ವಿಜಯಪುರ: ರಾಜ್ಯಾದ್ಯಂತ ಬೆಚ್ಚಿ ಬೀಳಿಸುತ್ತಿರುವ ಬ್ಯಾಂಕ್ ದರೋಡೆ ಪ್ರಕರಣಗಳ ಸಾಲಿಗೆ ಇದೀಗ ಭೀಮಾತೀರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ (Bank Robbery) ಕೂಡ ಸೇರ್ಪಡೆಯಾಗಿದೆ. ಹೌದು, ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಮಂಗಳವಾರ ಸಂಜೆ 6.30ರ ಸುಮಾರಿಗೆ ದೊಡ್ಡ ಪ್ರಮಾಣದ ದರೋಡೆ ನಡೆದಿದೆ.
ಗೇಟ್ ಲಾಕ್ ಮಾಡದೇ ಸಿಬ್ಬಂದಿ ಕೆಲಸದಲ್ಲಿ ತೊಡಗಿದ್ದ ಸಂದರ್ಭ ಒಳನುಗ್ಗಿದ ಮೂರಕ್ಕೂ ಅಧಿಕ ಮುಸುಕುಧಾರಿಗಳು, ಸಿಬ್ಬಂದಿಯನ್ನು ಪಿಸ್ತೂಲ್, ಚಾಕು ತೋರಿಸಿ ಹೆದರಿಸಿದ್ದಾರೆ. ಸ್ಟ್ರಾಂಗ್ ರೂಮ್ ಮಾಹಿತಿ ಪಡೆದಿದ್ದಲ್ಲದೇ ಕೈ ಕಟ್ಟಿಹಾಕಿ-ಬಾಯಿ ಬಂದ್ ಮಾಡಿ ಕಳ್ಳತನ ಮಾಡಿದ್ದಾರೆ.
ಕೇವಲ 20 ನಿಮಿಷಗಳ ಒಳಗಾಗಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಬಳಿಕ ಗ್ರಾಹಕನೋರ್ವ ಬ್ಯಾಂಕ್ ಒಳಗೆ ಹೋಗಿ ಗಮನಿಸಿದಾಗ, ಸಿಬ್ಬಂದಿಯ ಕೈ ಕಟ್ಟಿ ಹಾಕಿದ್ದು ಮತ್ತು ಬಾಯಿ ಬಂದ್‌ಗೊಳಿಸಿರುವುದು ಕಂಡು ಬಂದಿದೆ.
ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಚಡಚಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದ್ದು, ಕಳ್ಳತನವಾದ ನಗದು ಎಷ್ಟು? ಕೃತ್ಯ ಹೇಗಾಯಿತು? ಎಂಬಿತ್ಯಾದಿ ವಿವರ ತನಿಖೆ ಬಳಿಕವೇ ಗೊತ್ತಾಗಲಿದೆ.
ಬೆಂಗಳೂರಿನಲ್ಲಿ ಲೀಸ್ ನೆಪದಲ್ಲಿ ಕೋಟ್ಯಂತರ ರೂಪಾಯಿ ವಂಚನೆ, ಆರೋಪಿ ನಾಪತ್ತೆ

ಬೆಂಗಳೂರು: ಬೆಂಗಳೂರು (Bengaluru) ನಗರದಲ್ಲಿ ಮನೆ ಲೀಸ್ (lease) ಹೆಸರಿನಲ್ಲಿ ಹತ್ತಾರು ಜನರಿಗೆ ಭಾರೀ ವಂಚನೆ (Fraud case) ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ಹೆಸರಿನಲ್ಲಿ ವ್ಯಕ್ತಿಯೊಬ್ಬ ಅನೇಕ ಕುಟುಂಬಗಳಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದು ನಾಪತ್ತೆಯಾಗಿದ್ದಾನೆ. ಇದೀಗ ಆರೋಪಿ ವಿವೇಕ್ ಕೇಶವನ್ ಹಾಗೂ ಆತನ ಸಹಚರರ ವಿರುದ್ಧ ಪರಪ್ಪನ ಅಗ್ರಹಾರ, ಹೆಬ್ಬಗೋಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗಳಲ್ಲಿ ವಿವಿಧ ಎಫ್ಐಆರ್ಗಳು ದಾಖಲಾಗಿವೆ.
ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಾಲೀಕ ವಿವೇಕ್ ಕೇಶವನ್, ವೆಬ್‌ಸೈಟ್ ಮುಖಾಂತರ ಮನೆ ಬಾಡಿಗೆಗೆ ಪಡೆದು ನಂತರ ಅದೇ ಮನೆಗಳನ್ನು ಲೀಸ್‌ಗೆ ನೀಡುವ ಮೂಲಕ ಜನರಿಂದ ಭಾರೀ ಮೊತ್ತವನ್ನು ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ. ಪ್ರಾರಂಭದಲ್ಲಿ ಮನೆಯ ಮಾಲೀಕರಿಗೆ ಒಂದೆರಡು ತಿಂಗಳು ಬಾಡಿಗೆ ಪಾವತಿಸಿದ್ದರೂ, ಕಳೆದ ಆರು ತಿಂಗಳಿಂದ ಯಾವುದೇ ಬಾಡಿಗೆ ಹಣ ಪಾವತಿಸಿರಲಿಲ್ಲ. ಅಲ್ಲದೆ, ಕಂಪನಿ ಕಚೇರಿಯನ್ನು ರಾತ್ರೋರಾತ್ರಿ ಖಾಲಿ ಮಾಡಿ ಪರಾರಿಯಾಗಿದ್ದಾನೆ ಎಂದು ವಂಚನೆಗೆ ಒಳಗಾದವರು ಆರೋಪಿಸಿದ್ದಾರೆ.
ಮನೆ ಲೀಸ್‌ಗೆ ಪಡೆದ ನೂರಾರು ಕುಟುಂಬಗಳು ಇದೀಗ ಸಂಕಷ್ಟಕ್ಕೆ ಸಿಲುಕಿವೆ. ಮಾಲೀಕರು ಮನೆ ಖಾಲಿ ಮಾಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ವಂಚನೆಗೆ ಒಳಗಾದವರು ತಮ್ಮ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡು ಮನೆ ಇಲ್ಲದೆ ಬೀದಿಗೆ ಬೀಳುವ ಸ್ಥಿತಿಗೆ ತಲುಪಿದ್ದಾರೆ.
ಇದನ್ನೂ ಓದಿ: Actress Shilpa Shetty: 60 ಕೋಟಿ ವಂಚನೆ-ರೆಸ್ಟೋರೆಂಟ್ ಮುಚ್ಚಿದ ಶಿಲ್ಪಾ ಶೆಟ್ಟಿ
ಸುಮಾರು 60 ಕೋಟಿ ರೂಪಾಯಿಗೂ ಅಧಿಕ ವಂಚನೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ ಸೇರಿದಂತೆ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಆರೋಪಿ ವಂಚನೆ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚಕನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಆರೋಪಿಯು ಕೇಂದ್ರ ಸಚಿವ ರಾಜನಾಥ್ ಸಿಂಗ್ ಜೊತೆಗೂ ಫೋಟೊ ತೆಗೆಸಿಕೊಂಡಿದ್ದ. ಅದನ್ನೂ ವಂಚನೆಗೆ ಬಳಸಿಕೊಂಡಿರುವ ಸಾಧ್ಯತೆ ಇದೆ.