Murder Case: ರುಂಡವಿಲ್ಲದ ಮಹಿಳೆಯ ಶವದ ರಹಸ್ಯ ಬಯಲು: ಬಂಗಾರದ ಆಸೆಗಾಗಿ ಕೊಂದ ಪಾಪಿ!
ಮುಂಡಗೋಡು ತಾಲೂಕಿನ ಮಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿ ಅರಣ್ಯದಲ್ಲಿ ಕಂಡುಬಂದ ರುಂಡ ಇಲ್ಲದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲೆಯಾದವರು ಗೂಡಂಗಡಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ 75 ವರ್ಷದ ವೃದ್ಧೆ ಶಿವಕ್ಕ ಪಾಟೀಲ್.
ಮಹಿಳೆಯ ಶವ ದೊರೆತ ಜಾಗ -
ಉತ್ತರ ಕನ್ನಡ, ಮಾರ್ಚ್ 05: ಉತ್ತರ ಕನ್ನಡ (Uttara Kannada) ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ, ಕಾಡಿನಲ್ಲಿ ಕಂಡುಬಂದ ರುಂಡವಿಲ್ಲದ ಮಹಿಳೆಯ ಶವದ ಪ್ರಕರಣದ ರಹಸ್ಯವನ್ನು ಪೊಲೀಸರು ಬೇಧಿಸಿದ್ದಾರೆ. ಮುಂಡಗೋಡು (Mundagodu) ಊರಿನ ಪಕ್ಕದ ನಿರ್ಜನ ಕಾಡಿನಲ್ಲಿ (Forest) ಮಹಿಳೆಯೊಬ್ಬಳ ಬೆತ್ತಲೆ ಕಂಡುಬಂದಿತ್ತು. ಆ ದೇಹಕ್ಕೆ ರುಂಡವೇ ಇರಲಿಲ್ಲ. ನಿಧಿಯಾಸೆಗೆ ಕತ್ತು ಕತ್ತರಿಸಿ ಕೊಲೆ (Murder case) ಮಾಡಲಾಗಿದೆ ಎಂದು ಗುಮಾನಿ ಎದ್ದಿತ್ತು. ಈ ಕಗ್ಗೊಲೆ ಜಿಲ್ಲೆಯ ಪೊಲೀಸರ ನಿದ್ದೆ ಕೆಡಿಸಿತ್ತು. ಹತ್ತು-ಹದಿನೈದು ದಿನಗಳ ತನಿಖೆಯ (Investigation) ನಂತರ ಸತ್ಯ ಬಯಲಾಗಿದೆ.
ಫೆಬ್ರವರಿ 20ರ ಸಂಜೆ, ಕಟ್ಟಿಗೆ ತರಲು ಹೋದ ಮಹಿಳೆ, ಪೊದೆಗಳ ನಡುವೆ ರುಂಡವಿಲ್ಲದ ದೇಹವೊಂದು ಭಯಾನಕ ಪರಿಸ್ಥಿತಿಯಲ್ಲಿ ಬೋರಲಾಗಿ ಬಿದ್ದಿದ್ದುದನ್ನು ಕಂಡಿದ್ದರು. ಆತಂಕಗೊಂಡ ಮಹಿಳೆ ವಿಷಯವನ್ನು ಊರಿನವರಿಗೆ ತಿಳಿಸಿದ್ದರು. ತಕ್ಷಣ ಪೊಲೀಸರು ಬಂದು ತನಿಖೆ ಪ್ರಾರಂಭಿಸಿದ್ದರು. ಒಣ ಎಲೆಗಳಲ್ಲಿ ಮುಚ್ಚಿ ಹೋಗಿದ್ದ ಆ ಶರೀರದಲ್ಲಿ ಇದ್ದ ಒಂದೇ ಕುರುಹು ಲಿಂಗಾಯತ ಸಂಪ್ರದಾಯದ ಗುಂಡಗಡಿಗೆ. ಅದರ ಜಾಡು ಹಿಡಿದು ಹೊರಟ ಪೊಲೀಸರು ಕೊನೆಗೂ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಡಗೋಡು ತಾಲೂಕಿನ ಮಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿ ಅರಣ್ಯದಲ್ಲಿ ಕಂಡುಬಂದ ರುಂಡ ಇಲ್ಲದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲೆಯಾದವರು ಗೂಡಂಗಡಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ 75 ವರ್ಷದ ವೃದ್ಧೆ ಶಿವಕ್ಕ ಪಾಟೀಲ್. ಕೊಂದವನು ಆಕೆಯ ಮನೆಯ ಹತ್ತಿರವಿದ್ದ 45 ವರ್ಷದ ಕೃಷ್ಣಪ್ಪ ಮೇದರ ಎಂಬ ಕ್ರೂರಿ.
