ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜ್ಯಾದ್ಯಂತ ಹೆಚ್ಚಿದ ತಾಪಮಾನ; ಹೀಟ್ ಸ್ಟ್ರೋಕ್‌ಗೆ 15 ವರ್ಷದ ಬಾಲಕ ಬಲಿ

ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ ಹೆಚ್ಚುತ್ತಲೇ ಇದ್ದು, ಜನರು ಹೈರಾಣಾಗುತ್ತಿದ್ದಾರೆ. ತೀವ್ರ ತಾಪಮಾನಕ್ಕೆ (Heatstroke) 15 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಸಂಗ್ರಹ ಚಿತ್ರ

ವಿಜಯಪುರ: ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ ಹೆಚ್ಚುತ್ತಲೇ ಇದ್ದು, ಜನರು ಹೈರಾಣಾಗುತ್ತಿದ್ದಾರೆ. ತೀವ್ರ ತಾಪಮಾನಕ್ಕೆ (Heatstroke) 15 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯಲ್ಲಿ ನಡೆದಿದೆ. ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಬಾಲಕನನ್ನು ಶ್ರೀಶೈಲ ಬಿರಾದಾರ (15) ಎಂದು ಗುರುತಿಸಲಾಗಿದೆ. ಶಾಲಾ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಶ್ರೀಶೈಲ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಆಟವಾಡಿದ್ದ ಎನ್ನಲಾಗಿದೆ.

ಕೆಲ ಹೊತ್ತಿನಲ್ಲಿಯೇ ಆತ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಬಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನಿನ್ನೆ ಬಿಸಿಲಿನ ತಾಪ ತಾಳಲಾರದೆ ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ನಿವಾಸಿಯಾದ ಹುಸೇನಪ್ಪ (45) ಮೃತಪಟ್ಟ ದುರ್ದೈವಿ.

ಇವರು ಎಂದಿನಂತೆ ಅತೀ ಹೆಚ್ಚಿನ ತಾಪಮಾನದ ನಡುವೆಯೇ ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕಾ ಮಿಷನ್ ಅಡಿಯಲ್ಲಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತೀವ್ರವಾದ ಬಿಸಿಲಿನಿಂದಾಗಿ ಅವರು ದಿಢೀರ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಾರ ಬಿಸಿಲಿನ ತಾಪಕ್ಕೆ ಬೆಳಗಾವಿ ಜಿಲ್ಲೆಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಲಿಯಾಗಿದ್ದರು. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನಿವಾಸಿಯಾಗಿರುವ ವೆಂಕಟೇಶ್ ಬಳ್ಳಾರಿ (35) ಮೃತ ದುರ್ದೈವಿ.

ರಾಜ್ಯದಲ್ಲಿಂದು ಬಿರುಗಾಳಿಯ ಜೊತೆಗೆ ಆಲಿಕಲ್ಲು ಮಳೆ ಮುನ್ಸೂಚನೆ; 25 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್‌

ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಅದರ ಪರಿಣಾಮಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳಲಾರಂಭಿಸಿವೆ. ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ವೈದ್ಯರು ಗಂಭೀರ ಎಚ್ಚರಿಕೆ ನೀಡಿದ್ದು, ಮಕ್ಕಳು-ವೃದ್ಧರು, ಗರ್ಭಿಣಿಯರು ಹೆಚ್ಚು ಅಪಾಯದಲ್ಲಿದ್ದು, ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಿದ್ದಾರೆ. ಹೆಚ್ಚು ನೀರು ಹಾಗೂ ದ್ರವ ಪದಾರ್ಥಗಳನ್ನು ಸೇವಿಸಲು ತಿಳಿಸಲಾಗಿದೆ. ಈ ಬಾರಿ ರಾಜ್ಯ ಸರ್ಕಾರ ವಿಶೇಷವಾಗಿ ಹೀಟ್‌ ಸ್ಟ್ರೋಕ್‌ಗೆ ಒಳಗಾಗಿದ್ದವರಿಗಾಗಿ ವಾರ್ಡ್‌ ತೆರದಿದ್ದು, ಸಕಲ ಸಿದ್ಧತೆ ನಡೆಸಲಾಗಿದೆ.

Vishakha Bhat Heggar

View all posts by this author