ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka budget 2025: ರಾಜ್ಯ ಅರ್ಥಿಕತೆ ಸದೃಢ; ವಿತ್ತೀಯ ಶಿಸ್ತು ಪಾಲಿಸಿದ್ದೇವೆ ಎಂದ ಸಿಎಂ

Karnataka budget 2025: ಕೇಂದ್ರ ಸರ್ಕಾರ ಈ ವರ್ಷ 50 ಲಕ್ಷ ಕೋಟಿ ಗಾತ್ರದ ಬಜೆಟ್‌ನಲ್ಲಿ 15.66 ಲಕ್ಷ ಕೋಟಿ ಸಾಲ ಮಾಡಿದೆ. ಅವರು ಶೇ.56 ಸಾಲ ತೆಗೆದುಕೊಂಡಿದ್ದಾರೆ. ನಾವು ವಿತ್ತೀಯ ಶಿಸ್ತು ಪಾಲಿಸಿದ್ದೇವೆ. ಗ್ಯಾರಂಟಿಗಳನ್ನು ಜಾರಿ ಮಾಡಿದಾಗ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದರು. ಆದರೆ, ರಾಜ್ಯ ದಿವಾಳಿಯಾಗಿದೆಯಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವಿತ್ತೀಯ ಶಿಸ್ತು ಪಾಲನೆ ಮಾಡಿದ್ದೇವೆ ಎಂದ ಸಿಎಂ ಸಿದ್ದರಾಮಯ್ಯ

Profile Prabhakara R Mar 7, 2025 5:59 PM

ಬೆಂಗಳೂರು: 2025-26ನೇ ಸಾಲಿನ ರಾಜ್ಯ ಬಜೆಟ್‌ (Karnataka budget 2025) ಅನ್ನು ಇಂದು ಮಂಡಿಸಿದ್ದೇನೆ. ಇದು ಪೂರ್ಣ ಬಜೆಟ್‌ ಆಗಿದ್ದು, 2024-25ನೇ ಸಾಲಿನಲ್ಲಿ 3.71 ಲಕ್ಷ ಕೋಟಿ ಗಾತ್ರ ಬಜೆಟ್‌ ಮಂಡಿಸಿದ್ದೆ. ಈ ಬಾರಿ 4,09,549 ಕೋಟಿ ಗಾತ್ರ ಬಜೆಟ್‌ ಮಂಡಿಸಿದ್ದೇವೆ. ಕಳೆದ ಬಾರಿಗಿಂತ ಈ ವರ್ಷ 38,166 ಕೋಟಿ (ಶೇ.10.3) ಬೆಳವಣಿಗೆ ಆಗಿದೆ. ನಾವು ವಿತ್ತೀಯ ಶಿಸ್ತು ಪಾಲನೆ ಮಾಡಿದ್ದು, ಜತೆಗೆ ಬಡವರು, ಮಹಿಳೆಯರು, ಕಾರ್ಮಿಕರು, ರೈತರು, ಎಸ್‌ಸಿ-ಎಸ್‌ಟಿ, ಅಲ್ಪಸಂಖ್ಯಾತರಿಗೆ ಆರ್ಥಿಕ ಶಕ್ತಿ ನೀಡಲು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬಜೆಟ್‌ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ವ ಸ್ವೀಕೃತಿಗಳು ಕಳೆದ ವರ್ಷ 2,63,178 ಕೋಟಿ, ಈ ವರ್ಷ 2,98,477 ಕೋಟಿ ಇದೆ. ಅಂದರೆ 29,299 ಕೋಟಿ ಹೆಚ್ಚಾಗಿದೆ. ಇದರಲ್ಲಿ ಬೆಳವಣಿಗೆ ದರ (ಶೇ.11.1) ಇದೆ. ರಾಜಸ್ವ ವೆಚ್ಚ 2,90,531 ಕೋಟಿ ಇದ್ದು, ಮುಂದಿನ ಆರ್ಥಿಕ ವರ್ಷಕ್ಕೆ 3,11,739 ಕೋಟಿ ಇರಲಿದೆ. ರಾಜಸ್ವ ವೆಚ್ಚದ ಬೆಳವಣಿಗೆ ದರ (ಶೇ.7.3) ಇದೆ ಎಂದರು.

ಕಳೆದ ವರ್ಷ ಸಾಲ 1,05,246 ಕೋಟಿ ಮಾಡಿದ್ದು, ಈ ವರ್ಷ 1,16,000 ಕೋಟಿ ಸಾಲ ಮಾಡಿದ್ದೇವೆ. (10,000 ಕೋಟಿ ಹೆಚ್ಚು). ವಿಪಕ್ಷಗಳು ಹೆಚ್ಚು ಸಾಲ ಮಾಡಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ಆದರೆ, ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ ಪ್ರಕಾರ ಒಂದು ರಾಜ್ಯದ ಜಿಎಸ್‌ಡಿಪಿಯ ಶೇ.25ರೊಳಗೆ ಸಾಲದ ಪ್ರಮಾಣ ಇರಬೇಕು. ನಾವು ಶೇ.24.91 ಸಾಲ ಮಾಡಿದ್ದೇವೆ. ಇನ್ನು ವಿತ್ತೀಯ ಕೊರತೆ ಶೇ.3 ಮೀರಬಾರದು. ಆದರೆ, ನಮ್ಮ ಬಜೆಟ್‌ನಲ್ಲಿ ಶೇ.2.9 ವಿತ್ತೀಯ ಕೊರತೆ ಇದೆ. ಅಶೋಕ್‌ ಅವರಿಗೆ ಈ ಬಗ್ಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ಎಂದು ಟೀಕಿಸಿದರು.



