ವಿಜಯಪುರ, ಮೇ 6: ಕರ್ನಾಟಕದಲ್ಲಿ ಬೀದಿ ನಾಯಿಗಳ ಕಾಟ ಮಿತಿ ಮೀರಿದ್ದು, ಪಾದಚಾರಿಗಳು, ಮಕ್ಕಳ ಮೇಲೆ ದಾಳಿ ನಡೆಸುವ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ವಿಜಯಪುರದಲ್ಲಿ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ಘಟನೆಯ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ (Stray Dog Attacks). ಸಿಸಿಟಿವಿ ಕ್ಯಾಮರಾದಲ್ಲಿ ಬಾಲಕನ ಮೇಲೆ ಬೀದಿ ನಾಯಿ ಆಕ್ರಮಣ ಮಾಡುತ್ತಿರುವುದು ಕಂಡು ಬಂದಿದೆ (Vijayapura News). ಈ ವಿಡಿಯೊ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದು, ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.
ಸಿಸಿಟಿವಿ ಕ್ಯಾಮರಾದ ದೃಶ್ಯದಲ್ಲಿ ಮೂವರು ಬಾಲಕರು ಬೀದಿಯಲ್ಲಿ ಆಡುತ್ತಿರುವಾಗ 2 ಬೀದಿ ನಾಯಿಗಳು ಹಿಂಬಾಲಿಸುತ್ತಿರುವುದು ಕಂಡು ಬಂದಿದೆ. ಕೂಡಲೇ ಇಬ್ಬರು ಬಾಲಕರು ಓಡಿ ತಪ್ಪಿಸಿಕೊಂಡಿದ್ದರೆ ಮತ್ತೊಬ್ಬ ಬಾಲಕ 3 ವರ್ಷದ ಬಾಲಕ ವಿರಾಜ್ ಸಂತೋಷ್ ಬಿರಾದರ್ ತಪ್ಪಿಸಿಕೊಳ್ಳಲು ವಿಫಲವಾಗಿದ್ದಾನೆ.
ಎನ್‌ಡಿಟಿವಿ ಪೋಸ್ಟ್ ಮಾಡಿದ ವಿಡಿಯೊ ಇಲ್ಲಿದೆ:
ಕೆಳಗೆ ಬಿದ್ದ ವಿರಾಜ್‌ನಲ್ಲಿ ಕಚ್ಚಿದ ನಾಯಿ ರಸ್ತೆಯಲ್ಲೇ ಎಳೆದಾಡಿ ಆಚೆಗೆ ಕೊಂಡೊಯ್ದಿದೆ. ಕೂಡಲೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು, ಬೈಕ್ ಸವಾರರು, ಸ್ಥಳದಲ್ಲೇ ಇದ್ದ ಕೆಲವರು ಬಾಲಕನ ನೆರವಿಗೆ ಧಾವಿಸಿ ನಾಯಿಯನ್ನು ಹಿಂಬಾಲಿಕೊಂಡು ಓಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ವಿಜಯಪುರ ನಗರದ ರಾಜಕುಮಾರ ಲೇಔಟ್‌ನಲ್ಲಿ ಈ ಭೀಕರ ಘಟನೆ ನಡೆದಿದೆ.
ಬೀದಿ ನಾಯಿಗೆ ಮತ್ತೊಬ್ಬ ಬಲಿ, ಕಚ್ಚಿ ಕೊಂದು ಶವದ ರಕ್ತ ನೆಕ್ಕುತ್ತಾ ಕುಳಿತಿದ್ದ ನಾಯಿ!
ಬೀದಿ ನಾಯಿ ಬಾಲಕನ್ನು ಕಚ್ಚಿಕೊಂಡು ಸುಮಾರು 30 ಮೀಟರ್ ದೂರಕ್ಕೆ ಸಾಗಿದೆ. ವಿರಾಜ್‌ನ ಕಿರುಚಾಟ ಕೇಳಿ ದೊಣ್ಣೆ ಹಿಡಿದು ಧಾವಿಸಿದ ಸ್ಥಳೀಯರು ಕೊನೆಗೂ ಆತನನ್ನು ನಾಯಿಯ ಬಾಯಿಯಿಂದ ರಕ್ಷಿಸಲು ಯಶಸ್ವಿಯಾದರು. ಗಂಭೀರ ಗಾಯಗೊಂಡ ಬಾಲಕನನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಯಪುರದಲ್ಲಿ ಮಿತಿ ಮೀರಿದ ಬೀದಿ ನಾಯಿ ಕಾಟ
ವಿಜಯಪುರದಲ್ಲಿ ಬೀದಿ ನಾಯಿ ಮಕ್ಕಳ ಮೇಲೆ ದಾಳಿ ನಡೆಸಿದ ಪ್ರಕರಣಗಳು ಹಿಂದೆಯೂ ವರದಿಯಾಗಿವೆ. ಈ ವರ್ಷಾರಂಭದಲ್ಲಿ ಬೀದಿ ನಾಯಿ ದಾಳಿಯಿಂದ 6 ವರ್ಷದ ಬಾಲಕಿ ಗಂಭೀರ ಗಾಯಗೊಂಡಿದ್ದಳು. ಕೆಎಸ್‌ಆರ್‌ಟಿಸಿ ಕಾಲನಿಯಲ್ಲಿ 6 ವರ್ಷದ ಬಾಲಕಿ ನಾಯಿಯ ಆಕ್ರಮಣಕ್ಕೆ ಸಿಲುಕಿ ಸಂಕಷ್ಟಕ್ಕೆ ಒಳಗಾಗಿದ್ದಳು. ಘಟನೆಯಲ್ಲಿ ಬಾಲಕಿಯ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಆಕೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅದಕ್ಕೂ ಮೊದಲು ಬಾಲಕ ಮೇಲೂ ಬೀದಿ ನಾಯಿಗಳ ಆಕ್ರಮಣ ನಡೆದಿತ್ತು.
ಬೀದಿ ನಾಯಿಗೆ ಮತ್ತೊಂದು ಬಲಿ; ಥಾಣೆಯಲ್ಲಿ ಬಾಲಕನನ್ನು ಕಚ್ಚಿ ಕೊಂದ ರಕ್ಕಸ ಶ್ವಾನ
ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ನಾಯಿ ಕಡಿತದ ಪ್ರಕರಣಗಳು ಶೇ. 36ರಷ್ಟು ಹೆಚ್ಚಾಗಿದ್ದು, ರಾಜ್ಯಾದ್ಯಂತ 2.3 ಲಕ್ಷ ಪ್ರಕರಣ ದಾಟಿದೆ. ಕಳೆದ ಸುಮಾರು 20 ರೇಬೀಸ್ ಸಂಬಂಧಿತ ಸಾವುಗಳು ಸಂಭವಿಸಿವೆ. ಹಾಸನ, ಬೆಂಗಳೂರು ಮತ್ತು ವಿಜಯಪುರದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಿದ್ದು, ಇಂತಹ ಘಟನೆಗಳಲ್ಲಿ ಸತತವಾಗಿ ವರದಿಯಾಗುತ್ತಿದೆ. ವಿಜಯಪುರದ ಸ್ಥಳೀಯ ಅಧಿಕಾರಿಗಳು ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಕಾನೂನು ಅಡ್ಡಿಯಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಈ ಘಟನೆ ವ್ಯಾಪಕ ಆಕ್ರೋಶ ಹುಟ್ಟು ಹಾಕಿದೆ.