ವಿಜಯಪುರದಲ್ಲಿ ಹೀನ ಕೃತ್ಯ; ನೋಡಕ್ಕೆ ತನ್ನಂತೆ ಕಾಣಲ್ಲ ಎಂದು 6 ವರ್ಷದ ಮಗನನ್ನು ನದಿಗೆ ತಳ್ಳಿ ಕೊಂದ ಪಾಪಿ ತಂದೆ!
ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಎಂಬಾತ ಕ್ರೂರ ಕೃತ್ಯ ಎಸಗಿದ್ದಾನೆ. ತನ್ನ ಮಗ ನೋಡಲು ತನ್ನಂತೆ ಇಲ್ಲ ಎಂದು ಕೃಷ್ಣಾ ನದಿಗೆ ತಳ್ಳಿ ಕೊಂದಿದ್ದಾನೆ. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಲ್ಲಿಕಾರ್ಜುನ ಅರಕೇರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಪುತ್ರ ಸಿದ್ದಾರ್ಥ ಮತ್ತು ತಂದೆ ಮಲ್ಲಿಕಾರ್ಜುನ ಅರಕೇರಿ -
ವಿಜಯಪುರ: ಅನುಮಾನ ಎಂಬುವುದು ಮನುಷ್ಯನನ್ನು ಎಂತಹ ನೀಚ ಮಟ್ಟಕ್ಕೆ ಇಳಿಸುತ್ತದೆ ಎಂಬುವುದಕ್ಕೆ ಜಿಲ್ಲೆಯಲ್ಲಿ (Vijayapura News) ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಮಗ ನೋಡಲು ತನ್ನಂತೆ ಇಲ್ಲ, ಆತನ ನಡವಳಿಕೆ ಮತ್ತು ಬುದ್ಧಿಯಲ್ಲೂ ತನಗೆ ಹೋಲಿಕೆ ಇಲ್ಲ ಎಂದು 6 ವರ್ಷದ ಮಗನನ್ನು ತಂದೆಯೇ ನದಿಗೆ ತಳ್ಳಿ ಕೊಲೆ ಮಾಡಿರುವ ಕ್ರೂರ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಎಂಬಾತನೇ ಈ ಕ್ರೂರ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಈತನ ಪುತ್ರ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ (6) ಕೊಲೆಯಾದ ದುರ್ದೈವಿ ಬಾಲಕ. ನಾಗಠಾಣ ಗ್ರಾಮದಲ್ಲಿ ವಾಸವಿದ್ದ ಮಲ್ಲಿಕಾರ್ಜುನನಿಗೆ ತನ್ನ ಮಗನ ಬಗ್ಗೆ ಗ್ರಾಮದ ಕೆಲವರು ಪದೇ ಪದೇ ಚೇಡಿಸುತ್ತಿದ್ದರು. 'ನಿನ್ನ ಮಗ ನೋಡಲು ನಿನ್ನಂತಿಲ್ಲ, ಅವನಿಗೂ ನಿನಗೂ ಹೋಲಿಕೆಯೇ ಇಲ್ಲಾ ಎಂದು ಗ್ರಾಮಸ್ಥರು ಹೇಳುತ್ತಿದ್ದ ಚುಚ್ಚುಮಾತುಗಳು ಮಲ್ಲಿಕಾರ್ಜುನನ ಮನಸ್ಸಿನಲ್ಲಿ ಅನುಮಾನ ಹುಟ್ಟಿಸಿದ್ದವು.
