ಯಾದಗಿರಿ: ಇನ್ಸ್‌ಪೆಕ್ಟರ್ ಒಬ್ಬರು ಒಂದು ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಗುರುಮಠಕಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೀರಣ್ಣ (Lokayukta) ದೊಡ್ಡಮನಿ ಕ್ರಿಮಿನಲ್ ಪ್ರಕರಣವೊಂದರ ಆರೋಪಿಗಳನ್ನು ಬಂಧಿಸದಿರಲು ಮತ್ತು ಪ್ರಕರಣದಿಂದ ಕೈಬಿಡಲು ಹಣಕ್ಕೆ ಬೇಡಿಕೆಯಿಟ್ಟಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಗುರುಮಠಕಲ್ ತಾಲೂಕಿನ ಗೋಪಾಳಪುರ ಗ್ರಾಮದ ಆನಂದ್ (Yadagiri) ಎಂಬುವವರ ವಿರುದ್ಧ ಜಾತಿ ನಿಂದನೆ ಪ್ರಕರಣವೊಂದು ದಾಖಲಾಗಿತ್ತು.
ಈ ಕೇಸ್‌ನಲ್ಲಿ ಅವರನ್ನು ಬಂಧಿಸದೆ ಇರಲು ಮತ್ತು ಇನ್ನೊಂದು ಕೇಸ್‌ನಲ್ಲಿ ಅವರ ಹೆಸರನ್ನು ಕೈಬಿಡಲು ಪಿಐ ವೀರಣ್ಣ ದೊಡ್ಡಮನಿ ಅವರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆನಂದ್ ದೂರು ನೀಡಿದ್ದಾರೆ. ಈ ಎರಡು ಪ್ರಕರಣಗಳ ಇತ್ಯರ್ಥಕ್ಕಾಗಿ ಒಟ್ಟು ಒಂದು ಲಕ್ಷ ರೂಪಾಯಿ ಹಣವನ್ನು ಪಡೆಯುವ ಒಪ್ಪಂದವಾಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಬಳಿಕ ಗುರುಮಠಕಲ್‌ನ ಪೊಲೀಸ್ ವಸತಿ ಗೃಹದಲ್ಲಿ ಆನಂದ್ ಅವರಿಂದ ಒಂದು ಲಕ್ಷ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿದ್ದಾರೆ.
ಯಾದಗಿರಿ ಲೋಕಾಯುಕ್ತ ಡಿವೈಎಸ್‌ಪಿ ಜಾಕೀರ್ ಇನಾಂದಾರ್ ಅವರ ನೇತೃತ್ವದ ತಂಡವು ಈ ಕಾರ್ಯಾಚರಣೆಯನ್ನು ಅತ್ಯಂತ ಗೌಪ್ಯವಾಗಿ ರೂಪಿಸಿತ್ತು. ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿ ಅವರು ಆನಂದ್ ಅವರಿಗೆ ಹಣದೊಂದಿಗೆ ಗುರುಮಠಕಲ್‌ನಲ್ಲಿರುವ ಪೊಲೀಸ್ ವಸತಿ ಗೃಹಕ್ಕೆ ಬರುವಂತೆ ತಿಳಿಸಿದ್ದರು. ನಿಗದಿತ ಸಮಯದಂತೆ ಆನಂದ್ ಅಲ್ಲಿಗೆ ತಲುಪಿದರು. ಈ ವೇಳೆ ಅಕ್ಕಪಕ್ಕದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಾರುವೇಷದಲ್ಲಿ ನಿಗಾ ಇರಿಸಿದ್ದರು.
ಮೇಲ್ಜಾತಿಯ ಪೊಲೀಸ್ ಅಧಿಕಾರಿಗಳಿಂದ ಕಿರುಕುಳ; ದಲಿತ ಇನ್ಸ್‌ಪೆಕ್ಟರ್ ಆರೋಪ, ವಿಡಿಯೊ ವೈರಲ್
ಆನಂದ್ ಅವರು ಇನ್ಸ್‌ಪೆಕ್ಟರ್ ವೀರಣ್ಣ ಅವರಿಗೆ ಒಂದು ಲಕ್ಷ ರೂಪಾಯಿ ಹಣವನ್ನು ಹಸ್ತಾಂತರಿಸುತ್ತಿದ್ದಂತೆಯೇ, ಲೋಕಾಯುಕ್ತ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿತು. ಹಣ ಪಡೆಯುತ್ತಿದ್ದ ವೇಳೆ ಇನ್ಸ್‌ಪೆಕ್ಟರ್ ಅವರನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿದಿದ್ದಾರೆ. ಸದ್ಯ ಆರೋಪಿ ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿಯನ್ನು ವಶಕ್ಕೆ ಪಡೆಯಲಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.