CM Siddaramaiah: ಎರಡು ಅಪಘಾತಗಳಲ್ಲಿ ಮಡಿದ 14 ಮಂದಿಗೆ ಸಿಎಂ ಸಂತಾಪ, ಪರಿಹಾರ ಘೋಷಣೆ
ಎರಡೂ ಅಪಘಾತಗಳಲ್ಲಿ ಮೃತರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಎರಡು ಪ್ರತ್ಯೇಕ ಅಪಘಾತಗಳಲ್ಲಿ (Road Accident) 14 ಮಂದಿ ಸಾವನ್ನಪ್ಪಿದ್ದು, ಮೃತರ ಕುಟುಂಬಗಳಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಸಾವನ್ನಪ್ಪಿರುವ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಗಳಿಗೆ ಚಿರಶಾಂತಿ ಕೋರುತ್ತೇನೆ. ಈ ದುರ್ಘಟನೆಗಳಲ್ಲಿ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ನೊಂದ ಜನರಿಗೆ ನನ್ನ ಸಂತಾಪಗಳು. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಸಾವನ್ನಪ್ಪಿರುವ ಸುದ್ದಿ ತಿಳಿದು ಸಂಕಟವಾಯಿತು.
— CM of Karnataka (@CMofKarnataka) January 22, 2025
ಮೃತರ ಆತ್ಮಗಳಿಗೆ ಚಿರಶಾಂತಿ ಕೋರುತ್ತೇನೆ. ಈ ದುರ್ಘಟನೆಗಳಲ್ಲಿ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ನೊಂದ ಜನರಿಗೆ ನನ್ನ ಸಂತಾಪಗಳು.
ಮೃತರ… pic.twitter.com/I9lrtfojK0
ಮಂಜು ತುಂಬಿದ ಹೆದ್ದಾರಿಯಲ್ಲಿ ತರಕಾರಿ ಲಾರಿ ಪಲ್ಟಿಯಾಗಿ 10 ಜನ ಸಾವು
ಕಾರವಾರ: ತರಕಾರಿ ಕೊಂಡೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿ 10 ಜನ ದುರ್ಮರಣಕ್ಕೀಡಾದ ಭಯಾನಕ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 63ರ ಗುಳ್ಳಾಪುರ ಘಟ್ಟ ಭಾಗದಲ್ಲಿ ದುರ್ಘಟನೆ ನಡೆದಿದೆ. ಲಾರಿ ಪಲ್ಟಿಯಾಗಿ 9 ಜನ ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸವಣೂರಿನಿಂದ ಕುಮಟಾಗೆ ತೆರಳುತ್ತಿದ್ದ ತರಕಾರಿ ತುಂಬಿದ್ದ ಲಾರಿಯಲ್ಲಿ 25 ಜನರು ಪ್ರಯಾಣಿಸುತ್ತಿದ್ದರು. ಮೃತರು ಹಾವೇರಿ ಜಿಲ್ಲೆ ಸವಣೂರು ಮೂಲದವರೆಂಬ ಮಾಹಿತಿ ದೊರೆತಿದೆ.
ನಸುಕಿನ ಜಾವ ಮಂಜು ಇದ್ದಿದ್ದರಿಂದ ದಾರಿ ಕಾಣದೆ ಹೆದ್ದಾರಿಯ ಬದಿಗೆ ಹೋಗಿ ಲಾರಿ ಪಲ್ಟಿಯಾಗಿದೆ ಎಂದು ಶಂಕಿಸಲಾಗಿದೆ. ಚಾಲಕ ನಿದ್ರಾವಶನಾಗಿದ್ದರಿಂದ ಅಪಘಾತವಾಗಿರುವ ಸಾಧ್ಯತೆಯೂ ಇದೆ. ಘಟನೆ ಸ್ಥಳಕ್ಕೆ ಯಲ್ಲಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಿದ್ದ ಲಾರಿಯಡಿ ಸಿಲುಕಿದ್ದ ಶವಗಳನ್ನು ಕ್ರೇನ್ ಮೂಲಕ ಲಾರಿಯನ್ನೆತ್ತಿ ಹೊರತೆಗೆಯಲಾಯಿತು. ಹುಬ್ಬಳ್ಳಿ ಕಿಮ್ಸ್‌ಗೆ ಚಿಕಿತ್ಸೆಗೆ ಕಳುಹಿಸಿದ್ದ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು, ಇಲ್ಲಿ ದಾಖಲಾದವರ ಪೈಕಿ ಇನ್ನಷ್ಟು ಗಂಭೀರ ಗಾಯಗಳಿಗೀಡಾದವರೂ ಇರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಇದೆ.
ರಾಯಚೂರಿನಲ್ಲಿ ಭೀಕರ ಅಪಘಾತಕ್ಕೆ ಮೂವರು ವಿದ್ಯಾರ್ಥಿಗಳು ಬಲಿ
ರಾಯಚೂರು: ರಾಜ್ಯದಲ್ಲಿ ಮಂಗಳವಾರ ರಾತ್ರಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕ್ರೂಸರ್ ವಾಹನದ ಟೈರ್ ಸ್ಫೋಟವಾದ ಪರಿಣಾಮ ವಾಹನ ಪಲ್ಟಿಯಾಗಿ ಚಾಲಕ ಸೇರಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹರಗಿನಮರ ಕ್ಯಾಂಪ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕ್ರೂಸರ್ ವಾಹನದ ಟೈರ್ ಬ್ಲಾಸ್ಟ್ ಆಗಿ ಚಾಲಕ ಸೇರಿ ಮಂತ್ರಾಲಯದ ಮಠದ ಸಾಂಸ್ಕೃತಿಕ ವಿದ್ಯಾಪೀಠದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ವಾಹನ ಚಾಲಕ ಶಿವು, ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳಾದ ಹಯವದನ ಕಟ್ಟಿ, ಸುಜಯೀಂದ್ರ, ಅಭಿಲಾಶ ಮೃತ ವಿದ್ಯಾರ್ಥಿಗಳು. ವಿದ್ಯಾರ್ಥಿ ಜಯಸಿಂಹ ಸ್ಥಿತಿ ಚಿಂತಾಜನಕವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Sirsi News: ಅಪಘಾತ: 10 ಮಂದಿ ಸಾವು, 12 ಜನರಿಗೆ ಗಂಭೀರ ಗಾಯ