ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಜಯಪುರದ ಪ್ರಸಿದ್ಧ ಪ್ರವಾಸಿ ತಾಣ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ ಆರು ಮೃತದೇಹಗಳು ಪತ್ತೆ!

Crime News: ವಿಜಯಪುರ ನಗರದ ಹೊರವಲಯದಲ್ಲಿರುವ ಐತಿಹಾಸಿಕ ಪ್ರವಾಸಿ ತಾಣವಾದ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಆರು ಜನರ ಮೃತದೇಹಗಳು ಪತ್ತೆಯಾಗಿದೆ. ಮೃತರ ಪೈಕಿ ಐವರು ಅಪ್ರಾಪ್ತ ಮಕ್ಕಳು ಹಾಗೂ ಒಬ್ಬ ಮಹಿಳೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಭೂತನಾಳ ಕೆರೆ (ಸಾಂದರ್ಭಿಕ ಚಿತ್ರ)

ವಿಜಯಪುರ, ಆ.26: ಒಂದೇ ಕುಟುಂಬಕ್ಕೆ ಸೇರಿದ ಆರು ಜನರ ಮೃತದೇಹಗಳು ಪತ್ತೆಯಾದ ಘಟನೆ ವಿಜಯಪುರ (Vijayapura) ನಗರದ ಹೊರವಲಯದಲ್ಲಿರುವ ಐತಿಹಾಸಿಕ ಪ್ರವಾಸಿ ತಾಣವಾದ ಭೂತನಾಳ ಕೆರೆಯಲ್ಲಿ ನಡೆದಿದ್ದು, ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮೃತರ ಪೈಕಿ ಐವರು ಅಪ್ರಾಪ್ತ ಮಕ್ಕಳು ಹಾಗೂ ಒಬ್ಬ ಮಹಿಳೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಕೆರೆಯ ಅಂಚಿನಲ್ಲಿ ಶವಗಳು ತೇಲುತ್ತಿರುವುದನ್ನು ನೋಡಿ ಸ್ಥಳೀಯರು ಆಘಾತಗೊಂಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ (Crime News).

ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕಾಗಮಿಸಿದ ನಗರ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಕಾರ್ಯಾಚರಣೆ ನಡೆಸಿ, ಮಕ್ಕಳು ಮತ್ತು ಮಹಿಳೆ ಸೇರಿ ಒಟ್ಟು ಆರು ಮೃತದೇಹಗಳನ್ನು ಹೊರತೆಗೆದರು.

ಮೃತರನ್ನು ಶೋಭಾ ಜಾಲಗೇರಿ (45) ಹಾಗೂ ಆಕೆಯ ಮಕ್ಕಳಾದ ವಿದ್ಯಾ (16), ಸುವರ್ಣ (14), ಗೌಡೇಶ್ (10), ವಿಕಾಸ (5) ಮತ್ತು ಸಾನಿಕಾ (7) ಎಂದು ಗುರುತಿಸಲಾಗಿದೆ. ಪತಿ ಭೀಮರಾಯ ಜಾಲಗೇರಿಯೊಂದಿಗೆ ಮೃತ ಶೋಭಾಗೆ ಕೌಟುಂಬಿಕ ವಿವಾದವಿತ್ತು ಎನ್ನಲಾಗಿದೆ. ಆಗಸ್ಟ್ 24 ರಿಂದ ಈ ಕುಟುಂಬ ಕಾಣೆಯಾಗಿತ್ತು ಎಂದು ಹೇಳಲಾಗಿದೆ.

ಹತ್ತಿರದಿಂದ ಶೂಟ್, ಮುರಿದ ಪಕ್ಕೆಲುಬು...ಹನೂರು ಶೂಟೌಟ್‌ ವೇಳೆ ಹತರಾದ ತಮಿಳುನಾಡು ಬೇಟೆಗಾರರ ಮರಣೋತ್ತರ ಪರಿಕ್ಷೆಯ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಆಗಾಗ ಪತಿ-ಪತ್ನಿ ನಡುವೆ ತೀವ್ರ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಪತಿಯೊಂದಿಗೆ ಜಗಳದ ನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಶೋಭಾ, ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೊರಬಂದಿದ್ದರು ಎನ್ನಲಾಗಿದೆ.

ಇದು ಸಾಮೂಹಿಕ ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಂಭವಿಸಿದ ದುರಂತವೋ ಅಥವಾ ಯಾರಾದರೂ ಹತ್ಯೆ ಮಾಡಿ ಕೆರೆಗೆ ಎಸೆದಿದ್ದಾರೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯ ನಂತರ ಈ ಆರು ಮಂದಿಗೆ ದುರಂತ ಸಾವಿಗೆ ಕಾರಣವೇನು ಎಂಬುದು ತಿಳಿದು ಬರಲಿದೆ. ಸದ್ಯ, ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಶೈಲಂ ದೇವಾಲಯದ ವಸತಿ ಗೃಹದಲ್ಲಿ ಒಂದೇ ಕುಟುಂಬದ ಐವರು ಸಾವು

ವಸತಿ ಗೃಹದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ಶ್ರೀಶೈಲಂ ದೇವಾಲಯ ಪಟ್ಟಣದಲ್ಲಿ ನಡೆದಿದೆ. ವಸತಿ ಗೃಹದಲ್ಲಿ ಮಂಗಳವಾರ ಒಂದೇ ಕುಟುಂಬದ ಐವರು ಮೃತದೇಹಗಳು ಪತ್ತೆಯಾಗಿರುವುದಾಗಿ ಆತ್ಮಕೂರ್ ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ರಾಮಾಂಜಿ ನಾಯಕ್ ತಿಳಿಸಿದ್ದಾರೆ. ಇವರು ಆರ್ಥಿಕ ಸಮಸ್ಯೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.