ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hosabale Shobha Hegde: ಹೊಸಬಾಳೆ ಶೋಭಾ ಹೆಗಡೆ ಇನ್ನಿಲ್ಲ

Hosabale Shobha Hegde: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಪ್ರಗತಿಪರ ಕೃಷಿಕ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಧರ್ಮ ಪತ್ನಿ ಶೋಭಾ ಹೆಗಡೆ ನಿಧನರಾಗಿದ್ದಾರೆ. ಚಾಲಿ ಸುಲಿಯುವ ಯಂತ್ರಕ್ಕೆ ಸಿಲುಕಿ ಶೋಭಾ ಹೆಗಡೆ ಅವರು ಮೃತಪಟ್ಟಿದ್ದು, ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hosabale Shobha Hegde: ಹೊಸಬಾಳೆ ಶೋಭಾ ಹೆಗಡೆ ಇನ್ನಿಲ್ಲ

Profile Prabhakara R Mar 26, 2025 9:07 PM

ವಿಶ್ವವಾಣಿ ಸುದ್ದಿಮನೆ, ಶಿರಸಿ: ಶಿರಸಿ ತಾಲೂಕಿನ ಹೊಸಬಾಳೆ ನಿವಾಸಿ ಶೋಭಾ ಹೆಗಡೆ (60) (Hosabale Shobha Hegde) ಆಕಸ್ಮಿಕ ಅವಘಡದಲ್ಲಿ ಬುಧವಾರ ನಿಧನರಾದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಪ್ರಗತಿಪರ ಕೃಷಿಕ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಧರ್ಮ ಪತ್ನಿ ಶೋಭಾ ಹೆಗಡೆ ಅವರು ಕೃಷಿ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದರು. ಸದ್ಯ ಅಡಕೆ ಸುಲಿಯುವ ಕಾರ್ಯ ಮನೆಯಲ್ಲಿ ನಡೆಯುತ್ತಿತ್ತು. ಶೋಭಾ ಹೆಗಡೆ ಅವರು ಕೆಲಸಗಾರರ ದೇಖರೇಖಿ ನೋಡಿಕೊಳ್ಳಲು ಹೋಗಿದ್ದರು. ಈ ವೇಳೆ ಚಾಲಿ ಸುಲಿಯುವ ಯಂತ್ರಕ್ಕೆ ಆಕಸ್ಮಿಕವಾಗಿ ಸೀರೆಯ ಸೆರಗು ಸಿಲುಕಿ, ಯಂತ್ರ ತನ್ನತ್ತ ಸೆಳೆದು ಬೀಸಾಡಿದ ಪರಿಣಾಮ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಕೆಲಸಗಾರರು ಅಲ್ಲಿಯೇ ಇದ್ದರೂ ಕ್ಷಣಾರ್ಧದಲ್ಲಿ ಘಟನೆ ಸಂಭವಿಸಿದೆ.

ಕಳೆದ ಮೂರು ವರ್ಷಗಳಿಂದ ಚಾಲಿ ಸುಲಿಯುವ ವೇಳೆ ಶೋಭಾ ಹೆಗಡೆ ಅವರೇ ದೇಖರೇಖಿ ನೋಡಿಕೊಳ್ಳುತ್ತಿದ್ದರು. ಆದರೆ ಬುಧವಾರ ವಿಧಿ ಕೈಕೊಟ್ಟಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ. ಘಟನೆಯ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಶೋಭಾ ಹೆಗಡೆ ಅವರು ಕಾಂಗ್ರೆಸ್ ಮುಖಂಡ ವೆಂಕಟೇಶ ಹೆಗಡೆ ಅವರ ಪತ್ನಿಯಾಗಿ ಕುಟುಂಬ ಕಾಳಜಿ, ಕೃಷಿ ಮುತುವರ್ಜಿ ವಹಿಸುತ್ತಿದ್ದರು. ತಮ್ಮ ಪತಿಯ ಸಮಾಜಸೇವೆ ಮತ್ತು ರಾಜಕೀಯ ಕಾರ್ಯಗಳಿಗೆ ಪ್ರೋತ್ಸಾಹಕರಾಗಿ ಬೆಂಬಲವಾಗಿ ನಿಂತಿದ್ದರು. ಶೋಭಾ ಹೆಗಡೆ ಅವರಿಗೆ ಪತಿ ವೆಂಕಟೇಶ ಹೆಗಡೆ, ಪುತ್ರ ನಾಗರಾಜ ಅಪಾರ ಬಂಧು-ಬಳಗವಿದೆ. ಮೃತರ ಅಂತ್ಯಕ್ರಿಯೆಯು ಗುರುವಾರ ಬೆಳಗ್ಗೆ ಹೊಸಬಾಳೆಯಲ್ಲಿ ನಡೆಯಲಿದೆ.

ಶೋಭಾ ಹೆಗಡೆ ಅವರು ನಿಧನಕ್ಕೆ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆತ್ಮೀಯರಾದ ವೆಂಕಟೇಶ ಹೆಗಡೆ ಅವರ ಪತ್ನಿ ಶೋಭಾ ಅವರ ಆಕಸ್ಮಿಕ ನಿಧನ ಆಘಾತಕಾರಿ. ವೆಂಕಟೇಶ ಹೆಗಡೆ ಮತ್ತು ಅವರ ಕುಟುಂಬಸ್ಥರಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲಿ, ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Vishwamitra Hegde: ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ನಿಧನ

image

ಹಿರಿಯ ರಾಜಕೀಯ ಧುರೀಣರು ಮತ್ತು ಸಮಾಜ ಸೇವಕರು ಆದ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಧರ್ಮಪತ್ನಿಯವರು ಆಕಸ್ಮಿಕ ಮರಣ ಹೊಂದಿದ ಸುದ್ದಿ ಕೇಳಿ ಬಹಳ ಆಘಾತವಾಯಿತು. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ. ಕುಟುಂಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

- ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ
image

ನಮ್ಮ ಪಕ್ಷದ ಮುಖಂಡರಾದ ವೆಂಕಟೇಶ ಹೆಗಡೆ ಅವರ ಪತ್ನಿ ಅವರ ಸಾವಿನ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ವೆಂಕಟೇಶ ಹೆಗಡೆ ಹೊಸಬಾಳೆ ಅವರಿಗೆ ಮತ್ತು ಅವರ ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.

- ಭೀಮಣ್ಣ ನಾಯ್ಕ, ಶಾಸಕ