ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶ್ರೀಕೃಷ್ಣನ ಭಕ್ತಿ ವೇದಾಂತ ಸಾರವನ್ನು ಜಗತ್ತಿನಾದ್ಯಂತ ಪಸರಿಸಿದ ಶ್ರೀಲ ಪ್ರಭುಪಾದರು ವಿಶ್ವಗುರುಗಳು: ಪುತ್ತಿಗೆ ಶ್ರೀ

ಇಸ್ಕಾನ್ ಸಂಸ್ಥಾಪಕ ಶ್ರೀಲ ಪ್ರಭುಪಾದ ಅವರಿಗೆ ಕುಂಭಮೇಳದ ಸಂದರ್ಭದಲ್ಲಿ ಅಖಾಡ ಪರಿಷತ್ ವತಿಯಿಂದ ನೀಡಲಾದ `ವಿಶ್ವ ಗುರು' ಗೌರವವನ್ನು ಶ್ರೀ ಕೃಷ್ಣನಿಗೆ ಭಾನುವಾರ ಸಮರ್ಪಿಸಲಾಯಿತು. ಉಡುಪಿ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಬೆಂಗಳೂರಿನ ಇಸ್ಕಾನ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉಡುಪಿಯಲ್ಲಿ ಶ್ರೀಲ ಪ್ರಭುಪಾದ ಅವರಿಗೆ ನೀಡಿರುವ `ವಿಶ್ವ ಗುರು' ಗೌರವವನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಲಾಯಿತು.

ಉಡುಪಿ, ಡಿ.21: ಪಾಶ್ಚಾತ್ಯ ದೇಶಗಳಿಗೆ ಶ್ರೀ ಕೃಷ್ಣನ ಭಕ್ತಿ ವೇದಾಂತ ಸಾರವನ್ನು ತಮ್ಮ ಉಪನ್ಯಾಸ ಹಾಗೂ ಭಕ್ತಿ ಚಳವಳಿಯ ಮೂಲಕ ಪಸರಿಸಿದ ಶ್ರೀಲ ಪ್ರಭುಪಾದರು ನಿಜಾರ್ಥದಲ್ಲಿಯೇ ವಿಶ್ವಗುರುವಾಗಿದ್ದಾರೆ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಇಸ್ಕಾನ್ ಸಂಸ್ಥಾಪಕ ಶೀಲ ಪ್ರಭುಪಾದ ಅವರಿಗೆ ಕುಂಭಮೇಳದ ಸಂದರ್ಭದಲ್ಲಿ ಅಖಾಡ ಪರಿಷತ್ ವತಿಯಿಂದ ನೀಡಲಾದ `ವಿಶ್ವ ಗುರು' ಗೌರವವನ್ನು ಶ್ರೀ ಕೃಷ್ಣನಿಗೆ ಸಮರ್ಪಿಸುವ (Krishna Samarpanotsava) ಕಾರ್ಯಕ್ರಮವನ್ನು ನಗರದ ರಾಜಾಂಗಣದಲ್ಲಿ ಭಾನುವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಇದೊಂದು ಶ್ರೀ ಕೃಷ್ಣ ಮಠದ ಇತಿಹಾಸದಲ್ಲಿಯೇ ಸುವರ್ಣ ಅಕ್ಷರದಲ್ಲಿ ಬರೆದಿಡಬೇಕಾದ ಅಪೂರ್ವ ಕ್ಷಣ ಎಂದು ಬಣ್ಣಿಸಿದ ಶ್ರೀಗಳು, ಶ್ರೀಕೃಷ ವಂದೇ ಜಗದ್ಗುರುಂ ಎನ್ನುವಾಗ ಅವನ ಸನ್ನಿಧಾನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಸುಯೋಗವೇ ಸರಿ. ಶ್ರೀ ಕೃಷ್ಣನೇ ಹೇಳಿದಂತೆ ಕಲಿಯುಗದಲ್ಲಿ ಧರ್ಮ ರಕ್ಷಣೆಗಾಗಿ ಭಗವಂತನ ಅವತಾರ ಭಕ್ತರ ರೂಪದಲ್ಲಿ ಆಗುತ್ತದೆ. ಇದರಂತೆ ಆಚಾರ್ಯ ಮಧ್ವರು, ಶ್ರೀ ಪ್ರಭುಪಾದರ ಅವತಾರವಾಗಿದೆ. ವಿಶ್ವ ಗುರುವಾಗಿ ಶ್ರೀ ಕೃಷ್ಣಭಕ್ತಿ ಸಾರವನ್ನು ಜಗದೆಲ್ಲೆಡೆ ಸಾರಿದ ಶ್ರೀ ಪ್ರಭುಪಾದಾರಿಗೆ ಇದೀಗ ಶ್ರೀಕೃಷ್ಣ ಹಾಗೂ ಆಚಾರ್ಯ ಮಧ್ವರು ಒಂದಾಗಿ ಮತ್ತೊಮ್ಮೆ ವಿಶ್ವ ಗುರು ಉಪಾಧಿ ನೀಡಿ ಹರಸಿದ್ದಾರೆ. ಹೀಗಾಗಿ ಇದು ಮಿನಿ ಕುಂಭವಾಗಿದೆ ಎಂದು ಅವರು ನುಡಿದರು.

