KB Ganapathy: ಹಿರಿಯ ಪತ್ರಕರ್ತ ಕೆಬಿ ಗಣಪತಿ ನಿಧನ, ಕೆಯುಡಬ್ಲ್ಯೂಜೆ ಸಂತಾಪ
KB Ganapathy: ಕಳೆದ ಐವತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ಕೆ.ಬಿ. ಗಣಪತಿ ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಗಳ ಸಂಸ್ಥಾಪಕ-ಸಂಪಾದಕರಾಗಿದ್ದರು. ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಕೆಬಿ ಗಣಪತಿ

ಬೆಂಗಳೂರು: ಮೈಸೂರು ಮಿತ್ರ (Mysuru mitra) ಮತ್ತು ಸ್ಟಾರ್ ಆಫ್ ಮೈಸೂರು (Star of mysore) ಪತ್ರಿಕೆಗಳ ಸಂಸ್ಥಾಪಕರಾದ ಹಿರಿಯ ಪತ್ರಿಕೋದ್ಯಮಿ ಕೆ.ಬಿ. ಗಣಪತಿ (85) (KB Ganapathy) ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಐವತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ಕೆ.ಬಿ. ಗಣಪತಿ ಮೂಲತಃ ಕೊಡಗಿನವರು. ತಮ್ಮ ವರದಿಗಾರಿಕೆ, ಅಂಕಣಗಳ ಮೂಲಕ ಗಮನ ಸೆಳೆದಿದ್ದ ಗಣಪತಿ ಅವರು ಸದಾ ಸುದ್ದಿ ಮನೆಯಲ್ಲಿ ಕ್ರಿಯಾಶೀಲವಾಗಿದ್ದವರು.
ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ
ಕೆಬಿ ಗಣಪತಿ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ʼಲೈಫ್ ಅಂಡ್ ಟೈಮ್ಸ್ʼ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಗಳ ಸಂಸ್ಥಾಪಕ-ಸಂಪಾದಕರಾದ ಅವರು ಬಾಂಬೆಯಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾವನ್ನು ಪಡೆದಿದ್ದರು. 1961- 1965ರವರೆಗೆ ಬೆಂಗಳೂರಿನಲ್ಲಿ ವಕೀಲರಾಗಿ, 1970ರಲ್ಲಿ ಪೂನಾದಲ್ಲಿ ಜಾಹೀರಾತು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಮೈಸೂರು ಕೇಂದ್ರ ಭಾರತೀಯ ವಿದ್ಯಾಭವನದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
1978ರಲ್ಲಿ ಅವರು ಮೈಸೂರಿನಲ್ಲಿ ಎರಡು ಪತ್ರಿಕೆಗಳನ್ನು ಸ್ಥಾಪಿಸಿ ಪ್ರಕಟಿಸಿದರು. ಒಂದು ಇಂಗ್ಲಿಷ್‌ನಲ್ಲಿ ' ಸ್ಟಾರ್ ಆಫ್ ಮೈಸೂರು' ಮತ್ತು ಇನ್ನೊಂದು ಕನ್ನಡದಲ್ಲಿ 'ಮೈಸೂರು ಮಿತ್ರ'. ಅಂದಿನಿಂದ ಅವರು ಎರಡೂ ಪತ್ರಿಕೆಗಳ ಸಂಪಾದಕ ಮತ್ತು ಪ್ರಕಾಶಕರಾಗಿದ್ದರು. 1993 ಮತ್ತು 1995ರ ನಡುವೆ ಕರ್ನಾಟಕ ಪತ್ರಿಕಾ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದರು. 2001ರಲ್ಲಿ ಅವರಿಗೆ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. ಅವರು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರೂ ಆಗಿದ್ದರು. ವ್ಯಾಪಕವಾಗಿ ಪ್ರಯಾಣಿಸಿರುವ ಅವರು, ಆಗ್ನೇಯ ಏಷ್ಯಾ, ಅಮೆರಿಕ, ಇಸ್ರೇಲ್, ಈಜಿಪ್ಟ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಗಳಿಗೆ ಭೇಟಿ ನೀಡಿದ್ದಾರೆ. ಆರು ವರ್ಷಗಳ ಕಾಲ ಅವರು ಕಾವೇರಿ ಕಾಲೇಜಿನ ಉಪಾಧ್ಯಕ್ಷರಾಗಿದ್ದರು.
ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. 1992ರಲ್ಲಿ ಕನ್ನಡದಲ್ಲಿ ʼಆದರ್ಶವಾದಿʼ ಎಂಬ ಕಾದಂಬರಿಯನ್ನು ಬರೆದರು. ಮುಂದಿನ ವರ್ಷ (1993) ಇಂಗ್ಲಿಷ್‌ನಲ್ಲಿ ʼಅಮೇರಿಕಾ - ಆನ್ ಏರಿಯಾ ಆಫ್ ಲೈಟ್ʼ ಎಂಬ ಪ್ರವಾಸ ಕಥನ ಬರೆದರು. 1994ರಲ್ಲಿ ಇಂಗ್ಲಿಷ್‌ನಲ್ಲಿ ʼದಿ ಕ್ರಾಸ್ ಅಂಡ್ ದಿ ಕೂರ್ಗ್ಸ್ʼ ಎಂಬ ಮತ್ತೊಂದು ಕಾದಂಬರಿಯನ್ನು ಬರೆದರು. ಇದನ್ನು ನಂತರ ಕನ್ನಡದಲ್ಲಿಯೂ ಬರೆದರು. 2003ರಲ್ಲಿ ʼಅಬ್ರಕಾಡಬ್ರಾʼ ಎಂಬ ಆಯ್ದ ಅಂಕಣಗಳ ಸಂಗ್ರಹ ಪ್ರಕಟಿಸಿದರು. 2009ರಲ್ಲಿ, ಅವರು "ಗಾಂಧೀಸ್ ಎಪಿಸ್ಟಲ್ ಟು ಒಬಾಮಾʼ ಎಂಬ ಇಂಗ್ಲಿಷ್ ಕೃತಿ ಬರೆದರು.
ಪತ್ರಕರ್ತರ ಸಂಘ ಸಂತಾಪ
ಹಿರಿಯ ಪತ್ರಕರ್ತರಾದ ಕೆ.ಬಿ.ಗಣಪತಿ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಘನತೆಯಿಂದ ಪತ್ರಿಕೋದ್ಯಮ ನಡೆಸಿದ ಗಣಪತಿ ಅವರ ನಿಧನದಿಂದ ಸುದ್ದಿಮನೆಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶೋಕಿಸಿದ್ದಾರೆ. ಗಣಪತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: Kaka Patil: "ಕಾಕಾ ಪಾಟೀಲ್ ನಿಂಗೂ ಫ್ರೀ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದ ಮಾಜಿ ಶಾಸಕ ಇನ್ನಿಲ್ಲ