Mpox Case: ದುಬೈ ನಿವಾಸಿ ಮಂಗಳೂರಿನ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ದೃಢ
ಕಳೆದ 19 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿರುವ ಈ ರೋಗಿಯು ಜನವರಿ 17ರಂದು ಮಂಗಳೂರಿಗೆ ಆಗಮಿಸಿದ್ದರು. ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಅವರ ಮೈಯಲ್ಲಿ ದದ್ದುಗಳ ಲಕ್ಷಣಗಳು ಕಂಡುಬಂದವು.


ಮಂಗಳೂರು: ಮಂಗಳೂರಿನಲ್ಲಿರುವ (Mangaluru news) 40 ವರ್ಷದ ಪುರುಷನಲ್ಲಿ ಮಂಕಿಪಾಕ್ಸ್ (MPox case) ಪ್ರಕರಣವನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV) ದೃಢಪಡಿಸಿದೆ. ಕಾರ್ಕಳ (ಉಡುಪಿ ಜಿಲ್ಲೆ) ಮೂಲದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.
ಕಳೆದ 19 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿರುವ ಈ ರೋಗಿಯು ಜನವರಿ 17ರಂದು ಮಂಗಳೂರಿಗೆ ಆಗಮಿಸಿದ್ದರು. ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಅವರ ಮೈಯಲ್ಲಿ ದದ್ದುಗಳ ಲಕ್ಷಣಗಳು ಕಂಡುಬಂದವು. ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಅವರ ಎಂಪೋಕ್ಸ್ ಮಾದರಿಗಳನ್ನು ಬೆಂಗಳೂರು ವೈದ್ಯಕೀಯ ಕಾಲೇಜಿಗೆ (BMC) ಮತ್ತು ನಂತರ ಪುಣೆಯ NIVಗೆ ಕಳುಹಿಸಲಾಯಿತು.
ಈ ವ್ಯಕ್ತಿ ಸ್ಥಿರವಾಗಿದ್ದಾರೆ ಮತ್ತು ಯಾವುದೇ ಗಂಭೀರ ತೊಂದರೆಗಳಿಲ್ಲ. ಅವರು ಶೀಘ್ರದಲ್ಲೇ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನವೀನ್ಚಂದ್ರ ಕುಲಾಲ್ ಹೇಳಿದ್ದಾರೆ. ರೋಗಿಯ 36 ವರ್ಷದ ಪತ್ನಿಯನ್ನು ಪ್ರಾಥಮಿಕ ಸಂಪರ್ಕದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರಲ್ಲಿ ಯಾವುದೇ ಲಕ್ಷಣಗಳನ್ನು ನಿರೀಕ್ಷಿಸಲು ಕೆಲವು ದಿನಗಳವರೆಗೆ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ.
ಎಂಪಾಕ್ಸ್ ವಿಷಯದಲ್ಲಿ ಸಾರ್ವಜನಿಕರು ಭಯಭೀತರಾಗಬಾರದು ಎಂದು ಸೂಚಿಸಲಾಗಿದೆ. ಈ ಪ್ರಕರಣವು ಸೌಮ್ಯ ಸ್ವರೂಪದ್ದಾಗಿದ್ದು, ಸೋಂಕು ತಗುಲುವಿಕೆ ಕಡಿಮೆಯಾಗಿದೆ. ಆದರೆ ಜ್ವರ, ತಲೆನೋವು, ಸ್ನಾಯು ನೋವು, ಶೀತ, ಬೆವರುವುದು, ಗಂಟಲು ನೋವು ಮತ್ತು ಕೆಮ್ಮು ಹಾಗೂ ಚರ್ಮದ ದದ್ದುಗಳಂತಹ ಸಾಮಾನ್ಯ ಲಕ್ಷಣಗಳನ್ನು ಗಮನಿಸುವುದು ಮತ್ತು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಲಾಗಿದೆ.
ವಿಶೇಷವಾಗಿ ಈ ವೈರಸ್‌ಗೆ ಹೆಚ್ಚಿನ ಅಪಾಯವಿದೆ ಎಂದು ಘೋಷಿಸಲಾದ ದೇಶಗಳಿಗೆ ಪ್ರಯಾಣದ ಇತಿಹಾಸವಿದ್ದರೆ ಅಥವಾ ಎಂಪಾಕ್ಸ್ ಪೀಡಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದರೆ ಈ ರೋಗಕ್ಕೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳನ್ನು ಇದೆಯೇ ಎಂದು ಗಮನಿಸುವುದು ಒಳ್ಳೆಯದು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: Mpox: ಈ ವರ್ಷದ ಮೊದಲ ಮಂಕಿ ಪಾಕ್ಸ್ ಪ್ರಕರಣ ಬೆಂಗಳೂರಿನಲ್ಲಿ ಪತ್ತೆ; ಏನಿದು ಕಾಯಿಲೆ? ಲಕ್ಷಣಗಳೇನು?