ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Annabrahma chaturmasya: ಸರಿಯಾದ ನಿದ್ದೆ ಯೋಗ ಸಮಾಧಿ, ಮಲಗುವ ದಿಕ್ಕಿನಿಂದ ಹಲವು ಪರಿಣಾಮ: ರಾಮಚಂದ್ರಾಪುರ ಶ್ರೀ

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮಾತನಾಡಿದ್ದಾರೆ. ನಿದ್ರೆ ಕೇವಲ ಒಂದು ಅವಸ್ಥೆಯಲ್ಲ. ಅದು ಮಾತೃಸ್ವರೂಪಿಣಿ ದೇವಿಯೇ ಆಗಿದ್ದು, ಶ್ರಮವನ್ನು ಕಳೆಯಲು, ಶರೀರ ಹಾಗೂ ಮನಸ್ಸಿಗೆ ಆದ ಹಾನಿಯನ್ನು ಸರಿಪಡಿಸಲು, ಶಕ್ತಿತುಂಬಲು ಹಾಗೂ ಹೊಸ ಚೈತನ್ಯವನ್ನು ತುಂಬಲು ನಿದ್ದೆ ಸಹಕಾರಿ ಎಂದು ತಿಳಿಸಿದ್ದಾರೆ.

ಡಿನ್ನರ್ ನಮ್ಮ ಸಂಸ್ಕೃತಿಯಲ್ಲ: ರಾಮಚಂದ್ರಾಪುರ ಶ್ರೀ

-

Prabhakara R
Prabhakara R Aug 2, 2026 10:43 PM

ಗೋಕರ್ಣ: ಆಹಾರ ಹಾಗೂ ನಿದ್ದೆ ಪರಸ್ಪರ ಸಂಬಂಧಿತವಾಗಿದೆ. ನಿದ್ದೆ ಚೆನ್ನಾಗಿ ಬರಲು ಹಸಿವು ಅಗತ್ಯ ಹಾಗೂ ಆಹಾರ ಸರಿಯಾಗಿದ್ದರೆ ಸರಿಯಾದ ನಿದ್ರೆ ಪ್ರಾಪ್ತವಾಗುತ್ತದೆ. ದೇಹಕ್ಕೆ ಸಂಬಂಧಿಸಿದ ಮೂರು ಉಪಾಂಗಗಳಲ್ಲಿ ನಿದ್ದೆ ಹಾಗೂ ಆಹಾರ ಪ್ರಮುಖವಾಗಿವೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು (Raghaveshwara Bharati swami) ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಭಾನುವಾರ 'ಅನ್ನಂ ಬ್ರಹ್ಮ' ಪ್ರವಚನ ಸರಣಿಯಲ್ಲಿ ನಿದ್ದೆಯೆಂಬ ಪೂಜೆ ವಿಚಾರವಾಗಿ ಆಶೀರ್ವಚನ ನೀಡಿ, ನಿದ್ರೆ ಕೇವಲ ಒಂದು ಅವಸ್ಥೆಯಲ್ಲ. ಅದು ಮಾತೃಸ್ವರೂಪಿಣಿ ದೇವಿಯೇ ಆಗಿದ್ದು, ಶ್ರಮವನ್ನು ಕಳೆಯಲು, ಶರೀರ ಹಾಗೂ ಮನಸ್ಸಿಗೆ ಆದ ಹಾನಿಯನ್ನು ಸರಿಪಡಿಸಲು, ಶಕ್ತಿತುಂಬಲು ಹಾಗೂ ಹೊಸ ಚೈತನ್ಯವನ್ನು ತುಂಬಲು ನಿದ್ದೆ ಸಹಕಾರಿ. ಸಕಾಲದಲ್ಲಿ ಬರುವ ನಿದ್ರೆ ಸುಖ, ಆರೋಗ್ಯ ಹಾಗೂ ಹಲವಾರು ಸಿದ್ಧಿಗಳನ್ನು ನೀಡುತ್ತದೆ ಎಂದು ತಿಳಿಸಿದರು.

