ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜ್ಯೋತಿಷಿ ಹೇಳಿದ ಭವಿಷ್ಯಕ್ಕೆ ಹೆದರಿ ಮದುವೆ ನಿಶ್ಚಯವಾಗಿದ್ದ ಟೆಕ್ಕಿ ಯುವತಿ ಆತ್ಮಹತ್ಯೆ!

Bengaluru News: ಬೆಂಗಳೂರು ಹೊರವಲಯದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಂಇಐ ಲೇಔಟ್‌ನಲ್ಲಿ ಘಟನೆ ನಡೆದಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿಯು ಜ್ಯೋತಿಷಿ ಹೇಳಿದ್ದ ಭವಿಷ್ಯದಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಜ್ಯೋತಿಷಿ ಭವಿಷ್ಯಕ್ಕೆ ಹೆದರಿ ಟೆಕ್ಕಿ ಯುವತಿ ಆತ್ಮಹತ್ಯೆ!

ಆತ್ಮಹತ್ಯೆ ಮಾಡಿಕೊಂಡ ಯುವತಿ. -

Prabhakara R
Prabhakara R Feb 28, 2026 2:52 PM

ಬೆಂಗಳೂರು: ಇಷ್ಟಪಟ್ಟ ಹುಡುಗನ ಜತೆ ಇನ್ನೇನು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವತಿಯೊಬ್ಬರು ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆ ನಗರದ (Bengaluru News) ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಂಇಐ ಲೇಔಟ್‌ನಲ್ಲಿ ನಡೆದಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಹಾಗೂ ಮನೆಯಿಂದಲೇ ಕೆಲಸ ಮಾಡುತ್ತಿದ್ದ ವಿದ್ಯಾಜ್ಯೋತಿ (29) ಮೃತಪಟ್ಟ ದುರ್ದೈವಿ.

ಮೃತ ವಿದ್ಯಾಜ್ಯೋತಿ ಕೊಡಗು ಮೂಲದ ಯುವಕನನ್ನ ಪ್ರೀತಿಸುತ್ತಿದ್ದಳು. ಆಕೆಯ ಇಷ್ಟದಂತೆ ಎರಡೂ ಕಡೆಯ ಕುಟುಂಬದವರು ಒಪ್ಪಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಜ್ಯೋತಿಷಿಯೊಬ್ಬರು ವಿದ್ಯಾಜ್ಯೋತಿಗೆ 'ನೀನು ಅಲ್ಪಾಯುಷಿ' ಎಂದು ಭವಿಷ್ಯ ನುಡಿದಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ನೊಂದು, ಹೆದರಿದ ಆಕೆ ಈ ಕಠಿಣ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.

ವಿದ್ಯಾಜ್ಯೋತಿ ಅಲ್ಪಾಯುಷಿ ಎಂದು ಹೇಳಿದ್ದ ಜ್ಯೋತಿಷಿ, ದೋಷ ಪರಿಹಾರಕ್ಕಾಗಿ 9 ದಿನಗಳ ಕಾಲ ಪೂಜೆ ಮಾಡುವಂತೆ ಸೂಚಿಸಿದ್ದರು. ಜತೆಗೆ 9ನೇ ದಿನ ಮಾರಮ್ಮ ದೇವರಿಗೆ ತಾಳಿ ಒಪ್ಪಿಸುವಂತೆ ತಿಳಿಸಿದ್ದರು. ಇದರಂತೆ ಕುಟುಂಬಸ್ಥರು ದೇವರಿಗೆ ತಾಳಿ ಕೊಡಲು ಸಿದ್ಧತೆ ನಡೆಸಿದ್ದರು.