ಪ್ರಭುಪಾದರು ಕೂಡ ಮಧ್ವ ಪರಂಪರೆಯಲ್ಲಿಯೇ ಅಂದರೆ ಮಧ್ವಗೌಡೀಯ ಪರಂಪರೆಯಿಂದಲೇ ಬಂದಿರುವುದು ಮಹಾಸಂತೋಷ ತಂದಿದೆ. ಹೀಗಾಗಿ ಪ್ರಭುಪಾದರಿಗೆ ವಿಶ್ವಗುರು ಪದವಿ ಶ್ರೀಕೃಷ್ಣನ ಅನುಗ್ರಹದಿಂದಲೇ ಸಿಕ್ಕಿದೆ. 1976ರಲ್ಲಿ ನಮ್ಮ ಪ್ರಥಮ ಪರ್ಯಾಯ ಸಂದರ್ಭದಲ್ಲಿ ಶ್ರೀ ಪ್ರಭುಪಾದರು ಉಡುಪಿಗೆ ಆಗಮಿಸಿದ್ದರು. ಇದೀಗ ನಮ್ಮ ನಾಲ್ಕನೇ ಪರ್ಯಾಯಾವಧಿಯಲ್ಲಿ ಅವರು ವಿಶ್ವಗುರುವಾಗಿ ಬಂದಿರುವುದು ಸಂತೋಷ ತಂದಿದೆ ಎಂದು ಪುತ್ತಿಗೆ ಶ್ರೀಗಳು ತಿಳಿಸಿದರು.

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್‌ ಕಲ್ಯಾಣ್‌; ʼಅಭಿನವ ಕೃಷ್ಣದೇವರಾಯʼ ಬಿರುದು

ಉತ್ತರ ಪ್ರದೇಶ ಭಗವಂತ ಬೇರೆ ಬೇರೆ ಅವತಾರದಲ್ಲಿ ಜನಿಸಿದ ಪುಣ್ಯ ಭೂಮಿ ಆದ್ದರಿಂದಲೇ ಅದು ದೇವಭೂಮಿ. ದಕ್ಷಿಣ ಭಾರತ ಆಚಾರ್ಯ (ಗುರುಗಳು)ರಾದ ಮಧ್ವರು, ರಾಮಾನುಜರು, ಶಂಕರರು ಮೊದಲಾದವರು ಅವತರಿಸಿದ ಪುಣ್ಯಭೂಮಿ. ಹರಿದ್ವಾರ ನಿರಂಜನಿ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಶ್ರೀ ಕೈಲಾಶಾನಂದ ಗಿರಿ ಅವರು ಉಡುಪಿಗೆ ಆಗಮಿಸುವ ಮೂಲಕ ಇಲ್ಲಿ ದಕ್ಷಿಣೋತ್ತರ ಸಂಗಮವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹರಿದ್ವಾರ ನಿರಂಜನಿ ಅಖಾಡದ ಮಹಾಮಂಡಲೇಶ್ವರ ಶ್ರೀ ಕೈಲಾಸಾನಂದ ಗಿರಿ ಮಹಾರಾಜ್ ಅವರಿಗೆ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಶ್ರೀಕೃಷ್ಣನ ಕಡೆಗೋಲು, ಪ್ರಸಾದ ನೀಡಿ ಗೌರವಿಸಿದರು. ಹಾಗೆಯೇ ಮಹಾಮಂಡಲೇಶ್ವರ ಶ್ರೀ ಕೈಲಾಸಾನಂದ ಗಿರಿ ಅವರಿಂದ ಪುತ್ತಿಗೆ ಉಭಯಶ್ರೀಗಳಿಗೆ ಗೌರವಾರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕೈಲಾಸಾನಂದ ಗಿರಿ ಅವರು, ಇಸ್ಕಾನ್ ಸಂಸ್ಥಾಪಕ ಶ್ರೀಲ ಪ್ರಭುಪಾದ ಅವರಿಗೆ `ವಿಶ್ವಗುರು ' ಬಿರುದನ್ನು ನೀಡುವುದು ಸಮಸ್ತ ಅಖಾಡಗಳ ಒಪ್ಪಿಗೆಯಿಂದ ಘೋಷಿಸಲಾಗಿತ್ತು. ಗೀತಾಚಾರ್ಯನ ನಾಡಾದ ಕರ್ನಾಟಕ ನನಗೆ ಅತ್ಯಂತ ಪ್ರಿಯವಾದ ಸ್ಥಳವಾಗಿದೆ. ಹರಿದ್ವಾರ ಬಿಟ್ಟರೆ ನೀವು ಎಲ್ಲಿರಲು ಇಷ್ಟಪಡುತ್ತೀರಾ ಎಂದು ಯಾರಾದರೂ ಪ್ರಶ್ನಿಸಿದರೆ ನಾನು ನಿಶ್ಚಯವಾಗಿಯೂ ` ಕರ್ನಾಟಕ ' ಎನ್ನುತ್ತೇನೆ. ಯಾಕೆಂದರೆ ಇದು ಅಧ್ಯಾತ್ಮದ ಭೂಮಿಯಾಗಿದೆ. ತನ್ನ ಭಕ್ತನಿಗಾಗಿ ತಿರುಗಿ ನಿಂತು ದರ್ಶನಕೊಟ್ಟ ಶ್ರೀಕೃಷ್ಣನ ನಾಡಾಗಿದೆ ಎಂದರು.

