋಟೇಶ್ವರದಲ್ಲಿ ಸರಕಾರಿ ಶಾಲೆಗಳ ಶೌಚಾಲಯದ ಸ್ವಚ್ಛತಾ ಸೇವೆ ಅಭಿಯಾನ ಉದ್ಘಾಟನೆ
ಹೆಸರಾಂತ ಹೋಟೆಲ್ ಉದ್ಯಮಿ ಗೋಪಾಡಿ ಶ್ರೀನಿವಾಸ ರಾವ್ ಅವರ ಗೋಪಾಡಿ ಶ್ರೀನಿವಾಸ ರುಕ್ಮಿಣಿ ಪ್ರತಿಷ್ಠಾನದ ವತಿಯಿಂದ ಡಿಸೆಂಬರ್ 11ರಂದು ಸಂಜೆ 3.30ಕ್ಕೆ ʼಸರಕಾರಿ ಶಾಲೆಗಳ ಶೌಚಾಲಯದ ಸ್ವಚ್ಛತಾ ಸೇವೆ ಅಭಿಯಾನ ಉದ್ಘಾಟನೆʼ ಕಾರ್ಯಕ್ರಮವನ್ನು ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಹಮ್ಮಿಕೊಳ್ಳಲಾಗಿದೆ.
ಉದ್ಯಮಿ ಗೋಪಾಡಿ ಶ್ರೀನಿವಾಸ ರಾವ್ -
ಉಡುಪಿ, ಡಿ.10: ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳ ನಿರ್ವಹಣೆಗೆ ಯಾವುದೇ ಅನುದಾನ ಮತ್ತು ವ್ಯವಸ್ಥೆ ಇಲ್ಲದಿರುವುದರಿಂದ ಭಾರಿ ಸಮಸ್ಯೆ ಸೃಷ್ಟಿಯಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ಎಷ್ಟೋ ಕಡೆಗಳಲ್ಲಿ ಮಕ್ಕಳಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಕ್ಕಾಗಿ ಶಿಕ್ಷಕರು ಅಮಾನತಿಗೆ ಒಳಗಾದ ಪ್ರಕರಣಗಳೂ ನಡೆದಿವೆ. ಇಂಥ ಸನ್ನಿವೇಶದಲ್ಲಿ ಹೆಸರಾಂತ ಹೋಟೆಲ್ ಉದ್ಯಮಿ ಗೋಪಾಡಿ ಶ್ರೀನಿವಾಸ ರಾವ್ (Gopady Srinivasa Rao) ಅವರು ಮೊದಲ ಬಾರಿಗೆ ಸರಕಾರಿ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛವಾಗಿ ನಿರ್ವಹಿಸಲು ಮಾದರಿಯಾದ ಅಭಿಯಾನವನ್ನು ಕೈಗೊಂಡಿದ್ದಾರೆ.
ಗೋಪಾಡಿ ಶ್ರೀನಿವಾಸ ರುಕ್ಮಿಣಿ ಪ್ರತಿಷ್ಠಾನದ ವತಿಯಿಂದ ಡಿಸೆಂಬರ್ 11ರಂದು ಸಂಜೆ 3.30ಕ್ಕೆ ʼಸರಕಾರಿ ಶಾಲೆಗಳ ಶೌಚಾಲಯದ ಸ್ವಚ್ಛತಾ ಸೇವೆ ಅಭಿಯಾನ ಉದ್ಘಾಟನೆʼ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ಗೋಪಾಡಿ ರುಕ್ಮಿಣಿ ಶ್ರೀನಿವಾಸ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 3.30ಕ್ಕೆ ಆಕಾಶವಾಣಿ ಕಲಾವಿದ ವಿನುಷ್ ಭಾರಧ್ವಾಜ್ ಮತ್ತು ಬಳಗದಿಂದ ಗಾನ ಮಾಧುರ್ಯ ಇರಲಿದ್ದು, 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ರಿಂದ ಕೋಟೇಶ್ವರ ಕೆಪಿಎಸ್ ಪ್ರಾಥಮಿಕ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಭೀಮನಕಟ್ಟೆ ಭೀಮಸೇತು ಮುನಿವೃಂದ ಮಠದ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಕೊಡ್ಲಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಜಿಪಂ ಸಿಇಒ ಪ್ರಥಿಕ್ ಬಾಯಲ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಡಳಿತ ಉಪನಿರ್ದೇಶಕ ಲೋಕೇಶ್ ಸಿ., ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಭಿವೃದ್ಧಿ ಉಪನಿರ್ದೇಶಕ ಅಶೋಕ್ ಕಾಮತ್, ಕೋಟೇಶ್ವರ ಮೊಳಹಳ್ಳಿ ಸಮಾಜ ಸೇವಕರು ಎಂ. ದಿನೇಶ್ ಹೆಗ್ಡೆ, ಮಣೂರು ಪಡುಕೆರೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಸಂಯುಕ್ತ ಜನತಾದಳದ ಮಾಜಿ ವಕ್ತಾರ ಬಿ. ಶ್ರೀಪತಿರಾವ್, ಎಚ್. ರಾಮಚಂದ್ರ ವರ್ಣ ಹಂಗಳೂರು ಸಮಾಜ ಸೇವಕ, ಗೋಪಾಡಿ ಶ್ರೀನಿವಾಸ ರುಕ್ಮಿಣಿ ಪ್ರತಿಷ್ಠಾನ ಸಂಸ್ಥಾಪಕರಾದ ಗೋಪಾಡಿ ಶ್ರೀನಿವಾಸ ರಾವ್ ಮತ್ತು ಗೋಪಾಡಿ ರುಕ್ಮಿಣಿ ಭಾಗಿಯಾಗಲಿದ್ದು, ಟ್ರಸ್ಟ್ ಅಧ್ಯಕ್ಷ ಗೋಪಾಡಿ ಸಂತೋಷ್, ಕಾರ್ಯದರ್ಶಿಗಳು ಅಮೃತ್ ಕುಮಾರ್ ತೌಳ, ಖಜಾಂಚಿ ಮಹೇಶ್ ಹತ್ವಾರ್ ಮತ್ತಿತರರು ಉಪಸ್ಥಿತರಿರಲಿದ್ದಾರೆ.
