ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karwar News: ಕಾರವಾರದಲ್ಲಿ ದುರಂತ, ಕಾಂಡೆ ಮೀನು ಚುಚ್ಚಿ ಯುವಕ ಸಾವು

Uttara Kannada: ಅಕ್ಟೋಬರ್ 14ರಂದು ಅಕ್ಷಯ್ ಅವರು ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ನೀರಿನಿಂದ ನೆಗೆದ ಸುಮಾರು 8ರಿಂದ 10 ಇಂಚು ಉದ್ದದ 'ಕಾಂಡೆ' ಎಂಬ ಚೂಪು ಮೂಗಿನ ಮೀನು ನೇರವಾಗಿ ಅವರ ಹೊಟ್ಟೆಗೆ ಚುಚ್ಚಿದೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಅಕ್ಷಯ್ ಗಂಭೀರವಾಗಿ ಗಾಯಗೊಂಡಿದ್ದರು.

ಕಾರವಾರದಲ್ಲಿ ದುರಂತ, ಕಾಂಡೆ ಮೀನು ಚುಚ್ಚಿ ಯುವಕ ಸಾವು

-

ಹರೀಶ್‌ ಕೇರ ಹರೀಶ್‌ ಕೇರ Oct 17, 2025 9:28 AM

ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ (Karwar News) ತಾಲೂಕಿನ ಮಾಜಾಳಿ ದಂಡೇಭಾಗದಲ್ಲಿ ಮೀನುಗಾರಿಕೆಗೆ ತೆರಳಿದ್ದ ಯುವಕನೊಬ್ಬ (Fisherman) ಕಾಂಡೆ ಮೀನು (Atlantic needle fish) ಮೂತಿ ಚುಚ್ಚಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು ಮಾಜಾಳಿ ದಂಡೇಭಾಗದ ನಿವಾಸಿ, ಅಕ್ಷಯ್ ಅನಿಲ್ ಮಜಾಳಿಕರ್ (24) ಎಂದು ಗುರುತಿಸಲಾಗಿದೆ. ಅಕ್ಷಯ್ ಸ್ಥಳೀಯ ಮಟ್ಟದಲ್ಲಿ ಉತ್ತಮ ಕ್ರಿಕೆಟ್ ಕ್ರೀಡಾಪಟುವಾಗಿದ್ದರು. ಮೃತನ ಕುಟುಂಬಸ್ಥರು ಆಸ್ಪತ್ರೆಯ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 14 ರಂದು ಅಕ್ಷಯ್ ಅವರು ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ನೀರಿನಿಂದ ನೆಗೆದ ಸುಮಾರು 8 ರಿಂದ 10 ಇಂಚು ಉದ್ದದ 'ಕಾಂಡೆ' ಎಂಬ ಚೂಪು ಮೂಗಿನ ಮೀನು ನೇರವಾಗಿ ಅವರ ಹೊಟ್ಟೆಗೆ ಚುಚ್ಚಿದೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಅಕ್ಷಯ್ ಗಂಭೀರವಾಗಿ ಗಾಯಗೊಂಡಿದ್ದರು. ಮೀನಿನ ಮೂತಿಯಿಂದಾದ ತೀವ್ರ ಗಾಯವು ಕರುಳಿನ ಭಾಗದವರೆಗೂ ತಲುಪಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Vijayapura News: ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ಸಾವು

ತಕ್ಷಣವೇ ಅಕ್ಷಯ್ ಅವರನ್ನು ಕಾರವಾರದ ಕ್ರಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಗಾಯಕ್ಕೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದರು. ನೋವು ಮುಂದುವರಿದ ಕಾರಣ ಅಕ್ಷಯ್ ಆಸ್ಪತ್ರೆಯಲ್ಲೇ ವೈದ್ಯಕೀಯ ನಿಗಾದಲ್ಲಿ ಉಳಿದುಕೊಂಡಿದ್ದರು. ಚಿಕಿತ್ಸೆ ನಡೆಯುತ್ತಿದ್ದಾಗಲೇ ನಿನ್ನೆ (ಅಕ್ಟೋಬರ್ 16) ಮುಂಜಾನೆ ಸುಮಾರು 5 ಗಂಟೆಗೆ ಅಕ್ಷಯ್ ಅವರು ಕೊನೆಯುಸಿರೆಳೆದಿದ್ದಾರೆ.

ಉತ್ತಮ ಕ್ರಿಕೆಟ್ ಕ್ರೀಡಾಪಟುವಾಗಿದ್ದ ಅಕ್ಷಯ್ ಅವರ ಅಕಾಲಿಕ ಸಾವಿನಿಂದ ಆಘಾತಗೊಂಡ ಕುಟುಂಬಸ್ಥರು ಮತ್ತು ಸಂಬಂಧಿಕರು ಆಸ್ಪತ್ರೆ ಆವರಣದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಚಿಕಿತ್ಸೆಯ ಕುರಿತು ಕೆಲವು ಸಂದೇಹಗಳನ್ನು ಎತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ವೈದ್ಯಾಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಯುವಕನ ಸಾವಿನಿಂದ ಮೀನುಗಾರ ಸಮುದಾಯದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ.