ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kandeelu Movie: ʼಕಂದೀಲುʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ: ನಿರ್ದೇಶಕಿ ಯಶೋದ ಪ್ರಕಾಶ್‌

Kandeelu Movie: ಜನರನ್ನು ತಲುಪುವುದು ನಮ್ಮ ಉದ್ದೇಶವಾಗಿದೆ. ರಿಯಲಿಸ್ಟಿಕ್‌ ಕಥೆ ಆಧಾರಿತ ಚಿತ್ರಗಳನ್ನು ಮಾಡಬೇಕೆಂಬ ಬಯಕೆ ಇದೆ. ಇನ್ನೂ ಕಂದೀಲು ಸಿನಿಮಾ ರಿಲೀಸ್‌ ಮಾಡಿಲ್ಲ. ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿರುತ್ತದೆ ಎಂದು ನಿರ್ದೇಶಕಿ ಯಶೋದ ಪ್ರಕಾಶ್ ಕೊಟ್ಟುಕತ್ತೀರ ತಿಳಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ: ಕಂದೀಲು ಚಿತ್ರದ ನಿರ್ದೇಶಕಿ

Prabhakara R Prabhakara R Aug 1, 2025 9:27 PM

ಬೆಂಗಳೂರು: ಕಂದೀಲು ಚಿತ್ರಕ್ಕೆ (Kandeelu Movie) ರಾಷ್ಟ್ರ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಈ ಕ್ಷಣದಲ್ಲಿ ಏನು ಮಾತನಾಡಬೇಕೋ ಗೊತ್ತಾಗುತ್ತಿಲ್ಲ. ಕನಸು ನನಸಾದಂತೆ ಆಗಿದ್ದು, ತುಂಬಾ ಖುಷಿಯಾಗುತ್ತಿದೆ. ಜನರನ್ನು ತಲುಪುವುದು ನಮ್ಮ ಉದ್ದೇಶವಾಗಿದೆ. ರಿಯಲಿಸ್ಟಿಕ್‌ ಕಥೆ ಆಧಾರಿತ ಚಿತ್ರಗಳನ್ನು ಮಾಡಬೇಕೆಂಬ ಬಯಕೆ ಇದೆ. ಇನ್ನೂ ಕಂದೀಲು ಚಿತ್ರ ರಿಲೀಸ್‌ ಮಾಡಿಲ್ಲ ಎಂದು ನಿರ್ದೇಶಕಿ ಯಶೋದ ಪ್ರಕಾಶ್ ಕೊಟ್ಟುಕತ್ತೀರ (K Yashoda Prakash) ತಿಳಿಸಿದ್ದಾರೆ.

ಕನ್ನಡದ ಅತ್ಯುತ್ತಮ ಚಿತ್ರವಾಗಿ ʼಕಂದೀಲುʼಸಿನಿಮಾ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ ವಿಶ್ವವಾಣಿ ಜತೆ ಅವರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತದೆ ಎಂಬ ನಿರೀಕ್ಷೆ ಇತ್ತೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಸಿನಿಮಾ ಈ ಮೊದಲು ಕೋಲ್ಕತಾ ಚಲಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರಗಳಲ್ಲಿ ಎರಡನೇ ಸ್ಥಾನ ಪಡೆದಿತ್ತು. ನೋಡಿದವರೆಲ್ಲಾ ತುಂಬಾ ಚೆನ್ನಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ನನಗೇ ಪ್ರಶಸ್ತಿ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಒಂದೊಳ್ಳೆ ಚಿತ್ರ ಎಂದು ಅಪ್ಲೈ ಮಾಡಿದ್ದೆವು ಎಂದಿದ್ದಾರೆ.

ಚಿತ್ರ ಕಥೆ ಬಗ್ಗೆ ಮಾತನಾಡಿದ ಅವರು, ಸಿನಿಮಾದಲ್ಲಿ ಮುಖ್ಯವಾಗಿ ಜಮೀನು ಉಳಿಸಿಕೊಳ್ಳುವ ಕೆಳ ಮಧ್ಯಮ ವರ್ಗದ ಕುಟುಂಬದ ಅಪ್ಪನ ಪಾತ್ರವಿದೆ. ಜಮೀನಿನಲ್ಲಿ ತೋಟ ಮಾಡಲು ಮಗನನ್ನು ಅವರ ತಂದೆ ಸೌದಿಗೆ ಕಳುಹಿಸುತ್ತಾರೆ. ಆದರೆ ವಿದೇಶದಲ್ಲಿ ಮಗ ಸಾವನ್ನಪ್ಪುತ್ತಾನೆ. ಅಲ್ಲಿ ಚಿತ್ರದ ಕಥೆ ತಿರುವು ಪಡೆಯುತ್ತದೆ. ಊರಿನಲ್ಲಿ ಹಬ್ಬ ಇದ್ದ ಹಿನ್ನೆಲೆಯಲ್ಲಿ ಮೃತದೇಹವನ್ನು ತರಿಸಿ ಬೇಗ ಅಂತ್ಯ ಸಂಸ್ಕಾರ ಮಾಡಲು ಪಟ್ಟು ಹಿಡಿಯುತ್ತಾರೆ. ಹೀಗಾಗಿ ಮಗನ ಮೃತದೇಹ ತರಲು ತಂದೆ ಹಾಗೂ ಕುಟುಂಬಸ್ಥರು ಪಡುವ ಕಷ್ಟ ಚಿತ್ರದಲ್ಲಿ ತೋರಿಸಲಾಗಿದೆ.

ಜನರನ್ನು ತಲುಪುವುದು ನಮ್ಮ ಉದ್ದೇಶವಾಗಿದೆ. ರಿಯಲಿಸ್ಟಿಕ್‌ ಕಥೆ ಆಧಾರಿತ ಚಿತ್ರಗಳನ್ನು ಮಾಡಬೇಕೆಂಬ ಬಯಕೆ ಇದೆ. ಇನ್ನೂ ಕಂದೀಲು ಸಿನಿಮಾ ರಿಲೀಸ್‌ ಮಾಡಿಲ್ಲ. ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿರುತ್ತದೆ. ನಂತರ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.



ʼಕಂದೀಲುʼ 2023ರಲ್ಲಿ ನಿರ್ಮಿಸಿದ ಚಿತ್ರ. ಅದೇ ರೀತಿ 2024ರಲ್ಲಿ ಕೌಮುದಿ ಎಂಬ ಚಿತ್ರ ಮಾಡಲಾಗಿದೆ. ಇದರಲ್ಲಿ ಅಕ್ಷತಾ ಪಾಂಡವಪುರ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನೂ ವಿವಿಧ ಚಲನಚಿತ್ರೋತ್ಸವಗಳಿಗೆ ಕಳುಹಿಸಬೇಕಿದೆ.

ಈ ಸುದ್ದಿಯನ್ನೂ ಓದಿ | 71st National Film Awards 2025: 'ಕಂದೀಲು' ಅತ್ಯುತ್ತಮ ಕನ್ನಡ ಸಿನಿಮಾ; ಯಶೋದ ಪ್ರಕಾಶ್ ನಿರ್ದೇಶನದ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ

ಇನ್ನು ನಮ್ಮ ಸಿನಿಮಾಗೆ ಪ್ರಶಸ್ತಿ ಬಂದಿರುವುದಕ್ಕೆ ನಮ್ಮ ಚಿತ್ರತಂಡದ ಎಲ್ಲಾ ಸದಸ್ಯರ ಶ್ರಮವಿದೆ. ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಈ ಸಂತಸವನ್ನು ಅವರ ಜತೆ ಹಂಚಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.