ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Annabrahma Chaturmasya: ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸಿದ ನೀರು ಆರೋಗ್ಯಕ್ಕೆ ಮಾರಕ: ರಾಘವೇಶ್ವರ ಶ್ರೀ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ರಾಘವೇಶ್ವರ ಶ್ರೀಗಳು ನೀರಿನ ಮಹತ್ವದ ಬಗ್ಗೆ ಪ್ರವಚನ ನೀಡಿದ್ದಾರೆ. ನೀರು ರಾಜಸ ತಾಮಸ ಗುಣಗಳನ್ನು ನಿಯಂತ್ರಿಸುವುದರ ಜೊತೆಗೆ ಹೃದಯಕ್ಕೆ ಬಲವನ್ನು ತುಂಬುತ್ತದೆ. ನೀರಿನದ್ದು ಅವ್ಯಕ್ತ ರಸವಾಗಿದ್ದು, ನೀರಿಗೆ ರುಚಿ, ಬಣ್ಣಗಳಿಲ್ಲ. ನೀರಿನ ವಿಚಾರದಲ್ಲಿ ಆಯುರ್ವೇದದಲ್ಲಿ ಅಪರಿಮಿತವಾದ ಸಂಶೋಧನೆ ನಡೆದಿದ್ದು, ಅದು ಅನುಸರಣೀಯವಾಗಿದೆ ಎಂದು ಹೇಳಿದ್ದಾರೆ.

ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸಿದ ನೀರು ಆರೋಗ್ಯಕ್ಕೆ ಮಾರಕ: ರಾಘವೇಶ್ವರ ಶ್ರೀ

-

Prabhakara R
Prabhakara R Sep 6, 2026 11:00 PM

ಗೋಕರ್ಣ: ನೀರು ಎಂಬುದು ಪ್ರಾಣಿಗಳ ಪ್ರಾಣವೇ ಆಗಿದೆ. ಸಂಸ್ಕೃತದಲ್ಲಿ ನೀರಿಗೆ ಜೀವನ ಎಂಬುದೇ ಪರ್ಯಾಯ ಪದವಾಗಿದೆ. ಇದು ನೀರಿಗಿರುವ ಮಹತ್ವವನ್ನು ಸಾರಿ ಹೇಳುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು (Raghaveshwara Swamiji) ಹೇಳಿದರು.

Annabrahma Chaturmasya  (1)

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಭಾನುವಾರ ಪ್ರವಚನ ಅನುಗ್ರಹಿಸಿದ ಶ್ರೀಗಳು, ಪ್ರಾಚೀನರು ಅಮೃತ ಸಮವಾದ ನೀರನ್ನು ನೆಲದೊಳಗಿನ ನೀರು ಹಾಗೂ ನೆಲ ಮುಟ್ಟದ ನೀರು ಎಂದು ಪ್ರಮುಖವಾಗಿ ವಿಭಾಗಿಸಿದ್ದು, ಇವುಗಳಲ್ಲಿಯೂ ಹಲವಾರು ವಿಧಗಳನ್ನು ಗುರುತಿಸಿದ್ದು, ಯಾವ ನೀರಿನಿಂದ ಏನು ಪರಿಣಾಮ ಎಂಬುದಾಗಿಯೂ ವಿಶ್ಲೇಷಿಸಿದ್ದಾರೆ. ದೇವರು ಕೊಟ್ಟಂತಹ ಅತ್ಯದ್ಭುತ ಜಲವನ್ನು ನಾವಿಂದು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿಸಿ ವಿಷವಾಗಿಸಿ ಕುಡಿಯುತ್ತಿದ್ದೇವೆ. ಹಾಗೆ ಕುಡಿದಾಗ ನೀರಿನ ಜೊತೆಗೆ ಪ್ಲಾಸ್ಟಿಕ್ ಕೂಡ ನಮ್ಮೊಳಗೆ ಸೇರುತ್ತದೆ. ಇದು ಕೆಡುಕು ಎಂಬುದನ್ನು ಆಧುನಿಕ ವಿಜ್ಞಾನವೂ ಹೇಳುತ್ತಿದೆ ಎಂದರು.

