ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Annabrahma chaturmasya: ನಮ್ಮೊಳಗೆ ಒಂದಾಗದೇ ಇರುವ ಆಹಾರವೇ ನಮಗೆ ಶತ್ರು; ರಾಘವೇಶ್ವರ ಶ್ರೀ ವಿಶ್ಲೇಷಣೆ

Sri Raghaveshwara Bharathi Swamiji: ಜೀವವು ಉತ್ಕೃಷ್ಟ ಆಹಾರವನ್ನೇ ಸ್ವೀಕರಿಸಬೇಕಾಗುತ್ತದೆ. ದೋಷಯುಕ್ತ ಆಹಾರವನ್ನು ಸೇವಿಸಿದಾಗ ಅದು ನಮ್ಮ ಜೀವಕ್ಕೆ ಹಾನಿಯನ್ನು ಮಾಡುವುದರ ಜತೆಗೆ ಮುಂದಿನ ಪೀಳಿಗೆಗೂ ದೋಷವನ್ನು ವರ್ಗಾಯಿಸುತ್ತದೆ. ಹಾಗಾಗಿ ಜೀವವೆಂಬ ಯಂತ್ರಕ್ಕೆ ಉತ್ತಮವಾದ ಆಹಾರವೆಂಬ ಇಂಧನವನ್ನಷ್ಟೇ ನೀಡಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಭೋಜನವೆಂದರೆ ಅದ್ವೈತ ಸಾಧನೆ: ರಾಘವೇಶ್ವರ ಶ್ರೀ

ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ -

Profile
Siddalinga Swamy Aug 6, 2026 9:12 PM

ಗೋಕರ್ಣ, ಆ. 6: ಭೋಜನವೆಂದರೆ ಅದು ಅದ್ವೈತ ಸಾಧನೆಯಾಗಿದ್ದು, ಊಟ ಮಾಡಿದ ಆಹಾರ ನಮ್ಮೊಳಗೆ, ನಮ್ಮ ರಕ್ತ, ಮೇಧಸ್ಸು, ಚರ್ಮ ಎಲ್ಲವೂ ಆಗಿ, ಅದು ನಾವೇ ಆಗಿ ರೂಪುಗೊಳ್ಳುತ್ತದೆ. ಮೊದಲು ಆಹಾರವೇ ಬೇರೆ ನಾವೇ ಬೇರೆಯಾಗಿರುತ್ತೇವೆ. ಆದರೆ ನಾವು ಸ್ವೀಕರಿಸಿದ ಆಹಾರ ಕಾಲಕ್ರಮೇಣ ಪ್ರತ್ಯೇಕತೆಯನ್ನು ಕಳೆದುಕೊಂಡು ನಾವೇ ಆಗಿ ನಮ್ಮಲ್ಲಿ ಒಂದಾಗುತ್ತದೆ. ನಮ್ಮ ಜನ್ಮವೂ ಹಾಗೆಯೇ, ಭೂಮಿಯಲ್ಲಿ ಎಲ್ಲ ಕರ್ಮಗಳನ್ನು ಕಳೆದುಕೊಂಡು, ಆನಂತರ ಪರಮಾತ್ಮನಲ್ಲಿ ಒಂದಾಗುವುದೇ ಜೀವನದ ಪರಮ ಗುರಿಯಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharathi Swamiji) ತಿಳಿಸಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಗುರುವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಜೀವ - ದೇವಾದ್ವೈತಕ್ಕೆ ಭೋಜನವೆಂಬುದು ತಯಾರಿಯಾಗಿದ್ದು, ಇದು ಜೀವ-ಜೀವಾದ್ವೈತವಾಗಿದೆ. ಅದ್ವೈತವಿರುವಲ್ಲಿ ಆನಂದವಿದ್ದು, ಜೀವ-ಜೀವಾದ್ವೈತವಾದ ಭೋಜನವನ್ನು ಸವಿಯುವಾಗಲೂ ಆನಂದವಾಗುತ್ತದೆ. ಸೇವಿಸುವ ಆಹಾರ ನಮ್ಮೋಳಗೆ ಅದ್ವೈತವಾಗದೇ, ನಮ್ಮೊಳಗೆ ಒಂದಾಗದೇ ಇದ್ದಾಗ ಅದೇ ನಮಗೆ ಶತ್ರುವಾಗುತ್ತದೆ. ಅದೇ ಅನಾರೋಗ್ಯಕ್ಕೂ, ಮರಣಕ್ಕೂ ಕಾರಣವಾಗಬಹುದು. ಸೇವಿಸಿದ ಆಹಾರವನ್ನು ನಾವೇ ಜೀರ್ಣಿಸಿಕೊಳ್ಳಬೇಕು. ಅದಿಲ್ಲದಿದ್ದರೆ ಆ ಆಹಾರವೇ ನಮ್ಮನ್ನು ಜೀರ್ಣಗೊಳಿಸುತ್ತದೆ. ಆಯುರ್ವೇದದ ಸೂತ್ರವೂ ಇದನ್ನೇ ಹೇಳುತ್ತದೆ. ಜೀರ್ಣವಾಗದೇ ಉಳಿಯುವ ಆಹಾರವೇ ಸರ್ವ ರೋಗಕ್ಕೂ ಮೂಲ ಎನ್ನಲಾಗಿದೆ ಎಂದು ಅಭಿಪ್ರಾಯಪಟ್ಟರು.

Annabrahma Chaturmasya

ಭೋಜನದಲ್ಲಿ ಜೀವ- ಜೀವ ಸೇರಿದರೆ, ಜೀವನದಲ್ಲಿ ಜೀವ - ದೇವ ಸೇರುವುದಾಗಿದೆ. ಸೇವಿಸಿದ ಆಹಾರ ಸಂಪೂರ್ಣ ಜೀರ್ಣವಾಗಿ ದೇಹದ ಭಾಗವಾದರೆ ಅದು ಭೌತಿಕ ಅದ್ವೈತ. ಆದರೆ ಅನ್ನಂ ಬ್ರಹ್ಮ ಎಂಬ ಭಾವದಲ್ಲಿ ಸೇವಿಸಿದಾಗ ಅದು ಉನ್ನತ ಮಟ್ಟದ ಅದ್ವೈತವಾಗಿದ್ದು, ಅದು ನಮ್ಮನ್ನು ಮುಕ್ತಿಗೇ ಕರೆದುಕೊಂಡು ಹೋಗುವ ಸಾಧನವಾಗುತ್ತದೆ. ಹಾಗೆಯೇ ಮಣ್ಣು ಮರಳುಗಳನ್ನು ಸೇವಿಸಿ ಜೀವನ ಮಾಡಲಾಗದು. ನಾವು ಸೇವಿಸುವ ಆಹಾರಕ್ಕೆ ಜೀವವಿದ್ದು, ಗಿಡಗಳಿಗೆ ಸುಪ್ತವಾದ ಜೀವವಿದೆ. ಅದಕ್ಕೆ ಸಂವೇದನೆಯೂ ಇದೆ. ಒಂದಾಗುವ ವಸ್ತುಗಳಲ್ಲಿ ಸಮಾನತೆ ಬೇಕು ಎಂಬುದು ಸೃಷ್ಟಿಯ ನಿಯಮ. ಹಾಗಾಗಿ ಜಡ ವಸ್ತುವು ಜೀವಕ್ಕೆ ಆಹಾರವಾಗಲು ಸಾಧ್ಯವಿಲ್ಲ. ಜೀವಕ್ಕೆ ಜೀವವಿರುವ ವಸ್ತುವೇ ಆಹಾರವಾಗಬೇಕು ಎಂದು ತಿಳಿಸಿದರು.

Shri Raghaveshwara Bharathi Swamiji

ದೇಹವೆಂಬ ಯಂತ್ರ ಬೆಳಗಿನ ಹೊತ್ತು ಪೂರ್ಣ ಶಕ್ತಿಯಿಂದ ಕಾರ್ಯಾಚರಿಸಿದರೆ, ಸಂಜೆಯಾಗುತ್ತಿದ್ದಂತೆ ನಿಧಾನವಾಗುತ್ತದೆ. ರಾತ್ರಿ ಅದು ವಿಶ್ರಾಂತಿ ಪಡೆಯುವ ಹೊತ್ತು. ಇಂದಿನ ದಿನಗಳಲ್ಲಿ ರಾತ್ರಿ ವೇಳೆ ಕೆಲಸ ಮಾಡುವ ಪ್ರವೃತ್ತಿ ಇದೆ. ಇದು ನಿಜವಾಗಿ ದೇಹದ ಜತೆಗಿನ ಯುದ್ಧವೇ ಆಗಿದೆ ಎಂದು ಅಭಿಪ್ರಾಯಪಟ್ಟರು.

Annabrahma chaturmasya

ಇದೇ ಸಂದರ್ಭದಲ್ಲಿ ಧಾರ್ಮಿಕ ಪಂಚಾಂಗ ಸಮಿತಿಯ ಪ್ರೋ. ಶಂಭು ಭಟ್ಟ ಕಡತೋಕ ಹಾಗೂ ವಿದ್ವಾನ್ ಪತಂಜಲಿ ವೀಣಾಕರ ಅವರು ಪ್ಲವಂಗ ನಾಮ ಸಂವತ್ಸರದ ಧಾರ್ಮಿಕ ಪಂಚಾಂಗದ ಕರಡು ಪ್ರತಿಯನ್ನು ಶ್ರೀಗಳಿಗೆ ಸಮರ್ಪಿಸಿ ಆಶೀರ್ವಾದ ಪಡೆದರು.

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ: ರಾಘವೇಶ್ವರ ಶ್ರೀ

ಸಾಗರ ಹವ್ಯಕ ಮಂಡಲದ ಕೆಳದಿ ಪಶ್ಚಿಮ, ಕೆಳದಿ ಪೂರ್ವ, ಉಳವಿ, ಕ್ಯಾಸನೂರ, ಇಕ್ಕೆರಿ, ಆವಿನಳ್ಳಿ ವಲಯಗಳ ಪರವಾಗಿ ರಮೇಶ ಹಾರೆಗೊಪ್ಪ ದಂಪತಿಗಳು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸುಬ್ರಹ್ಮಣ್ಯ ಚಿಪ್ಳಿ, ರಾಘವೇಂದ್ರ ಹೊಡಬಟ್ಟೆ, ಗೋವಿಂದ ಹೆಗಡೆ, ನಿಖಿಲ್ ಭಟ್, ದಿನ ಪ್ರಧಾನರಾಗಿ ಗಣಪತಿ ಟಿ.ಆರ್. ವರದಾಮೂಲ ದಂಪತಿ ಉಪಸ್ಥಿತರಿದ್ದರು.