ಶಿರಸಿ: ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿರುವುದು ನಮ್ಮ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್(MLA Shivaram Hebbar) ತಿಳಿಸಿದರು.
ನಗರದ ಬ್ಯಾಂಕಿನ ಆವಾರದಲ್ಲಿ ಸುದ್ದಿಗಾರರೊಂದಿಗೆ ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಕ್ಷಭೇದ ಮರೆತು ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಹೊಸ ವೇಗ ನೀಡುವ ಮೂಲಕ ಬ್ಯಾಂಕನ್ನು ಪ್ರಗತಿಯತ್ತ ಮುನ್ನಡೆಸುವುದಾಗಿ ಭರವಸೆ ನೀಡಿದರು. ಮಾರ್ಚ್ ಅಂತ್ಯ ಸಮೀಪಿಸುತ್ತಿದ್ದು, ಕೈಲಿಯಲ್ಲಿ ಕೇವಲ 45 ದಿನಗಳ ಕಾಲಾವಕಾಶವಿದೆ. ಈ ಅಲ್ಪ ಅವಧಿ ಯಲ್ಲಿ ಬ್ಯಾಂಕಿನ ಅಭಿವೃದ್ಧಿಯ ಮುನ್ನೋಟವನ್ನು ಜನರ ಮುಂದಿಡುವುದು ಮತ್ತು ಠೇವಣಿದಾರರಲ್ಲಿ ವಿಶ್ವಾಸ ಮೂಡಿಸಿ ಸಾಲಗಾರರಿಗೆ ನ್ಯಾಯ ಒದಗಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಹಿಂದೆ ಬ್ಯಾಂಕ್ ಕೇವಲ ನಬಾರ್ಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿತ್ತು, ಆದರೆ ಈಗ ಆರ್‌ಬಿಐ ವ್ಯಾಪ್ತಿಗೆ ಒಳಪಟ್ಟಿರುವು ದರಿಂದ ಪ್ರತಿಯೊಂದು ಹಂತದಲ್ಲೂ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Shivaram Hebbar: ಬಿಜೆಪಿ ಇತಿಹಾಸದ ಬಗ್ಗೆ ಕಾಗೇರಿಯಿಂದ ಕಲಿಯೋ ಅಗತ್ಯ ಇಲ್ಲ: ಶಿವರಾಮ್ ಹೆಬ್ಬಾರ್
ಸಾರ್ವಜನಿಕ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಇರುವುದು ಸಹಜ ಮತ್ತು ಪ್ರತಿ ಹಂತದಲ್ಲೂ ಪೈಪೋಟಿ ಇದ್ದೇ ಇರುತ್ತದೆ. ಆದರೆ ಅಂತಿಮವಾಗಿ ನಾವೆಲ್ಲರೂ ಒಮ್ಮತದ ನಿರ್ಧಾರವನ್ನೇ ತೆಗೆದುಕೊಳ್ಳುತ್ತೇವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಇದೇ ವೇಳೆ ಮಧ್ಯಮಾವಧಿ ಸಾಲದ ಮರುಪಾವತಿಯ ಬಗ್ಗೆ ಪ್ರಸ್ತಾಪಿಸಿದ ಅವರು, ಇದು ಕೇವಲ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಲ್ಲ, ಇದರಲ್ಲಿ ಕೇಂದ್ರ ಸರ್ಕಾರ ಮತ್ತು ನಬಾರ್ಡ್ ಪಾತ್ರವೂ ಇದೆ. ಬಡ್ಡಿ ಸಹಾಯಧನದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಮ್ಮತವಿಲ್ಲದಿದ್ದರೆ ರೈತರ ಮೇಲೆ ಬಡ್ಡಿಯ ಹೊರೆ ಹೆಚ್ಚಾಗುವ ಅಪಾಯವಿದೆ. ಈ ಕುರಿತು ಆಡಳಿತ ಮಂಡಳಿಯಲ್ಲಿ ಗಂಭೀರ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತರ ಸಂಕಷ್ಟಗಳ ಕುರಿತು ಮಾತನಾಡಿದ ಹೆಬ್ಬಾರ್ ಅವರು, ಬೆಳೆ ವಿಮೆ ವಿಚಾರದಲ್ಲಿ ಕಳೆದ ಎರಡು ವರ್ಷಗಳಿಂದ ನಾಟಕ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ದರು. ರೈತರು ತಾವು ಕಟ್ಟಿದ ವಿಮೆಯ ಹಕ್ಕನ್ನು ಕೇಳುತ್ತಿದ್ದಾರೆಯೇ ಹೊರತು ಯಾರ ಉಪಕಾರವನ್ನಲ್ಲ. ವಿಮೆ ಪಾವತಿಯಲ್ಲಿ ಆಗುತ್ತಿರುವ ವಿಳಂಬದ ಹಿಂದೆ ಯಾರಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ನೀವೇ ತಡೆಹಿಡಿದು, ಈಗ ನೀವೇ ಕೊಡಿಸುತ್ತೇವೆ ಎಂದು ಹೇಳುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು. ಸಾಲ ಮನ್ನಾ ವಿಳಂಬವಾದರೆ ರೈತರ ಮೇಲಿನ ಬಡ್ಡಿ ದರ ಶೇ.3 ರಿಂದ ಶೇ. 11-12ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದ ಸರ್ಕಾರಕ್ಕೆ ಸುಮಾರು 300 ರಿಂದ 520 ಕೋಟಿ ರೂಪಾಯಿ ಹೊರೆಯಾಗ ಬಹುದು, ಆದರೆ ರೈತರಿಗೆ 1700 ಕೋಟಿ ರೂಪಾಯಿಗೂ ಅಧಿಕ ಲಾಭವಾಗಲಿದೆ. ನಾವು ಯಾವಾಗಲೂ ರೈತರ ಪರವಾಗಿದ್ದೇವೆ ಮತ್ತು ಅವರಿಗೆ ಮತ್ತಷ್ಟು ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದರು.