Bribery case: ಯಾದಗಿರಿ ಪಿಡಬ್ಲ್ಯುಡಿಯಲ್ಲಿ ಭಾರಿ ಭ್ರಷ್ಟಾಚಾರ; 17 ಲಕ್ಷ ಬಿಲ್ ಪಾವತಿಗೆ 4.80 ಲಕ್ಷ ಲಂಚ ಪಡೆದ ಅಧಿಕಾರಿಗಳು!
Bribery case: ಯಾದಗಿರಿ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಬಟಾಬಯಲಾಗಿದೆ. ಅಧಿಕಾರಿಗಳ ಲಂಚಾವತಾರದ ಆಡಿಯೋ ಲಭ್ಯವಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿ ಐದಾರು ಅಧಿಕಾರಿಗಳಿಂದ ಹಣ ವಸೂಲಿ ನಡೆದಿದೆ.


ಯಾದಗಿರಿ: ಯಾದಗಿರಿ ಲೋಕೋಪಯೋಗಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ (Bribery case) ಬೆಳಕಿಗೆ ಬಂದಿದ್ದು, ರಸ್ತೆ ಕಾಮಗಾರಿಯೊಂದರ ಬಾಕಿ ಹಣ ಬಿಡುಗಡೆ ಫೈಲ್‌ಗೆ ಸಹಿ ಮಾಡಲು ಅಧಿಕಾರಿಗಳು ಲಕ್ಷ ಲಕ್ಷ ಲಂಚ ಪಡೆದಿರುವ ಆರೋಪ ಕೇಳಿಬಂದಿದೆ. 17 ಲಕ್ಷ ರೂ. ಬಿಲ್ ಪಾವತಿಗೆ 4.80 ಲಕ್ಷ ರೂ.ಗಳನ್ನು ಅಧಿಕಾರಿಗಳು ಲಂಚವಾಗಿ ಪಡೆದಿದ್ದು, ಪಿಡಬ್ಲ್ಯುಡಿ ಅಧಿಕಾರಿಗಳ ಕಮಿಷನ್ ವಸೂಲಿ ದಂಧೆಯ ಕರಾಳ ಮುಖ ಬಿಚ್ಚಿಡುವ ಸ್ಫೋಟಕ ಆಡಿಯೋ ವೈರಲ್ ಆಗಿದೆ.
ಯಾದಗಿರಿಯ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಇಇ ಮಹಮ್ಮದ್ ಇಬ್ರಾಹಿಂ, ಎಇ ಸುನೀಲ್ ಕುಮಾರ್, ಎಇಇ ರಾಮು, ಅಕೌಂಟೆಂಟ್ ದತ್ತುರಾಜ್, ಎಒ ಶಿವರಾಜ್ ವಿರುದ್ಧ ಲಂಚ ಪಡೆದಿರುವ ಆರೋಪ ಕೇಳಿಬಂದಿದೆ.
ಎನ್‌ಎಚ್-150 ಯಾದಗಿರಿ ಬೈಪಾಸ್‌ನಿಂದ ಕಡೇಚೂರ್ ಗೇಟ್‌ವರೆಗಿನ ಸುಮಾರು 38 ಕಿ.ಲೋ ಮೀಟರ್ ಸಿಸಿ ರಸ್ತೆಯ ಕಾಮಗಾರಿಗೆ 185.51 ಕೋಟಿ ರೂ. ಗೆ ಡಿ.ಪಿ.ಜೈನ್ ಕಾಂಟ್ರಾಕ್ಟರ್‌ಗೆ ಟೆಂಡರ್ ಆಗಿತ್ತು. ಈ ಸಿಸಿ ರಸ್ತೆಯನ್ನು ಜೆ.ಆರ್.ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಕಾಮಗಾರಿ ನಡೆಸಿದ್ದರು. ಆದರೆ, ಸುಮಾರು 17.66 ಲಕ್ಷ ರೂ. ಕೊನೆಯ ಬಿಲ್ ಬಾಕಿ ಇತ್ತು. ಈ ಬಾಕಿ ಬಿಲ್ ಪಾವತಿಗೆ ಸುಮಾರು 4 ಲಕ್ಷ 80 ಸಾವಿರ ರೂ.ಗಳನ್ನು ಅಧಿಕಾರಿಗಳು ಲಂಚವಾಗಿ ಪಡೆದಿದ್ದಾರೆ ಎನ್ನಲಾಗಿದೆ.