24 ಸರಕಾರಿ ಶಾಲೆಗಳ ಶೌಚಾಲಯಗಳ ಸ್ವಚ್ಛತೆಗೆ ವ್ಯವಸ್ಥೆ
ನೀವು ನಮ್ಮೂರ ಹೋಟೆಲ್, ತಾಜಾ ತಿಂಡಿ, ಕೇಕ್ ವಾಲಾ, ಕೂಲ್ ಜಾಯಿಂಟ್, ಆರೋಗ್ಯ ಆಹಾರ, ಕೇನ್ ಓಲಾ, ಬ್ರ್ಯಾಂಡ್‌ನ ಹೋಟೆಲ್, ದರ್ಶಿನಿ, ಬೇಕರಿ, ರೆಸ್ಟೊರೆಂಟ್, ಕಬ್ಬಿನ ಹಾಲಿನ ಅಂಗಡಿಗಳನ್ನು ಕೇಳಿರಬಹುದು. ಅಲ್ಲಿನ ಶುಚಿ-ರುಚಿಯಾದ ಆಹಾರಗಳನ್ನು ಸವಿದಿರಬಹುದು. ಈ ಎಲ್ಲ ಬ್ರ್ಯಾಂಡ್‌ಗಳ ಸ್ಥಾಪಕರಾದ ಗೋಪಾಡಿ ಶ್ರೀನಿವಾಸ ರಾವ್ ಅವರು ಇದೀಗ ನಿರಂತರವಾಗಿ ಸರಕಾರಿ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಹೊಸ ಮಾದರಿ ವ್ಯವಸ್ಥೆಯೊಂದನ್ನು ಅನುಷ್ಠಾನಗೊಳಿಸುತ್ತಿದ್ದಾರೆ.
ಮೊದಲಿಗೆ ಕೋಟೇಶ್ವರದಲ್ಲಿ 24 ಸರಕಾರಿ ಶಾಲೆಗಳ ಶೌಚಾಲಯಗಳ ಸ್ವಚ್ಛತೆಗೆ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಹೊಸ ವಾಹನ, ಸ್ವಚ್ಛತಾ ಪರಿಕರಗಳನ್ನು ಮತ್ತು ಸಿಬ್ಬಂದಿಯ ವ್ಯವಸ್ಥೆಗೊಳಿಸಿದ್ದಾರೆ. ದಿನಕ್ಕೆ 4-5 ಶಾಲೆಗಳಂತೆ ವಾರಕ್ಕೊಮ್ಮೆ ಈ ವಲಯದ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗುವುದು. ಇದಕ್ಕೆ ಸಂಬಂಧಿಸಿದ ವಿದ್ಯುತ್, ನೀರು, ಸಿಬ್ಬಂದಿ ವೇತನ, ವಾಹನ ಸಾರಿಗೆ ವೆಚ್ಚ ಎಲ್ಲವನ್ನೂ ಗೋಪಾಡಿ ಶ್ರೀನಿವಾಸ ರುಕ್ಮಿಣಿ ಪ್ರತಿಷ್ಠಾನವು ಮಾಡಲಿದೆ.
ಕರ್ನಾಟಕ ಮಹಿಳಾ ಯಕ್ಷಗಾನ ತಂಡದಿಂದ ಯಕ್ಷೋತ್ಸವ ಸಂಪನ್ನ
ಯಾವುದೇ ಸರಕಾರವಿರಲಿ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಕೃಷಿಕರಿಗೆ ಕೃಷಿ ಉಪಕರಣ, ಸಾಲ, ಸಾರ್ವಜನಿಕರಿಗೆ ಸಾರಿಗೆ ವಾಹನ ಇತ್ಯಾದಿಗಳನ್ನು ಒದಗಿಸುತ್ತದೆ. ದಾನಿಗಳೂ ಸರಕಾರಿ ಶಾಲೆಗಳಿಗೆ ಕಟ್ಟಡ ನಿರ್ಮಾಣ, ನೋಟ್ ಪುಸ್ತಕ, ಕೊಳವೆ ಬಾವಿ ಇತ್ಯಾದಿ ನೆರವು ನೀಡುತ್ತಾರೆ. ಆದರೆ ನೆರವು ನೀಡಿದ ಬಳಿಕ ವಸ್ತುಗಳ ಸರಿಯಾದ ನಿರ್ವಹಣೆ ಇರದಿದ್ದರೆ, ಅವುಗಳು ಪ್ರಯೋಜನಕ್ಕೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರಿ ಶೌಚಾಲಯಗಳ ನಿರ್ವಹಣೆಗೆ ಗೋಪಾಡಿ ರುಕ್ಮಿಣಿ ಪ್ರತಿಷ್ಠಾನವು ವ್ಯವಸ್ಥೆಯನ್ನು ಕಲ್ಪಿಸಿದೆ ಎಂದು ಗೋಪಾಡಿ ಶ್ರೀನಿವಾಸ ರಾವ್ ಅವರು ವಿಶ್ವವಾಣಿ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರಿಸಿದ್ದಾರೆ.