ನಿದ್ರೆ ಸರಿಯಾಗಿ ಬಂದಾಗ ಅದು ಸಮಾಧಿಸ್ಥಿತಿ ಎಂದು ಶಂಕರಾಚಾರ್ಯರು ಉಲ್ಲೇಖಿಸಿದ್ಧು, ರಾತ್ರಿ ಹಾಗೂ ಬೆಳಗ್ಗೆಯ ನಡುವಿನ ಎರಡು ಯಾಮಗಳು ನಿದ್ದೆಗೆ ಸೂಕ್ತ ಎಂದು ಶಾಸ್ತ್ರಗಳು ಹೇಳಿವೆ. ಮಧ್ಯರಾತ್ರಿ ಸಮಾನವಾಗಿ ಬರುವಂತೆ ನಿದ್ದೆ ಮಾಡಿದಾಗ ಅದು ಬರಿಯ ನಿದ್ದೆಯಲ್ಲ, ಯೋಗ ಸಮಾಧಿ ಎಂದು ಕರೆಸಿಕೊಳ್ಲುತ್ತದೆ ಎಂದ ಶ್ರೀಗಳು, ಪೂರ್ವಕ್ಕೆ ತಲೆಹಾಕಿ ಮಲಗಿದಾಗ ಸಂಪತ್ತು ಪ್ರಾಪ್ತಿ, ದಕ್ಷಿಣಕ್ಕೆ ಮಲಗಿದಾಗ ಆಯಸ್ಸಿನ ವೃದ್ಧಿ, ಪಶ್ಚಿಮಕ್ಕೆ ಮಲಗಿದಾಗ ಚಿಂತೆ ಹೆಚ್ಚಾಗುವುದು ಹಾಗೂ ಉತ್ತರಕ್ಕೆ ಮಲಗಿದಾಗ ಮೃತ್ಯು ಸಂಭವ ಎಂದು ವಿವರಿಸಿ, ನಿದ್ದೆಗೂ ಪೂರ್ವದಲ್ಲಿ ಸಿದ್ಧತೆಗಳು ಹೇಗಿರಬೇಕು ಎಂದು ವಿಸ್ತಾರವಾಗಿ ಮಾಹಿತಿ ನೀಡಿದರು.

Annabrahma chaturmasya  (1)

ನಿದ್ದೆಗೂ ಮೊದಲು ಸಮಾಧಾನಿತರಾಗಿರಬೇಕು. ಮನಸ್ಸು ಉದ್ವೇಗಕ್ಕೆ ಒಳಗಾಗುವ ವಿಷಯಗಳಲ್ಲಿ ತೊಡಗಿಸದೇ ಇರುವುದು ಕ್ಷೇಮ ಎಂದು ಹೇಳಲಾಗಿದೆ. ಇಂದು ಪಾಶ್ಛಿಮಾತ್ಯರೂ ಕೂಡ ಈ ವಿಚಾರವನ್ನು ಹೇಳುತ್ತಿದ್ದಾರೆ. ಸಮಾಧಾನದಿಂದ ನಿದ್ದೆಗೆ ತೆರಳಿದಾಗ ಉತ್ತಮ ಗುಣಮಟ್ಟದ ನಿದ್ದೆ ಪ್ರಾಪ್ತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಡಿನ್ನರ್ ನಮ್ಮ ಸಂಸ್ಕೃತಿಯಲ್ಲ:

ಸಂಜೆ ಸೂರ್ಯಾಸ್ತವಾಗಿ ಸುಮಾರು ಒಂದು ಗಂಟೆಗೆ ಆಹಾರವನ್ನು ಸ್ವೀಕರಿಸುವುದು ಉತ್ತಮ. ಸಂಜೆಯ ಆಹಾರ ಕಡಿಮೆ ಪ್ರಮಾಣದಲ್ಲಿ ಹಾಗೂ ಜೀರ್ಣಕ್ಕೆ ಸುಲಭವಾಗುವಂತಹದ್ದು ಇರಬೇಕು. ಭೂರಿ ಭೋಜನ ರಾತ್ರಿಯ ಊಟಕ್ಕೆ ನಿಷಿದ್ಧ. ಆದರೆ ಅಂಧಾನುಕರಣೆಗೆ ಒಳಗಾಗಿರುವ ನಾವು 'ಡಿನ್ನರ್' ಹೆಸರಿನಲ್ಲಿ ರಾತ್ರಿ ಭೋಜನ ಕೂಟವನ್ನು ನಡೆಸುತ್ತಿರುವುದು ಆರೋಗ್ಯಕ್ಕೆ ಹಾನಿ ಎಂದು ಪ್ರತಿಪಾದಿಸಿದರು.