ಎದುರುಮನೆಯಲ್ಲೇ ಅಡಗಿದ್ದ ಹಂತಕ
ಈ ಕೃಷ್ಣಪ್ಪ ಮೇದರ್ ಇನ್ನೊಂದು ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಈತ ಶಿವಮೊಗ್ಗ ಜಿಲ್ಲೆಯ ಸೊರಬದ ಹೊಸಮನೆ ಗ್ರಾಮದ ನಿವಾಸಿ. ಕಳೆದ ಒಂದು ವರ್ಷದ ಹಿಂದೆ ತನ್ನ ಸ್ನೇಹಿತನನ್ನೇ ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿ ಶವವನ್ನು ಎಸೆದು ಹೋಗಿದ್ದ. ನಂತರ ಪೊಲೀಸರು ತನಿಖೆ ನಡೆಸಿ, ಈತನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು.
Body found: ರುಂಡವಿಲ್ಲದ ಮಹಿಳೆಯ ನಗ್ನ ಮೃತದೇಹ ಅರಣ್ಯದಲ್ಲಿ ಪತ್ತೆ
ಕಳೆದ ಆರು ತಿಂಗಳ ಹಿಂದೆ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದು ತನ್ನ ಅತ್ತೆಯ ಗ್ರಾಮವಾದ ಮಳಗಿಯಲ್ಲಿ ವಾಸವಾಗಿದ್ದ. ಕೊಲೆಯಾದ ಶಿವಕ್ಕನ ಎರಡೂ ಕೈಗಳಲ್ಲಿ ಬಂಗಾರದ ತೆಳುವಾದ ಪಾಟಲಿ, ಬಂಗಾರದ ಸರ, ಒಂದು ಬಂಗಾರದ ಉಂಗುರ ಇದ್ದಿದ್ದನ್ನು ನೋಡಿ ಹಣದ ಆಸೆಗೆ ಆಕೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಗುಟ್ಕಾ ತಿನ್ನಲು ಈ ಮಹಿಳೆಯ ಅಂಗಡಿಗೆ ಈ ಕೊಲೆಗಡುಕ ಬರುತ್ತಿದ್ದ. ಅಜ್ಜಿಯ ನೆರೆಮನೆಯಲ್ಲೇ ಇದ್ದ ಈತ ಆಕೆಯ ನೋವುಗಳಿಗೆ ಸ್ಪಂದಿಸುವಂತೆ ನಟಿಸುತ್ತಿದ್ದ. ಆಕೆ ಒಬ್ಬಳೇ ಇದ್ದಾಳೆ, ಆಕೆಯ ಇಬ್ಬರು ಮಕ್ಕಳು ಶಿರಸಿ, ಯಲ್ಲಾಪುರದಲ್ಲಿ ನೆಲೆಸಿದ್ದಾರೆ, ಇನ್ನೊಬ್ಬಳು ಶಿವಕ್ಕನ ಮನೆಯ ಹಿತ್ತಲಲ್ಲೇ ಇದ್ದಾಳೆ, ಇಬ್ಬರಿಗೂ ಪ್ರತಿದಿನವೂ ಜಗಳ. ಇದೇ ಈ ಕೊಲೆಗಡುಕನಿಗೆ ಆಧಾರವಾಗಿತ್ತು.
ಈ ಹಿಂದೆ ಒಮ್ಮೆ ಅಜ್ಜಿಗೆ ಆರಾಮಿಲ್ಲದಾಗ ಕೃಷ್ಣಪ್ಪ ಆಸ್ಪತ್ರೆಗೆ ಕರೆದೊಯ್ದಿದ್ದ. ಮತ್ತೊಂದು ಬಾರಿ ಫೆಬ್ರವರಿ 16ರಂದು ಶಿವಕ್ಕಳಿಗೆ ಆರೋಗ್ಯ ಸರಿಯಿಲ್ಲವೆಂದು ಆರೋಪಿಯ ಹತ್ತಿರ ಹೇಳಿಕೊಂಡಿದ್ದಳು. ಕೃಷ್ಣಪ್ಪ ಈಕೆಯನ್ನು ಹಾನಗಲ್ ಕುಮಾರಸ್ವಾಮಿ ಮಠಕ್ಕೆ ಕರೆದುಕೊಂಡು ಹೋದ, ಆಸ್ಪತ್ರೆಗೂ ಸಹ. ಆಗ ಆತ ಆಕೆಯಲ್ಲಿದ್ದ 4 ತೊಲೆ ಬಂಗಾರ ನೋಡಿದ. ಆತನಲ್ಲಿ ದುರಾಸೆ ಅಂಕುರಿಸಿತು.
ವಾಪಸ್ ಬರುವಾಗ ಕೊಳಗಿ ಅರಣ್ಯ ಪ್ರದೇಶದ ಕಾಡಲ್ಲಿ ಬೈಕ್ ಚಲಾಯಿಸಿದ. ವೃದ್ಧೆಯ ಪ್ರಶ್ನೆಗೆ, ಮೂತ್ರಕ್ಕಾಗಿ ಇಲ್ಲಿ ಬಂದೆ ಅಂತ ಸುಳ್ಳು ಹೇಳಿದ್ದಾನೆ. ಆಕೆಯನ್ನು ನಿಲ್ಲಿಸಿ ಸ್ವಲ್ಪ ದೂರ ತೆರಳಿದಂತೆ ಮಾಡಿ ಅಜ್ಜಿಯ ಗಮನ ತಪ್ಪಿಸಿ ಮೊದಲು ಬಡಿಗೆಯಿಂದ ಹೊಡೆದು ನಂತರ ಕೋಳಿಯ ಕತ್ತು ಕೊಯ್ದ ಹಾಗೆ ಆಕೆಯ ಕುತ್ತಿಗೆ ಕೊಯ್ದು ಬಂಗಾರ ಎತ್ತಿಕೊಂಡು ಓಡಿ ಹೋಗಿದ್ದಾನೆ. ವಾಪಸ್ 7 ಗಂಟೆಗೆ ಬಂದು ಕಂದಲಿಯಿಂದ ತಲೆ ಕಡಿದು ಹಾನಗಲ್‌ನ ಒಂದು ಜಾಗದಲ್ಲಿ ಹೂತು ಹಾಕಿದ್ದಾನೆ. ಅದು ಕ್ರೈಮ್ ನಡೆದ ಸ್ಥಳದಿಂದ 10-15 ಕಿ.ಮೀ ದೂರದಲ್ಲಿದೆ.
ಪ್ರಕರಣದ ಜಾಡು ಹಿಡಿದು ಬೆನ್ನತ್ತಿದ್ದ ಪೊಲೀಸರಿಗೆ ಸಿಸಿಟಿವಿಯಲ್ಲಿ ಕೃಷ್ಣಪ್ಪ, ಶಿವಕ್ಕ ಜೊತೆಗೆ ಹೊರಟಿದ್ದ ಫೂಟೇಜ್ ಸಿಕ್ಕಿತ್ತು, ನಂತರ ಬೈಕ್ ನಂಬರ್ ಟ್ರೇಸ್ ಮಾಡಿದಾಗ ಅದು ಒತ್ತೆ ಇಟ್ಟ ಬೈಕ್ ಎಂದು ಗೊತ್ತಾಯ್ತು. ಕೊನೆಗೂ ಕೃಷ್ಣಪ್ಪನನ್ನು ಹಿಡಿದು ಬಾಯಿ ಬಿಡಿಸಿದಾಗ ಆತ ತಾನು ಮಾಡಿದ ಪಾತಕವನ್ನು ಒಪ್ಪಿಕೊಂಡಿದ್ದಾನೆ. ಸಿಪಿಐ ರಂಗನಾಥ ನೀಲಮ್ಮನವರ್ ಮತ್ತು ಗೋಕರ್ಣ ಓಎಐ ಎಸ್ ಆರ್ ಶ್ರೀಧರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, ಆರೋಪಿಯಿಂದ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.