ನಮ್ಮದು ರೆವೆನ್ಯೂ ಸರ್‌ಪ್ಲಸ್‌ ಕಳೆದ ಬಾರಿ 27 ಸಾವಿರ ಕೋಟಿ ಇತ್ತು. ಮುಂದಿನ ವರ್ಷಕ್ಕೆ 19,262 ಕೋಟಿ ಅಂದಾಜು ಮಾಡಿದ್ದೇವೆ. ಈಗ ಆದಾಯ ಕೊರತೆಯಲ್ಲಿದ್ದು (ರೆವೆನ್ಯೂ ಡೆಫಿಸಿಟ್)‌ ಮುಂದಿನ ವರ್ಷಕ್ಕೆ ರೆವೆನ್ಯೂ ಸರ್‌ಪ್ಲಸ್‌ಗೆ (ವೆಚ್ಚಕ್ಕಿಂತ ಆದಾಯ ಹೆಚ್ಚಳ) ಬರುತ್ತೇವೆ. ನಮ್ಮದು ಕೇಂದ್ರಕ್ಕಿಂತ ಕಡಿಮೆ ವಿತ್ತೀಯ ಕೊರತೆ ಇದೆ. ಕೇಂದ್ರದ್ದು ಸಾಲದ ಪ್ರಮಾಣ ಶೇ.56 ಇದೆ. ಯಾಕೆ ಇಷ್ಟ ಸಾಲ ಜಾಸ್ತಿಯಾಗಿತು ಎಂದು ಬಿಜೆಪಿ ನಾಯಕರು ನಿರ್ಮಲಾ ಸೀತಾರಾಮನ್‌ ಅವರನ್ನು ಕೇಳಬೇಕು.

ಈಗ ನಮ್ಮದ್ದು ರಾಜಸ್ವ ಕೊರತೆ ಕಡಿಮೆಯಾಗಿದೆ. ಕಳೆದ ವರ್ಷ ಶೇ. 0.96 ಇತ್ತು. ಮುಂದಿನ ವರ್ಷ 0.63 ಆಗಲಿದೆ. ಕರ್ನಾಟಕದ ಜಿಎಸ್‌ಡಿಪಿ 28,61,929 ಕೋಟಿ ಇತ್ತು, ಈ ವರ್ಷ 30,70,103 ಆಗಿದೆ. ಆದ್ದರಿಂದ ನಾವು ವಿತ್ತೀಯ ಶಿಸ್ತು ಪಾಲನೆ ಮಾಡಿದ್ದೇವೆ. ಜತೆಗೆ ಬಡವರು, ಮಹಿಳೆಯರು, ಕಾರ್ಮಿಕರು, ರೈತರು, ಎಸ್‌ಸಿ-ಎಸ್‌ಟಿ, ಅಲ್ಪಸಂಖ್ಯಾತರಿಗೆ ಆರ್ಥಿಕ ಶಕ್ತಿ ನೀಡಲು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದರು.

ಕೇಂದ್ರ ಸರ್ಕಾರ ಈ ವರ್ಷ 50 ಲಕ್ಷ ಕೋಟಿ ಗಾತ್ರದ ಬಜೆಟ್‌ನಲ್ಲಿ 15.66 ಲಕ್ಷ ಕೋಟಿ ಸಾಲ ಮಾಡಿದೆ. ಅವರು ಶೇ.56 ಸಾಲ ತೆಗೆದುಕೊಂಡಿದ್ದಾರೆ. ನಾವು ವಿತ್ತೀಯ ಶಿಸ್ತು ಪಾಲಿಸಿದ್ದೇವೆ. ಗ್ಯಾರಂಟಿಗಳನ್ನು ಜಾರಿ ಮಾಡಿದಾಗ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದರು. ಆದರೆ, ರಾಜ್ಯ ದಿವಾಳಿಯಾಗಿದೆಯಾ? ನಾವು ಆರ್ಥಿಕವಾಗಿ ಸದೃಢವಾಗಿ ಇದ್ದೇವೆ.

ಈ ಸುದ್ದಿಯನ್ನೂ ಓದಿ | Karnataka Budget 2025: ಉದ್ಯೋಗಾಕಾಂಕ್ಷಿಗಳಿಗೆ ಸಿದ್ದರಾಮಯ್ಯ ಬಜೆಟ್‌ನಲ್ಲಿ ಸಿಕ್ಕಿದ್ದೇನು?

ನಾವು ಬಜೆಟ್‌ನಲ್ಲಿ ಏನು ಹೇಳಿದ್ದೆವೋ ಆ ಎಲ್ಲ ಭರವಸೆಗಳನ್ನು ಈಡೇರಿಸಿದ್ದು, ನುಡಿದಂತೆ ನಡೆದಿದ್ದೇವೆ. ಜತೆಗೆ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡಿದ್ದೇವೆ. ಗ್ಯಾರಂಟಿಗಳಿಗೆ ಕಳೆದ ವರ್ಷ 52,009 ಕೋಟಿ ಮೀಸಲಿಟ್ಟಿದ್ದೆವು. ಈ ಬಾರಿ 51,034 ಕೋಟಿ ಮೀಸಲಿಟ್ಟಿದ್ದೇವೆ ಎಂದು ತಿಳಿಸಿದರು. ಎಲ್ಲ ಇಲಾಖೆಗಳಿಗೂ ಕೂಡ ಈ ಬಾರಿ ಹೆಚ್ಚು ಅನುದಾನ ಕೊಟ್ಟಿದ್ದೇವೆ, ಹೀಗಾಗಿ ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಹಣ ಇದೆ. ಬಿಜೆಪಿಗರು ಹೇಳುತ್ತಿರುವುದು ಸುಳ್ಳು ಎಂದು ತಿಳಿಸಿದರು.