ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೋಕ್ಷ ಸಾಧನೆಗೆ ಶರೀರ, ಶರೀರ ಉಳಿಸಲು ಆಹಾರ ಅಗತ್ಯ: ರಾಘವೇಶ್ವರ ಭಾರತೀ ಶ್ರೀ

Sri Raghaveshwara Bharathi Swamiji: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರವಚನ ಅನುಗ್ರಹಿಸಿದ್ದಾರೆ.

ಮೋಕ್ಷ ಸಾಧನೆಗೆ ಶರೀರ, ಶರೀರ ಉಳಿಸಲು ಆಹಾರ ಅಗತ್ಯ: ರಾಘವೇಶ್ವರ ಶ್ರೀ

ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ. -

Profile
Siddalinga Swamy Sep 1, 2026 8:01 PM

ಗೋಕರ್ಣ, ಸೆ.1: ಆತ್ಮ ಸಾಕ್ಷಾತ್ಕಾರಕ್ಕೂ ಶರೀರ ಅಗತ್ಯ. ಧರ್ಮಾರ್ಥ ಕಾಮ ಮೋಕ್ಷಗಳು ಶರೀರದಿಂದಲೇ ಸಾಧ್ಯವಾಗುವಂತದ್ದು. ಮನುಷ್ಯ ಶರೀರ ಇರುವುದೇ ಮೋಕ್ಷ ಸಾಧನೆಗೆ. ಹಾಗಾಗಿ ಶರೀರವನ್ನು ಉಳಿಸಿಕೊಂಡು, ಮೋಕ್ಷವನ್ನು ಪಡೆಯಲು ಆಹಾರ ಅಗತ್ಯವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharathi Swamiji) ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಮಂಗಳವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಶಿವ ಪಾರ್ವತಿಯರ ಮಧ್ಯೆ ವಾದ ನಡೆದ ಸಂದರ್ಭವನ್ನು ಉದಾಹರಿಸಿ, ಶಿವನು ಭೌತಿಕ ಜಗತ್ತು ಮಿಥ್ಯೆ, ಶರೀರ ಮಾಯೆ, ಆಹಾರ ಸುಳ್ಳು, ಶುದ್ಧ ಚೈತನ್ಯ ಮಾತ್ರ ಸತ್ಯ ಎಂಬುದಾಗಿ ಹೇಳಿದ, ಆದರಿಂದ ಕುಪಿತಳಾದ ಪಾರ್ವತಿಯು, ಕಾಶಿಯಲ್ಲಿ ಅನ್ನಪೂರ್ಣೇಶ್ವರಿಯಾಗಿ ಅವತರಿಸಿದಳು. ಆನಂತರ ಶಿವನು ಭಿಕ್ಷುಕನ ರೂಪದಲ್ಲಿ 'ಭವತಿ ಭಿಕ್ಷಾಂ ದೇಹಿ' ಎಂದು ಕೇಳಿದ ಎಂಬ ಕಥೆಯನ್ನು ಉಲ್ಲೇಖಿಸಿ, ಇದು ಅನ್ನದ ಮಹತ್ವವನ್ನು ಲೋಕಕ್ಕೆ ಸಾರಲು ಆದಿದಂಪತಿಗಳು ಆಡಿದ ನಾಟಕ ಎಂದು ವಿವರಿಸಿದರು.

Annabrahma Chaturmasya

ಶಿವ ವಾದ ರೂಪದಲ್ಲಿ ಪ್ರತಿಪಾದಿಸದ್ದನ್ನೇ ಪಾರ್ವತಿ ಅನ್ನಪೂರ್ಣೇಶ್ವರಿಯಾಗಿ ಅನುಭವ ರೂಪವಾಗಿ ತೋರಿದವಳು. ಶಿವ ಅನ್ನದ ಮಹತಿಯನ್ನು ಒಪ್ಪಿಕೊಂಡರೆ, ಪಾರ್ವತಿ ಮುಕ್ತಿಯ ಮಹತಿಯನ್ನು ಒಪ್ಪಿಕೊಂಡಳು. ಭೌತಿಕ ಜಗತ್ತು, ಶರೀರ, ಆಹಾರ ಇವೆಲ್ಲವೂ ವ್ಯಾವಹಾರಿಕ ಸತ್ಯವಾದರೆ, ಮೋಕ್ಷ ಪರಮಸತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಅನ್ನಪೂರ್ಣೇಶ್ವರಿ ಜ್ಞಾನದ ಅನುಗ್ರಹವನ್ನು ವಿಶೇಷವಾಗಿ ಮಾಡುತ್ತಾಳೆ. ಶಂಕರಾಚಾರ್ಯರು ಅನ್ನಪೂರ್ಣೇಶ್ವರಿ ಸ್ತೋತ್ರದ ಮೂಲಕ ದೇವಿಯನ್ನು ಸ್ತುತಿಸಿದ್ದು, ಆ ಸ್ತೋತ್ರವನ್ನು ಗಮನಿಸಿದರೆ, ಜ್ಞಾನ, ಭಕ್ತಿ, ಮುಕ್ತಿ ಎಲ್ಲವೂ ಅನ್ನ ಅಥವಾ ಅನ್ನಪೂರ್ಣೇಶ್ವರಿಯಿಂದಲೇ ಪ್ರಾಪ್ತವಾಗುತ್ತದೆ ಎಂಬುದನ್ನು ಕಾಣಬಹುದು ಎಂದರು.