ಪರ್ಯಾಯ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಬೆಂಗಳೂರಿನ ಇಸ್ಕಾನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ರಚಿಸಿದ `ಶ್ರೀಲ ಪ್ರಭುಪಾದ ಚರಿತಾಮೃತಮ್ ಕನ್ನಡ ಮಹಾಕಾವ್ಯದ ಲೋಕಾರ್ಪಣೆ ನಡೆಯಿತು. ಇಸ್ಕಾನ್ ಬೆಂಗಳೂರು ಮತ್ತು ಅಕ್ಷಯಪಾತ್ರ ಫೌಂಡೇಶನ್ ಅಧ್ಯಕ್ಷ ಮಧು ಪಂಡಿತ್ ದಾಸ್ ಪ್ರಾಸ್ತಾವಿಕ ಮಾತುಗಳಲ್ಲಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಪುತ್ತಿಗೆ ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥರು, ಇಸ್ಕಾನ್ ಬೆಂಗಳೂರಿನ ಚಂಚಲಪತಿ ದಾಸರು, ವಾಸುದೇವ ಕೇಶವ ದಾಸರು ಮೊದಲಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಭಗವದ್ ಗೀತಾ ಪಾರಾಯಣ ಮತ್ತು ಇಸ್ಕಾನ್ ಭಕ್ತಾದಿಗಳಿಂದ ಹರಿನಾಮ ಸಂಕೀರ್ತನೆ ನಡೆಯಿತು.ಇಸ್ಕಾನ್ ಬೆಂಗಳೂರು ಸಂಸ್ಥೆಯ ಉಪಾಧ್ಯಕ್ಷ ಚಂಚಲಾಪತಿ ದಾಸ್ ಅವರು ಚಂಚಲಪತಿ ಸ್ವಾಗತ ಭಾಷಣ ನೀಡಿದರು.

Roopa Gururaj Column: ಕೃಷ್ಣನ ಪರಮಭಕ್ತೆ ಕೃಷ್ಣಾಬಾಯಿ

ಈ ಸಂದರ್ಭದಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದ ಸಂದರ್ಭದಲ್ಲಿ ಶ್ರೀ ಪ್ರಭುಪಾದರಿಗೆ ವಿಶ್ವಗುರು ಬಿರುದು ನೀಡಿ ಗೌರವಿಸಿದ ಕ್ಷಣಗಳ ವೀಡಿಯೋ ಪ್ರದರ್ಶನ, ಪ್ರಧಾನಿ ಮೋದಿ ಅವರ ಸಂದೇಶದ ಮರು ಪ್ರದರ್ಶನ ನಡೆಯಿತು. ಶ್ರೀಕೃಷ್ಣ ಸಮರ್ಪಣೋತ್ಸವದ ಫಲಕದ ಅನಾವರಣ, ಶ್ರೀಲ ಪ್ರಭುಪಾದರ ಮೂರ್ತಿಗೆ ಯತಿತ್ರಯರಿಂದ ಪುಷ್ಪವೃಷ್ಟಿ ನಡೆಯಿತು.