ಯಾದಗಿರಿ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೊ ಪ್ರಕರಣಕ್ಕೆ (Mallikarjun Mutya case) ಸಂಬಂಧಿಸಿ ಬಾಲಕಿಯನ್ನು ಗುರುತಿಸಬಹುದಾದ ಯಾವುದೇ ಮಾಹಿತಿಯನ್ನು ಮತ್ತು ಬಾಲಕಿಯ ಕುಟುಂಬ ಸದಸ್ಯರನ್ನು ಒಳಗೊಂಡ ಫೋಟೊ ಹಾಗೂ ಸಂಗ್ರಹಿಸಿ ಇಟ್ಟುಕೊಂಡ ವಿಡಿಯೊ ಕ್ಲಿಪಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಅಪಲೋಡ್ ಮಾಡುವುದಾಗಲಿ ಮತ್ತು ಬೇರೆಯವರಿಗೆ ಶೇರ್ ಮಾಡಿದ್ದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪೃಥ್ವಿಕ್ ಶಂಕರ್ ಅವರು ತಿಳಿಸಿದ್ದಾರೆ.
ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಬಾಲಕಿಯೊಂದಿಗೆ ಅನುಚಿತ ವರ್ತನೆ ಆರೋಪದಡಿ ಈಗಾಗಲೇ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:25/2026 ಕಲಂ 75(2), ಬಿ.ಎನ್.ಎಸ್ ಕಾಯ್ದೆ-2023 ಮತ್ತು ಕಲಂ 12 ಪೋಕ್ಸೊ ಆಕ್ಟ್-2012 ಪ್ರಕಾರ ಪ್ರಕರಣ ದಾಖಲಾಗಿ, ತನಿಖೆ ನಡೆಯುತ್ತಿದೆ. ಹೀಗಾಗಿ ಸಾರ್ವಜನಿಕರು ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಪೋಟೊ ಅಥವಾ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸೇರಿ ಇನ್ನಿತರೆ ಕಡೆಗಳಲ್ಲಿ ಹಂಚಿಕೊಂಡಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದಾರೆ.
ನ್ಯಾಯಾಲಯದಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲು
ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಜೆಎಂಸಿ ನ್ಯಾಯಾಲಯದಲ್ಲಿ ಸಂತ್ರಸ್ತ ಬಾಲಕಿಯು ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ. ಈ ಬೆಳವಣಿಗೆಯಿಂದಾಗಿ ಮಲ್ಲಿಕಾರ್ಜುನ ಮುತ್ಯಾ ಅವರ ಮುಂದಿನ ಭವಿಷ್ಯ ಬಾಲಕಿಯ ನೀಡಿರುವ ಅಧಿಕೃತ ಹೇಳಿಕೆಯ ಆಧಾರದ ಮೇಲೆಯೇ ನಿರ್ಧಾರವಾಗುವ ಸಾಧ್ಯತೆಯಿದೆ.
ಒಂದೆಡೆ ಕಾನೂನು ಪ್ರಕ್ರಿಯೆಗಳು ಬಿರುಸಿನಿಂದ ಸಾಗುತ್ತಿದ್ದರೆ, ಇನ್ನೊಂದೆಡೆ ಮುತ್ಯಾ ಅವರ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಲ್ಲಿಕಾರ್ಜುನ ಮುತ್ಯಾ ಅವರ ಮೇಲಿನ ಪೋಕ್ಸೊ ಪ್ರಕರಣವನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿ ಭಕ್ತ ಸಮೂಹವು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದೆ.
ಜ್ಯೋತಿಷಿ ಹೇಳಿದ ಭವಿಷ್ಯಕ್ಕೆ ಹೆದರಿ ಮದುವೆ ನಿಶ್ಚಯವಾಗಿದ್ದ ಟೆಕ್ಕಿ ಯುವತಿ ಆತ್ಮಹತ್ಯೆ!
ನಿಯಮಗಳ ಪ್ರಕಾರ, ಬಾಲಕಿ ನೀಡಿರುವ ಈ ಹೇಳಿಕೆಯ ದಾಖಲೆ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗೆ ಹಸ್ತಾಂತರಿಸಲಾಗುತ್ತದೆ. ಕಾನೂನಿನ ದೃಷ್ಟಿಯಲ್ಲಿ ಸಂತ್ರಸ್ತೆಯ ಹೇಳಿಕೆ ಅತ್ಯಂತ ಪ್ರಮುಖವಾದ್ದರಿಂದ, ಮಲ್ಲಿಕಾರ್ಜುನ ಮುತ್ಯಾ ಅವರ ಕಾನೂನು ಹೋರಾಟ ಮತ್ತು ಭವಿಷ್ಯ ಬಾಲಕಿಯ ಹೇಳಿಕೆಯ ಮೇಲೆಯೇ ನಿಂತಿದೆ ಎಂದು ಹೇಳಲಾಗುತ್ತಿದೆ.