ಒಬ್ಬೊಬ್ಬ ಅಧಿಕಾರಿ ಸಹಿ ಮಾಡಲು ಒಂದೊಂದು ರೇಟ್ ಪಿಕ್ಸ್ ಆಗಿದೆ. ಲಂಚ ಪಡೆದು ಬಾಕಿ ಬಿಲ್ ಹಣ ಬಿಡುಗಡೆ ಮಾಡಲು ಅಧಿಕಾರಿಗಳು ಸಹಿ ಮಾಡಿದ್ದಾರೆ. ಎಕ್ಸ್‌ಕ್ಯೂಟಿವ್ ಎಂಜಿನಿಯರ್ ಮಹ್ಮದ್ ಇಬ್ರಾಹೀಂ 1.90 ಲಕ್ಷ ರೂ, ಅಸಿಸ್ಟೆಂಟ್ ಎಂಜಿನಿಯರ್ ಸುನೀಲ್ ಕುಮಾರ್ 1.25 ಲಕ್ಷ ರೂ., ಎಇಇ ರಾಮು 1.20 ಲಕ್ಷ ರೂ. ಹಾಗೂ ಅಕೌಂಟೆಂಟ್ ದತ್ತರಾಜ್ 20 ಸಾವಿರ, ಎಒ ಶಿವರಾಜ್ 18 ಸಾವಿರ ರೂ. ಲಂಚ ಪಡೆದಿದ್ದಾರೆ ಎಂದು ಗುತ್ತಿಗೆದಾರ ಕುಬೇರಪ್ಪ ಆರೋಪಿಸಿದ್ದಾರೆ.
ಇನ್ನು ಅಧಿಕಾರಿಗಳದ್ದು ಎನ್ನಲಾದ ಆಡಿಯೋದಲ್ಲಿ, ಯಾವುದೇ ಮಾತಿಲ್ಲ, 2 ಲಕ್ಷ ರೂಪಾಯಿ ಕೊಡಬೇಕು. ಬೇಗ ಹಣ ಕೊಟ್ಟು ಈ ವರ್ಷದಲ್ಲಿ ವರ್ಕ್ ಕ್ಲೋಸ್ ಮಾಡಬೇಕು. ದುಡ್ಡು ಕೊಡಬೇಕು, ಪಟ್ ಪಟ್ ಅಂತ ಕೆಲಸ ಮುಗಿಸ್ಕೊಂಡು ಹೋಗಬೇಕು. ಏನ್ ಮಾಡ್ತಿಯೋ ಗೊತ್ತಿಲ್ಲ, ಫೈಲ್ ಜತೆ ಹಣ ಕೊಟ್ಟರೆ ಸೈನ್ ಎಂದು ಇಇ ಮಹ್ಮದ್ ಇಬ್ರಾಹೀಂ ಹೇಳಿದ್ದಾರೆ.
ದುಡ್ಡು ಕೊಡಬೇಕು, ಬಾಕಿ ಬಿಲ್ ಪೈಲ್ ಕ್ಲಿಯರ್ ಮಾಡ್ಕೊಬೇಕು. ಕ್ಯಾಷ್ ಮುಟ್ಟಲ್ಲ, ಕಾರ್ ಬೋರ್ಡ್‌ನಲ್ಲೇ ಹಣ ಇಟ್ಟು ಹೋಗಿ ಎಂದು ಎಇ ಸುನೀಲ್ ಕುಮಾರ್ ಹೇಳಿದ್ದಾರೆ.
ದುಡ್ಡು ಕೊಟ್ಟು ಕೆಲಸ ಮಾಡಿಸ್ಕೊಂಡು ಹೋಗು, ದುಡ್ಡು ತಗೊಂಡ್ ನಾವು ಕೆಲಸ ಮಾಡಲ್ವಾ? ನೀವು ಹೇಳಿದ ಹಾಗೆ ಮಾಡಕಾಗಲ್ಲಾ, ದುಡ್ಡು ಕೊಡಿ ಕೆಲಸ ಮಾಡಿಸ್ಕೊಳ್ಳಿ ಎಂದು ಎಇಇ ರಾಮು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Tushar Girinath: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವರ್ಗಾವಣೆ; ಹೊಸ ಆಯುಕ್ತ ನೇಮಕ
ಪೋನ್ ಪೇ ಇಲ್ಲ, ಕ್ಯಾಷ್ ತಗೊಂಡ್ ಬನ್ನಿ ಎಂದು ಅಕೌಂಟೆಂಟ್ ದತ್ತರಾಜ್ ಹೇಳಿದ್ದು, ಹಣ ಕೊಡದಿದ್ರೆ ಆಫೀಸ್‌ನಲ್ಲಿ ಕಾಲಿಡೋಕೆ ಬಿಡಲ್ಲ ಎಂದು ಕಲಬುರಗಿ ಕಚೇರಿ ಎಸ್‌ಡಿಎ ಶಿವಾನಂದ ಆವಾಜ್ ಹಾಕಿರುವುದು ಆಡಿಯೋದಲ್ಲಿದೆ.