KSRTC Bus: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಏನೆಲ್ಲಾ ಸಾಗಿಸಬಹುದು?; ಹೊಸ ಲಗೇಜ್ ರೂಲ್ಸ್ ಜಾರಿ
KSRTC Bus: ಗರಿಷ್ಠ 30 ಕೆಜಿ ಮೇಲೆ ಲಗೇಜ್ ಇದ್ದರೆ ಕಡ್ಡಾಯವಾಗಿ ಹಣ ಪಾವತಿ ಮಾಡಬೇಕಾಗುತ್ತದೆ. ನಾಯಿಯನ್ನು ಚೈನಿನಲ್ಲಿ ಬಿಗಿದು ಕಾಳಜಿಯೊಂದಿಗೆ ಬಸ್ಸಿನಲ್ಲಿ ಸಾಗಿಸಬಹುದು. ವಯಸ್ಕರು 30 ಕೆಜಿ, ಮಕ್ಕಳು 15 ಕೆಜಿ ತೂಕದ ಲಗೇಜ್ ಅನ್ನು ಬಸ್‌ನಲ್ಲಿ ಕೊಂಡೊಯ್ಯಬಹುದು.


ಬೆಂಗಳೂರು: ಇನ್ನುಮುಂದೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (KSRTC Bus) ಸಾಕು ಪ್ರಾಣಿ, ಪಕ್ಷಿ, ಫ್ರಿಡ್ಜ್, ವಾಷಿಂಗ್ ಮಷಿನ್ ಸೇರಿ ವಿವಿಧ ವಸ್ತುಗಳನ್ನು ಸಾಗಿಸಬಹುದಾಗಿದೆ. ಕೆಎಸ್‌ಆರ್‌ಟಿಸಿ ಲಗೇಜ್ ಹಾಗೂ ಸರಕು ಸಾಗಣೆಗೆ ಸಂಬಂಧಿಸಿ ತನ್ನ ನಿಯಮಗಳಲ್ಲಿ ಮತ್ತಷ್ಟು ಬದಲಾವಣೆ ಮಾಡಿದ್ದು, ಲಗೇಜ್ ಸಾಗಿಸಲು ಹೊಸ ದರಪಟ್ಟಿಯನ್ನು (Luggage charges) ಪ್ರಕಟಿಸಿದೆ. ಒಂದು ವೇಳೆ ಲಗೇಜ್ ಚೀಟಿ ಪಡೆಯದಿದ್ದಲ್ಲಿ ನಿರ್ದಿಷ್ಟ ಲಗೇಜ್‌ನ ದರದ ಎರಡು ಪಟ್ಟು ದಂಡವನ್ನು ಪ್ರಯಾಣಿಕರಿಗೆ ವಿಧಿಸಲು ಸೂಚಿಸಲಾಗಿದೆ.
ಗರಿಷ್ಠ 30 ಕೆಜಿ ಮೇಲೆ ಲಗೇಜ್ ಇದ್ದರೆ ಕಡ್ಡಾಯವಾಗಿ ಹಣ ಪಾವತಿ ಮಾಡಬೇಕಾಗುತ್ತದೆ. ನಾಯಿಯನ್ನು ಚೈನಿನಲ್ಲಿ ಬಿಗಿದು ಕಾಳಜಿಯೊಂದಿಗೆ ಬಸ್ಸಿನಲ್ಲಿ ಸಾಗಿಸಬಹುದು. ವಯಸ್ಕರು 30 ಕೆಜಿ, ಮಕ್ಕಳು 15 ಕೆಜಿ ತೂಕದ ಲಗೇಜ್ ಅನ್ನು ಬಸ್‌ನಲ್ಲಿ ಕೊಂಡೊಯ್ಯಬಹುದು.
ಪ್ರಯಾಣಿಕರು 4 ಅಥವಾ 5 ಜನರ ಗುಂಪಿನಲ್ಲಿ ಪ್ರಯಾಣಿಸುತ್ತಿದ್ದು, ಒಂದು ಬ್ಯಾಗ್ ಅಥವಾ ಬಂಡಲ್ ಲಗೇಜ್ ಕೊಂಡೊಯ್ಯುತ್ತಿದ್ದಲ್ಲಿ ಉಚಿತ ಸಾಗಣೆಯು ಒಬ್ಬ ಪ್ರಯಾಣಿಕರಿಗೆ ಮಾತ್ರ (30 ಕೆಜಿ) ಅನ್ವಯಿಸುತ್ತದೆ. ಒಬ್ಬರು ಮಾತ್ರ ಉಚಿತವಾಗಿ ಲಗೇಜ್ ಕೊಂಡೊಯ್ಯಬಹುದು. ಪ್ರಯಾಣಿಕರು ಲಗೇಜ್ ಅನ್ನು ಸರಿಯಾಗಿ ತೂಕ ಮಾಡಿಸಿಕೊಂಡು ಬರಬೇಕಾಗುತ್ತದೆ. ಯಂತ್ರದ ತೂಕವಿಲ್ಲದಿದ್ದರೆ ಅಂದಾಜು ತೂಕದ ಲಗೇಜ್ ಅನ್ನು ಪರಿಗಣಿಸಲಾಗುತ್ತದೆ.

ಏನೆಲ್ಲಾ ತೆಗೆದುಕೊಂಡು ಹೋಗಬಹುದು?
ಕೃಷಿ ಉತ್ಪನ್ನಗಳು, ಗೊಬ್ಬರ, ಮೋಟಾರ್, ರೇಷ್ಮೆ ಗೂಡು, ವಾಷಿಂಗ್ ಮಷಿನ್, ಫ್ರಿಡ್ಜ್, ಟ್ರಕ್ ಟಯರ್, ಸೈಕಲ್, ಅಲ್ಯೂಮಿನಿಯಂ ಪೈಪ್, ಪಾತ್ರೆ, ಕಬ್ಬಿಣದ ಪೈಪ್, ಬೆಕ್ಕು, ನಾಯಿ, ಕೋಳಿ ಸೇರಿ ಪಕ್ಷಿಗಳು, ಮೊಲ, ಕಂಪ್ಯೂಟರ್, ಟಿವಿ, ಫ್ಯಾನ್ ಸೇರಿ ವಿವಿಧ ವಸ್ತುಗಳನ್ನು ಸಾಗಿಸಬಹುದು.

ಲಗೇಜ್ ದರ ಎಷ್ಟು?
ಎಸಿ ಮತ್ತು ನಾನ್ ಎಸಿ ಬಸ್‌ಗಳಿಗೆ ಪ್ರತ್ಯೇಕ ದರವನ್ನು ನಿಗದಿ ಮಾಡಲಾಗಿದೆ. ನಾನ್ ಎಸಿ ಬಸ್ಸುಗಳಿಗೆ 1-5 ಹಂತದವರೆಗೆ 5 ರೂ. ದರ ನಿಗದಿ ಆಗಿದ್ದರೆ, ಎಸಿ ಬಸ್‌ಗಳಲ್ಲಿ 10 ರೂ. ದರವನ್ನು ನಿಗದಿ ಮಾಡಲಾಗಿದೆ. 51 ರಿಂದ 55 ಹಂತದವರೆಗಿನ ನಾನ್ ಎಸಿ ಬಸ್‌ಗಳಿಗೆ 44 ರೂ., ಎಸಿ ಬಸ್ಸುಗಳಿಗೆ 55 ರೂ. ದರವನ್ನು ನಿಗದಿ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ | Chicken rice for stray Dogs: ಬೆಂಗಳೂರಲ್ಲಿ ಬೀದಿನಾಯಿಗಳಿಗೆ ಚಿಕನ್ ರೈಸ್ ಭಾಗ್ಯ; ಆಕ್ಷೇಪ ಬೆನ್ನಲ್ಲೇ ಸ್ಪಷ್ಟನೆ ಕೊಟ್ಟ ಬಿಬಿಎಂಪಿ
ಸಾಕು ಪ್ರಾಣಿಗಳನ್ನು ಉಚಿತವಾಗಿ ಪ್ರಯಾಣಿಸಲು ಅನುಮತಿ ಇಲ್ಲ. ನಾಯಿಯನ್ನು ಒಬ್ಬ ವಯಸ್ಕ ಪ್ರಯಾಣಿಕರಂತೆ ಪರಿಗಣಿಸಿ ದರ ವಿಧಿಸಿದ್ದರೆ, ಮೊಲ, ನಾಯಿ ಮರಿ, ಬೆಕ್ಕು, ಪಂಜರದಲ್ಲಿರುವ ಪಕ್ಷಿಗೆ ಮಕ್ಕಳದ ದರವನ್ನು ವಿಧಿಸಲಾಗುತ್ತದೆ. ರೇಷ್ಮೆ ಗೂಡನ್ನು ಪ್ರತಿ 15 ಕೆಜಿಗೆ 1 ಯೂನಿಟ್‌ನಂತೆ ಪರಿಗಣಿಸಲಾಗುತ್ತದೆ.