ಗುರಿಕಾರರ ದಿನ:

ಗುರಿಕಾರರ ದಿನದ ಅಂಗವಾಗಿ ರಾಜ್ಯ - ಹೊರರಾಜ್ಯಗಳಿಂದ ಆಗಮಿಸಿದ್ದ ಶ್ರೀಮಠದ ಪ್ರತಿನಿಧಿಗಳಾದ ಗುರಿಕಾರರನ್ನು ಆಶೀರ್ವದಿಸಿದ ಶ್ರೀಗಳು, ಗುರಿಕಾರರೆಂದರೆ ಶ್ರೀಮಠದ ಆಂಜನೇಯರಿದ್ದಂತೆ. ಸಮಾಜದ ಮಧ್ಯದಲ್ಲಿ ಶ್ರೀಮಠದ ಕಾರ್ಯಗಳನ್ನು ಮಾಡುವ ಮೂಲಕ ಜಾಗೃತಿಯನ್ನು ಮೂಡಿಸಬೇಕು. ಸಮಾಜದಲ್ಲಿ ಸಂತತಿಯ ವೃದ್ಧಿ, ಹಳ್ಳಿ ಜೀವನಕ್ಕೆ ಒತ್ತು ಹಾಗೂ ನಮ್ಮ ಸಂಸ್ಕೃತಿ ಸಂಸ್ಕಾರಗಳ ಕುರಿತಾಗಿ ಜನ ಜಾಗೃತಿಯನ್ನು ಉಂಟುಮಾಡಬೇಕು ಎಂದು ಶ್ರೀಗಳು ಕರೆನೀಡಿದರು. ಇದೇ ಸಂದರ್ಭದಲ್ಲಿ 11 ಮಂಡಲಗಳಿಂದ ಚಾತುರ್ಮಾಸ್ಕಕ್ಕೆ ಸಂಗ್ರಹವಾದ ನಗದು ಕಾಣಿಕೆಯನ್ನು ಸಾಂಕೇತಿಕವಾಗಿ ಶ್ರೀಗಳಿಗೆ ಸಮರ್ಪಿಸಲಾಯಿತು.

ಸಮಸ್ತ ಗುರಿಕಾರರ ಪರವಾಗಿ ಸತ್ಯನಾರಾಯಣ ಮೊಗ್ರ ದಂಪತಿಗಳು ಗುರುಭಿಕ್ಷಾ ಸೇವೆಯನ್ನು ನೆರವೇರಿಸಿದರು. ಸಮಾಜದ ಮಧ್ಯದಲ್ಲಿ ಶ್ರೀಗಳ ಪ್ರತಿನಿಧಿಗಳಾಗಿ ಇರುವ ಗುರಿಕಾರರ ಕ್ಷೇಮಕ್ಕಾಗಿ 1008 ನವಗ್ರಹ ಶಾಂತಿಯನ್ನು ವಿಶೇಷವಾಗಿ ನಡೆಸಲಾಯಿತು. ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ,ಉಪಾಧ್ಯಕ್ಷರಾದ ಜಿ.ಜಿ ಹೆಗಡೆ, ಶಿವಶಂಕರ ಭಟ್ಟ ಭೋನಂತಾಯ, ಗಣಪತಿ ಸುಬ್ರಾಯ ಹೆಗಡೆ, ಶಾಂತರಾಮ ಹಿರೇಮನೆ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ದಿನಪ್ರಧಾನರಾಗಿ ಈಶ್ವರ ಕೇಶವ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.