ದಿನನಿತ್ಯದ ಈ ಚೇಷ್ಟೆ ಮತ್ತು ಅಪಹಾಸ್ಯದಿಂದ ರೋಸಿಹೋದ ಮಲ್ಲಿಕಾರ್ಜುನ, ಮಗನನ್ನು ಹತ್ಯೆ ಮಾಡಲು ನಿರ್ಧರಿಸಿದ್ದ. ಕಳೆದ ಮಾರ್ಚ್ 16 ರಂದು ಮಗ ಸಿದ್ದಾರ್ಥನನ್ನು ಶಾಲೆಗೆ ಸೇರಿಸುವುದಾಗಿ ನಂಬಿಸಿ ಮನೆಯಿಂದ ಕರೆದುಕೊಂಡು ಹೋಗಿದ್ದ. ಅಲ್ಲಿಂದ ನೇರವಾಗಿ ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಬಳಿ ಕರೆದೊಯ್ದು, ಪುತ್ರನನ್ನು ನದಿಗೆ ತಳ್ಳಿದ್ದಾನೆ. ಮಗು ನೀರಿನಲ್ಲಿ ಮುಳುಗಿದ್ದನ್ನು ಕಂಡ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಮಗನನ್ನು ಹಾಸ್ಟೆಲ್‌ಗೆ ಸೇರಿಸಿದ್ದೇನೆ ಎಂದು ನಾಟಕ
ಹತ್ಯೆಯ ನಂತರ ಮನೆಗೆ ಮರಳಿದ ಮಲ್ಲಿಕಾರ್ಜುನ, ಮಗನನ್ನು ಸಿಂದಗಿ ಬಳಿಯ ಶಾಲೆಯೊಂದಕ್ಕೆ ಸೇರಿಸಿದ್ದು, ಅಲ್ಲಿನ ಹಾಸ್ಟೆಲ್‌ನಲ್ಲಿ ಇದ್ದಾನೆ ಎಂದು ಪತ್ನಿ ಭಾಗ್ಯಶ್ರೀ ಅವರಿಗೆ ಸುಳ್ಳು ಹೇಳಿ ನಂಬಿಸಿದ್ದ. ಮಗನ ಬಗ್ಗೆ ಹೆಂಡತಿ ಕೇಳಿದಾಗಲೆಲ್ಲಾ ಒಂದಲ್ಲ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಏಪ್ರಿಲ್ 1 ರಂದು ಬಾಲಕ ಸಿದ್ದಾರ್ಥನ ಹುಟ್ಟುಹಬ್ಬವಿತ್ತು. ಮಗನ ಜನ್ಮದಿನದ ಅಂಗವಾಗಿ ಅವನನ್ನು ಮನೆಗೆ ಕರೆದುಕೊಂಡು ಬರುವಂತೆ ತಾಯಿ ಭಾಗ್ಯಶ್ರೀ ಪಟ್ಟು ಹಿಡಿದರು. ಈ ವೇಳೆ ಗಾಬರಿಗೊಂಡ ಮಲ್ಲಿಕಾರ್ಜುನ ಅವನು ಓಡಿ ಹೋಗಿದ್ದಾನೆ ಎಂದು ತಿಳಿಸಿದ್ದ. ಇದರಿಂದ ಅನುಮಾನ ಮೂಡಿ ಪತ್ನಿ, ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮಲ್ಲಿಕಾರ್ಜುನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತನ್ನ ಹೀನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಬೆಂಗಳೂರಿನಲ್ಲಿ ಘೋರ ಘಟನೆ; 14 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ!
ಮಾರ್ಚ್ 16 ರಂದು ಮಹಾರಾಷ್ಟ್ರದ ಕರಾಡ್‌ನ ಮಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಬಾಲಕನ ಶವವೊಂದು ಪತ್ತೆಯಾಗಿತ್ತು. ಇದೇ ವೇಳೆ ಮಲ್ಲಿಕಾರ್ಜುನ ನೀಡಿದ ಹೇಳಿಕೆಗಳನ್ನು ನೋಡಿದಾಗ, ಅದು ಸಿದ್ದಾರ್ಥನ ಶವ ಎಂದು ದೃಢಪಟ್ಟಿತ್ತು. ಹೀಗಾಗಿ ಆರೋಪಿ ಮಲ್ಲಿಕಾರ್ಜುನ ಅರಕೇರಿಯನ್ನು ಪೊಲೀಸರು ಬಂಧಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.