ಯಾದಗಿರಿ: ಜಿಲ್ಲೆಯಾದ್ಯಂತ ಗುರುವಾರ ರಾತ್ರಿಯಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ (Yadgir Rains) ಹಳ್ಳ, ಕೊಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಇದರಿಂದ ಜನ ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕಿರು ಸೇತುವೆ ದಾಟಲು ಹೋಗಿ ಕಾರು ನೀರು ಪಾಲಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಹೆಬ್ಬಾಳ ಕೆ ಗ್ರಾಮದಲ್ಲಿ ನಡೆದಿದೆ.
ಅಮ್ಮಾಪುರ ಗ್ರಾಮಕ್ಕೆ ತೆರಳುತ್ತಿರುವಾಗ ಹೆಬ್ಬಾಳ ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ, ಚಾಲಕ ಕಾರು ದಾಟಿಸಲು ಹೋದಾಗ ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಚಾಲಕ ಸೇರಿ ಕಾರಿನಲ್ಲಿದ್ದ ಇಬ್ಬರು ಕಾರಿನಿಂದ ಜಿಗಿದು, ಈಜಿ ದಡ ಸೇರಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಸ್ಥಳೀಯರ ಸಹಕಾರದಿಂದ ಕಾರು ಮೇಲೆತ್ತುವ ಕಾರ್ಯ ನಡೆಯುತ್ತಿದೆ.
ಪ್ರತಿ ವರ್ಷ ಮಳೆ ಬಂದಾಗ ನಮ್ಮ ಗ್ರಾಮ ಸಂಪರ್ಕ ಕಳೆದುಕೊಳ್ಳುತ್ತದೆ. ಹಲವು ಬಾರಿ ಸೇತುವೆ ಮೇಲ್ದರ್ಜೆಗೇರಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಸದಾ ಬಿಸಿಲು ಕಾಣುತ್ತಿದ್ದ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸೂರ್ಯನ ದರ್ಶನವೇ ಇಲ್ಲಾ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಗಿರಿನಾಡು ಮಲೆನಾಡಂತಾಗಿದೆ.. ವರ್ಣನಾರ್ಭಟಕ್ಕೆ ಜನಜೀವನ ಸಂಕಷ್ಟಕ್ಕೀಡಾಗಿದೆ.
ಮಳೆಗೆ ಭೀಮಾ ನದಿ ತೀರದಲ್ಲಿ ಪ್ರವಾಹದ ಆತಂಕ!
ಯಾದಗಿರಿ: ಯಾದಗಿರಿ, ಕಲಬುರಗಿ ಹಾಗೂ ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಭೀಮಾ ನದಿ ತೀರದಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಭೀಮಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿ ಬಳಿಯ ಬ್ರೀಡ್ಜ್ ಕಂ ಬ್ಯಾರೇಜ್‌ನಿಂದ ಭೀಮಾ ನದಿಗೆ 3.65 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ನದಿ ತೀರದಲ್ಲಿರುವ ಅಪಾರ ಪ್ರಮಾಣದ ಬೆಳೆ ಸಂಪೂರ್ಣ ಜಲಾವೃತವಾಗಿದೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳ್ ಗ್ರಾಮದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ನದಿ ನೀರಿನಲ್ಲಿ ಜಲಾವೃತವಾಗಿದೆ. ಎಕರೆಗೆ 30-35 ಸಾವಿರ ಖರ್ಚು ಮಾಡಿ ರೈತರು ಭತ್ತ ಬೆಳೆದಿದ್ದರು. ಗೋಡಿಹಾಳ ಗ್ರಾಮವೊಂದರಲ್ಲೇ 200 ಕ್ಕೂ ಅಧಿಕ ಎಕರೆ ಬೆಳೆ ಜಲಾವೃತವಾಗಿದೆ. ಹತ್ತಿ, ತೊಗರಿ ಹಾಗೂ ಭತ್ತ ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ.
ಈ ಸುದ್ದಿಯನ್ನೂ ಓದಿ | Kalaburagi rains: ಪ್ರವಾಹಕ್ಕೆ ತತ್ತರಿಸಿದ ಗಾಣಗಾಪುರ; ಭಕ್ತರಿಗೆ ದರ್ಶನವಿಲ್ಲ, ಪೂಜೆ ಸ್ಥಗಿತ!
ಪ್ರವಾಹದ ನೀರಿನಿಂದ ಸಂಪೂರ್ಣ ಜಮೀನುಗಳು ನದಿಯಂತಾಗಿವೆ. ಜೊತೆಗೆ ರೈತರ ಜಮೀನಿನಲ್ಲಿ ಅಳವಡಿಸಿದ್ದ ಟಿಸಿ, ಐಪಿ ಸೆಟ್, ಪಂಪ್ ಸೆಟ್ ನೀರಿನಲ್ಲಿ ಮುಳುಗಡೆಯಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಸರ್ಕಾರ ಬೆಳೆ ಹಾನಿ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ, ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.