ನೀರು ರಾಜಸ ತಾಮಸ ಗುಣಗಳನ್ನು ನಿಯಂತ್ರಿಸುವುದರ ಜೊತೆಗೆ ಹೃದಯಕ್ಕೆ ಬಲವನ್ನು ತುಂಬುತ್ತದೆ. ನೀರಿನದ್ದು ಅವ್ಯಕ್ತ ರಸವಾಗಿದ್ದು, ನೀರಿಗೆ ರುಚಿ, ಬಣ್ಣಗಳಿಲ್ಲ. ನೀರಿನ ವಿಚಾರದಲ್ಲಿ ಆಯುರ್ವೇದದಲ್ಲಿ ಅಪರಿಮಿತವಾದ ಸಂಶೋಧನೆ ನಡೆದಿದ್ದು, ಅದು ಅನುಸರಣೀಯವಾಗಿದೆ ಎಂದರು.

Annabrahma Chaturmasya  (2)

ರಾಜಸ ತಾಮಸ ಕಾರ್ಯಗಳನ್ನು ಮಾಡುವವರಿಗೆ ರಾಜಸ ತಾಮಸ ಆಹಾರಗಳ ಸೇವನೆಗೆ ಭಾರತೀಯ ಪರಂಪರೆ ಅವಕಾಶವನ್ನು ಪರಿಕಲ್ಪಿಸಿದೆ. ಕ್ಷತ್ರಿಯರಿಗೆ ಯುದ್ಧಾದಿಗಳನ್ನು ಮಾಡುವ ಕಾರ್ಯಗಳಿವೆ. ಅವರು ಯುದ್ಧದಲ್ಲಿ ಯಾರದ್ದೋ ಶಿರಸ್ಸನ್ನು ಕತ್ತರಿಸಬೇಕು ಎಂದಾದರೆ ಅವನು ರಾಜಸ ತಾಮಸ ಆಹಾರಗಳನ್ನು ಸೇವಿಸುವುದು ಅವಶ್ಯಕವಾಗಿದೆ. ಆಹಾರ ಎಲ್ಲರಿಗೂ ಒಂದನ್ನೇ ಹೇಳಿಲ್ಲ. ಗುಣ ಕರ್ಮಗಳಿಗೆ ಅನುಗುಣವಾಗಿ ಆಹಾರವನ್ನು ಭಾರತೀಯ ಪರಂಪರೆ ಸೂಚಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದಕ್ಷಿಣ ಬೆಂಗಳೂರು ಹವ್ಯಕ ಮಂಡಲ ವಿಜಯನಗರ, ರಾಜರಾಜೇಶ್ವರಿ, ಅನ್ನಪೂರ್ಣೇಶ್ವರಿ, ಬನಶಂಕರಿ ಹವ್ಯಕ ವಲಯಗಳ ಪರವಾಗಿ ದತ್ತಾತ್ರೇಯ ಭಟ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಕೊಣಂದೂರು ಪ್ರಕಾಶ, ಅನುರಾಧ ಪಾರ್ವತಿ, ಡಾ. ವೈ. ವಿ. ಕೃಷ್ಣಮೂರ್ತಿ, ಗುರುರಾಜ ಪಡೀಲು, ದಿನಪ್ರಧಾನರಾಗಿ ಸಿಎ. ಸಿಎಸ್. ಗೋಪಾಲಕೃಷ್ಣ ಹೆಗಡೆ ಹುಕ್ಲುಮಕ್ಕಿ ದಂಪತಿಗಳು ಉಪಸ್ಥಿತರಿದ್ದರು.

Annabrahma Chaturmasya  (3)

ಗಾಣಿಗ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:

ಶ್ರೀಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುವ ಗಾಣಿಗ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ಪೂಜೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಗಾಣಿಗ ಸಮಾಜದ ಜೊತೆ ಶ್ರೀಮಠ ಇರಲಿದ್ದು, ಶ್ರೀಮಠಕ್ಕೆ ಆಗಾಗ ಭೇಟಿ ನೀಡುವ ಮೂಲಕ ಗುರುಶಿಷ್ಯ ಸಂಬಂಧ ಗಟ್ಟಿಯಾಗುವಂತಾಗಲಿ ಎಂದು ಹಾರೈಸಿದರು. ಮಹೇಶ ಶೆಟ್ಟಿ, ದಾಮೋಧರ ಶೆಟ್ಟಿ, ಸುಭಾಸ್ ಶೆಟ್ಟಿ ಭಟ್ಕಳ, ನಾರಾಯಣ ಶೆಟ್ಟಿ ಭಟ್ಕಳ, ಮನೋಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.