ಮಧ್ಯಾಹ್ನದ ಊಟದ ನಂತರ ವಿದ್ಯಾಜ್ಯೋತಿ ತನ್ನ ರೂಮ್‌ಗೆ ಹೋಗಿದ್ದಳು. ಆಕೆ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಕಾರಣ, ಕೆಲಸ ಮಾಡುತ್ತಿರಬಹುದೆಂದು ಮನೆಯವರು ಭಾವಿಸಿದ್ದರು. ಆದರೆ ಸಂಜೆ ತಾಯಿ ಕರೆದರೂ ಆಕೆ ಹೊರಬಂದಿರಲಿಲ್ಲ. ರಾತ್ರಿ 8ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೋಗಬೇಕಿದ್ದ ಕಾರಣ ತಾಯಿ ಮತ್ತೆ ಮಗಳನ್ನು ಕರೆದಿದ್ದಾರೆ. ಎಷ್ಟು ಬಾಗಿಲು ತಟ್ಟಿದರೂ ತೆಗೆಯದಿದ್ದಾಗ, ಅನುಮಾನಗೊಂಡು ಕಿಟಕಿಯ ಮೂಲಕ ನೋಡಿದ್ದಾರೆ. ಈ ವೇಳೆ ಆಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

Heart Attack: ಪರೀಕ್ಷೆಗೆ ಮುನ್ನವೇ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಘಟನೆ ಕುರಿತು ಮಾಹಿತಿ ತಿಳಿದ ಕೂಡಲೇ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರಿನ ಮನೆಯೊಳಗೆ ವ್ಯಕ್ತಿಯ ಕೊಳೆತ ಶವ ಪತ್ತೆ

ಬೆಂಗಳೂರು: ನೆಲಮಂಗಲದ (Nelamangala) ಮನೆಯೊಂದರಲ್ಲಿ ವ್ಯಕ್ತಿಯ ಗುರುತು ಸಿಗದಂತೆ ಪಾತಕಿಗಳು ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ. ನೆಲಮಂಗಲದ ವಿಜಯಲಕ್ಷ್ಮೀ ಬಡಾವಣೆಯ ಮನೆಯೊಂದರಲ್ಲಿ ವ್ಯಕ್ತಿಯ ಕೊಳೆತ ಶವ ಪತ್ತೆಯಾಗಿದೆ.

ನಾಗರಾಜ್ ಎಂಬವರಿಗೆ ಸೇರಿದ ಮನೆಯಲ್ಲಿ ಶವ ಪತ್ತೆಯಾಗಿದೆ. 4 ದಿನದ ಹಿಂದೆ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಮನೆಗೆ ಬೀಗ ಹಾಕಲಾಗಿತ್ತು ಹಾಗೂ ಸುತ್ತಮುತ್ತ ಕೆಟ್ಟ ವಾಸನೆ ಬರುತ್ತಿತ್ತು. ಮನೆ ಮಾಲೀಕ ನಾಗರಾಜ್‌ಗೆ ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಬಂದಿದ್ದು, ಈ ವೇಳೆ ಗುರುತು ಸಿಗದ ಬೆತ್ತಲೆ ಕೊಳೆತ ಮೃತದೇಹ ಕಂಡು ಶಾಕ್ ಆಗಿದ್ದಾರೆ.

2 ತಿಂಗಳ ಹಿಂದೆ ಮೋಹನ್ ಕೃಷ್ಣ-ಊರ್ವಶಿ ಎಂಬವರಿಗೆ ನಾಗರಾಜ್ ಮನೆ ಬಾಡಿಗೆ ನೀಡಿದ್ದರು. ಕೊಲೆಯಾಗಿದ್ದು ಮೋಹನ್ ಕೃಷ್ಣನಾ ಅಥವಾ ಬೇರೆ ವ್ಯಕ್ತಿಯಾ ಎಂಬ ಅನುಮಾನ ಮೂಡಿದೆ. ಮೋಹನ್ ಜೊತೆಗಿದ್ದ ಊರ್ವಶಿ ಈವರೆಗೂ ಪತ್ತೆ ಆಗಿಲ್ಲ. ಕೊಲೆ ಮಾಡಿದ ಬಳಿಕ ಪಾಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಅಕ್ರಮ ಸಂಬಂಧದಿಂದಾಗಿ ಹತ್ಯೆಯಾಗಿದೆ ಎಂದು ಶಂಕಿಸಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.