Gokarna News

ಖ್ಯಾತ ಜ್ಯೋತಿಷಿಗಳಾದ ಪಾಲಕ್ಕಾಡು ವೆಂಕಟೇಶ ಭಟ್, ಶ್ರೀ ಶಕಟಪುರಮಠದ ವ್ಯವಸ್ಥಾಪಕ ರಾಘವ, ನಿವೃತ್ತ ಆದಾಯ ತೆರಿಗೆ ಆಯುಕ್ತ ಗಿರೀಶ ಕೊಣಮ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀಗಳಿಂದ ಆಶೀರ್ವಾದ ಪಡೆದರು.

ಯಾವ ಸಂಪತ್ತೂ ನೀಡದ ಸಂತೃಪ್ತಿಯನ್ನು ಅನ್ನ ನೀಡುತ್ತದೆ: ರಾಘವೇಶ್ವರ ಭಾರತೀ ಶ್ರೀ

ಗಣಪತಿ ವೆಂಕಟರಮಣ ಹೆಗಡೆ ಕಾನಮೂಲೆ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸವಿತಾ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ಈಶ್ವರ ಕೊಡಿಯಾ ದಂಪತಿಗಳು ಪಾದುಕಾಪೂಜೆಯನ್ನು ನೆರವೇರಿಸಿದರು. ದಿನಪ್ರಧಾನರಾಗಿ ಎಂ.ಎನ್. ಹರೀಶ ದಂಪತಿಗಳು ಉಪಸ್ಥಿತರಿದ್ದರು.

Shri Raghaveshwara Bharathi Swamiji

ಸಾಮವೇದ ಪಾರಾಯಣ - ರಾಣಾಯನೀಯ ಶಾಖೆಯ ಸಂರಕ್ಷಣೆಗೆ ಒತ್ತು

ಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ಸಾಮವೇದದ ರಾಣಾಯನೀಯ ಶಾಖೆಯ ಪಾರಾಯಣವು 01.09.2026 ರಿಂದ 05.09.2026 ವರೆಗೆ ನಡೆಯಲಿದ್ದು, ವೇ.ಮೂ ಸುಬ್ರಹ್ಮಣ್ಯ ಭಟ್ಟರು ಉಂಚಗೇರಿ ಅವರ ನೇತೃತ್ವದ ವೇದ ವಿದ್ವಾಂಸರಿಂದ ಪಾರಾಯಣ ಪ್ರಾರಂಭವಾಯಿತು.

ಸಾವಿರ ಶಾಖೆಗಳನ್ನು ಹೊಂದಿದ್ದ ಸಾಮವೇದದಲ್ಲಿ ಇಂದು ಬೆರಳೆಣಿಕೆಯ ಶಾಖೆಗಳು ಮಾತ್ರ ಉಳಿದಿದ್ದು, ರಾಣಾಯನೀಯ ಶಾಖೆಯು ಶ್ರೀಮಠದ ವ್ಯಾಪ್ತಿಯ ಹೊನ್ನಾವರದ ಭಾಗದಲ್ಲಿ ಮಾತ್ರ ಉಳಿದುಕೊಂಡಿದೆ. ರಾಣಾಯನೀಯ ಶಾಖೆಯ ಸಂರಕ್ಷಣೆಗಾಗಿ ಶ್ರೀಮಠದ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಗಳು ನಡೆದಿದ್ದು, ಶ್ರೀಮಠವು ಸಾಮವೇದ ಶಾಖೆಯ ಉಳಿವಿಗಾಗಿ ರಾಷ್ಟ್ರೀಯ ಸಮ್ಮೇಳನವನ್ನೂ ಸಂಘಟಿಸಿತ್ತು. ಕೆಲವಾರು ತಿಂಗಳುಗಳ ಹಿಂದೆ ರಾಣಾಯನೀಯ ಸಭಾದವರು ಪ್ರಕಾಶಿಸಿದ 'ಸಾಮವೇದ ರಾಣಾಯನೀಯಮ್ ವೇಯಗಾನಮ್' ಗ್ರಂಥವನ್ನು ಶ್ರೀಗಳು ಲೋಕಾರ್ಪಣೆ ಮಾಡಿ ಆಶೀರ್ವದಿಸಿರುವುದನ್ನು ಇಲ್ಲಿ ಸ್ಮರಿಸಬಹುದು.