ಪೋಕ್ಸೊ ಕೇಸ್ ವಿಚಾರಣೆಗೆ ಹಾಜರಾದ ಮಲ್ಲಿಕಾರ್ಜುನ ಮುತ್ಯಾ; 4 ಮೊಬೈಲ್‌ಗಳು ವಶಕ್ಕೆ
ಪೋಕ್ಸೊ ಪ್ರಕರಣದಲ್ಲಿ ವಿಚಾರಣೆಗಾಗಿ ಶಹಾಪುರ ಸಿಪಿಐ ಕಚೇರಿಗೆ ಮಲ್ಲಿಕಾರ್ಜುನ ಮುತ್ಯಾ ಗುರುವಾರ ಹಾಜರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುತ್ಯಾ ಅವರು, ವಿಚಾರಣೆ ಹಾಜರಾಗಿ ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮುಂದೆಯೂ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಮುತ್ಯಾ. -
ಯಾದಗಿರಿ: ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ (Mallikarjun Mutya) ವಿಚಾರಣೆಗೆ ಗುರುವಾರ ಹಾಜರಾಗಿದ್ದು, ಅವರು ಬಳಸುತ್ತಿದ್ದ 4 ಮೊಬೈಲ್ ಹಾಗೂ ಶ್ರೀಮಠದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುಧವಾರ ರಾತ್ರಿ ಶಹಾಪುರ ಸಿಪಿಐ ಕಚೇರಿಗೆ ಬಂದಿದ್ದ ಮುತ್ಯಾಗೆ ಗುರುವಾರ ವಿಚಾರಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದರು. ಅಂತೆಯೇ ಮಧ್ಯಾಹ್ನ ಹಾಜರಾದ ಅವರನ್ನು ತನಿಖಾಧಿಕಾರಿ, ಶಹಾಪುರ ಗ್ರಾಮೀಣ ಸಿಪಿಐ ಶರಣಗೌಡ ನ್ಯಾಮಣ್ಣನವರ್ ವಿಚಾರಣೆಗೊಳಪಡಿಸಿದರು.
ಅದಕ್ಕೂ ಮುನ್ನ ಮುತ್ಯಾ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ವಿಚಾರಣೆ ವೇಳೆ ಸಮಗ್ರ ಹೇಳಿಕೆ ಪಡೆಯಲಾಗಿದೆ. ಅಲ್ಲದೇ ಅಗತ್ಯವೆನಿಸಿದಲ್ಲಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಮತ್ತೊಮ್ಮೆ ವಿಚಾರಣೆ ನಡೆಸಿ ಪೂರ್ಣ ಪ್ರಮಾಣದ ವರದಿಯನ್ನು ನ್ಯಾಯಾಂಗಕ್ಕೆ ಸಲ್ಲಿಸಲಿದ್ದೇವೆ' ಎಂದು ತನಿಖಾಧಿಕಾರಿ ನ್ಯಾಮಣ್ಣನವರ್ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಮುತ್ಯಾ ಪ್ರಕರಣಕ್ಕೆ ಸಂಬಂಧಿಸಿದ ಪೋಟೊ, ವಿಡಿಯೊ ಹಂಚಿಕೊಂಡ್ರೆ ಕಾನೂನು ಕ್ರಮ: ಎಸ್‌ಪಿ ಪೃಥ್ವಿಕ್ ಶಂಕರ್
ವಿಚಾರಣೆ ಮುಗಿದ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಮುತ್ಯಾ, ಜಾತ್ರಾ ಮಹೋತ್ಸವ, ಸಾಮೂಹಿಕ ಮದುವೆ ಆಮಂತ್ರಣ ಕೊಡಲು ಬೇರೆ ಊರುಗಳಿಗೆ ತೆರಳಿದ್ದೆ. ಆ ಕಾರಣಕ್ಕೆ ವಿಡಿಯೊ ಮಾಡಿ ವಿಚಾರಣೆಗೆ ಹಾಜರಾಗುವ ಬಗ್ಗೆ ತಿಳಿಸಿದ್ದೆ. ಬಳಿಕ ಅನಾರೋಗ್ಯ ಕಾರಣ ಆಸ್ಪತ್ರೆಗೆ ತೆರಳಿದ್ದೆ. ಈಗ ವಿಚಾರಣೆ ಹಾಜರಾಗಿ ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮುಂದೆಯೂ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ. ಕಾನೂನಿಗೆ ತಲೆ ಬಾಗುತ್ತೇನೆ ಎಂದು ತಿಳಿಸಿದ್ದಾರೆ.