ಯಲ್ಲಾಪುರ: ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ರಂಜಿತಾ (Yallapura Rajnjita Murder Case) ಎಂಬಾಕೆಯನ್ನು ಬರ್ಬರವಾಗಿ ಹತ್ಯೆಗೈದಿದ್ದ ಹಂತಕ ರಫೀಕ್, ಈಗ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಸದ್ಯ ಪೊಲೀಸರಿಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಾಮಾಪುರ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಂಜಿತಾ ಮಲ್ಲಪ್ಪ ಬನಸೋಡೆ (30) ಕೊಲೆಯಾದ ದುರ್ದೈವಿ. ಆರೋಪಿ ರಫೀಕ್ ಇಮಾಮಸಾಬ ಯಳ್ಳೂರ (30), ರಂಜಿತಾಳನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ರಂಜಿತಾ ಮದುವೆಗೆ ಒಪ್ಪಿರಲಿಲ್ಲ ಇದರಿಂದ ಕೆರಳಿದ ಆರೋಪಿ, ರಂಜಿತಾಳನ್ನು ಅಡ್ಡಗಟ್ಟಿ ಚಾಕುವಿನಿಂದ ಕುತ್ತಿಗೆ ಕೊಯ್ದು ಕ್ರೂರವಾಗಿ ಕೊಲೆ ಮಾಡಿದ್ದ.
ಸುಮಾರು ಹತ್ತು ವರ್ಷಗಳ ಹಿಂದೆ ರಂಜಿತಾಳಿಗೆ ವಿಚ್ಛೇದನವಾಗಿದ್ದು, ಆಕೆಗೆ ಒಂದು ಮಗು ಕೂಡ ಇದೆ. ರಂಜಿತಾ ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಾಗಿದ್ದು, ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚಿನ ಕೆಲ ತಿಂಗಳಿಂದ ರಫೀಕ್ ಮದುವೆಯಾಗುವಂತೆ ರಂಜಿತಾಳ ಮೇಲೆ ಒತ್ತಡ ಹೇರುತ್ತಿದ್ದ. ಇದಕ್ಕೆ ರಂಜಿತಾ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿ, ನಾನು ಈಗಾಗಲೇ ಮದುವೆಯ ಅನುಭವಿಸಿದ್ದು ಸಾಕು. ನನಗೆ ಮತ್ತೆ ಮದುವೆ ಇಷ್ಟವಿಲ್ಲ. ನಮ್ಮ ಸಂಬಂಧ ಹೀಗೆ ಇರಲಿ, ಆದರೆ ಮದುವೆ ಆಗುವುದಿಲ್ಲ ಎಂದು ಹೇಳಿದ್ದಳು.
ಇದೇ ಕಾರಣಕ್ಕೆ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ರಂಜಿತಾಳನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಕೊಲೆ ಮಾಡಿದ ಬಳಿಕ ಪರಾರಿಯಾಗಿದ್ದ ರಫೀಕ್ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದರು. ಆದರೆ, ಇಂದು ಯಲ್ಲಾಪುರ ಸಮೀಪದ ಕಾಡಿನಲ್ಲಿ ಆತ ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ. ರಂಜಿತಾ ಕೊಲೆ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಂದೂ ಮಹಿಳೆಯ ಹತ್ಯೆ ಖಂಡಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಭಾನುವಾರ ಯಲ್ಲಾಪುರ ಬಂದ್‌ಗೆ ಕರೆ ನೀಡಿದ್ದಾರೆ. ಯಲ್ಲಾಪುರದಲ್ಲಿ ನಡೆದ ರಂಜಿತಾ ಬನಸೋಡೆ ಅವರ ಭೀಕರ ಕೊಲೆಯನ್ನು ಶಾಸಕ ಶಿವರಾಮ ಹೆಬ್ಬಾರ್ ತೀವ್ರವಾಗಿ ಖಂಡಿಸಿದ್ದು, ಇದೊಂದು ಅಮಾನವೀಯ ಕೃತ್ಯವೆಂದು ಅವರು ಹೇಳಿದ್ದಾರೆ.
ಯಲ್ಲಾಪುರ ಬಂದ್
ಹಿಂದೂ ಮಹಿಳೆಯ ಕೊಲೆಯನ್ನು ಖಂಡಿಸಿ ಮತ್ತು ಆರೋಪಿಯ ಬಂಧನಕ್ಕೆ ಆಗ್ರಹಿಸಿ ಇಂದು ವಿಶ್ವ ಹಿಂದೂ ಪರಿಷತ್ ಮತ್ತು ವಿವಿಧ ಹಿಂದೂ ಸಂಘಟನೆಗಳು 'ಯಲ್ಲಾಪುರ ಬಂದ್'ಗೆ ಕರೆ ನೀಡಿವೆ. ಬೆಳಗ್ಗಿನಿಂದಲೇ ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವ ಮೂಲಕ ವರ್ತಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಪಟ್ಟಣದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹೆಚ್ಚಿನ ಭದ್ರತೆಯನ್ನು ನಿಯೋಜಿಸಿದ್ದಾರೆ.