Naxalites encounter: ಛತ್ತೀಸ್‌ಗಡದಲ್ಲಿ ಭದ್ರತಾ ಸಿಬ್ಬಂದಿಗಳ ಭರ್ಜರಿ ಬೇಟೆ ; 12 ನಕ್ಸಲರ ಎನ್‌ಕೌಂಟರ್
ಛತ್ತೀಸ್‌ಗಡದಲ್ಲಿ ಭದ್ರತಾ ಸಿಬ್ಬಂದಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ12 ನಕ್ಸಲರನ್ನು ಎನ್‌ಕೌಂಟರ್ ಮಾಡಲಾಗಿದ್ದು, ಅಪಾರ ಪ್ರಮಾಣದ ಮದ್ದು ಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರಿಯಲಿದ್ದು, ಹತನಾದವರ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಯ್ಪುರ: ಛತ್ತೀಸ್‌ಗಢದ (Chhattisgarh) ಗರಿಯಾಬಂದ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ 12 ನಕ್ಸಲರು (Naxalite) ಹತರಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ಮುಂಜಾನೆಯಿಂದಲೂ ಈ ಕಾರ್ಯಾಚರಣೆ ಆರಂಭಗೊಂಡಿದ್ದು, ನಿನ್ನೆ ಇಬ್ಬರು ಮಹಿಳಾ ನಕ್ಸಲೈಟ್‌ಗಳು ಹತರಾಗಿದ್ದರು. ಅಲ್ಲದೇ ಒಬ್ಬ ಕೋಬ್ರಾ ಜವಾನ ಗಾಯಗೊಂಡಿದ್ದರು. ಇದೀಗ ಇಂದು ಕೂಡ ಈ ಕಾರ್ಯಾಚರಣೆ ಮುಂದುವರಿದಿದ್ದು, ನಕ್ಸಲ್ ಮುಖಂಡ ಸೇರಿ ಒಟ್ಟು 12 ಮಂದಿಯನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಗಿದೆ.
ಛತ್ತೀಸ್‌ಗಢ-ಒಡಿಶಾ ಗಡಿಯಲ್ಲಿರುವ ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಮುಂಜಾನೆ ಹೊಸ ಗುಂಡಿನ ಚಕಮಕಿ ನಡೆದಿದ್ದು, 12 ಮಂದಿ ನಕ್ಸಲರು ಮೃತ ಪಟ್ಟಿದ್ದಾರೆ. ನಕ್ಸಲರ ವಿರುದ್ಧದ ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಛತ್ತೀಸ್‌ಗಢದ ಕೋಬ್ರಾ ಮತ್ತು ಒಡಿಶಾದ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಯ ಭದ್ರತಾ ಸಿಬ್ಬಂದಿಯ ಜಂಟಿ ತಂಡ ತೊಡಗಿದೆ.
ಪತ್ತೆಗಾಗಿ ಪೊಲೀಸರು 1ಕೋಟಿ ರೂ. ಘೋಷಿಸಿದ್ದ ನಕ್ಸಲ್ ಮುಖಂಡ ಕೂಡ ಹತ
ಇನ್ನು ಕಾರ್ಯಾಚರಣೆ ವೇಳೆ ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ಕೂಡ ಹತ್ಯೆಯಾಗಿದ್ದಾನೆ. ಮಾವೋವಾದಿಗಳ ಕೇಂದ್ರ ಸಮಿತಿ ಸದಸ್ಯ ಜಯರಾಮ್ ಅಲಿಯಾಸ್ ಚಲಪತಿ ಎಂಬಾತ ಭದ್ರತಾ ಸಿಬ್ಬಂದಿಯ ಗುಂಡೇಟು ತಗುಲಿ ಹತನಾಗಿದ್ದಾನೆ. ಈತನ ಪತ್ತೆಗಾಗಿ ಈ ಹಿಂದೆ ಪೊಲೀಸರು 1ಕೋಟಿ ರೂ. ಬಹುಮಾನ ಘೋಷಿಸಿದ್ದರು.
ಒಡಿಶಾದ ನುವಾಪಾದ ಜಿಲ್ಲೆಯ ಗಡಿಯಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಛತ್ತೀಸ್‌ಗಢದ ಕುಲಾರಿಘಾಟ್ ಮೀಸಲು ಅರಣ್ಯದಲ್ಲಿ ಮಾವೋವಾದಿಗಳು ಅವಿತಿರುವ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜನವರಿ 19ರ ರಾತ್ರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಎನ್‌ಕೌಂಟರ್ ಸ್ಥಳದಿಂದ ಸ್ವಯಂ-ಲೋಡಿಂಗ್ ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಐಇಡಿಗಳ ದೊಡ್ಡ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Chhattisgarh Horror: ಛತ್ತೀಸ್‌ಗಢದಲ್ಲಿ ಐಇಡಿ ಸ್ಫೋಟ; ಇಬ್ಬರು CRPF ಕೋಬ್ರಾ ಕಮಾಂಡೋಗಳಿಗೆ ಗಂಭೀರ ಗಾಯ
ಜನವರಿ 9 ರಂದು ನಡೆದ ಎನ್‌ಕೌಂಟರ್‌ನಲ್ಲಿ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರು ಬಲಿಯಾಗಿದ್ದರು. ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಕಾಡಿನಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲೈಟ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಎನ್‌ಕೌಂಟರ್ ನಡೆಯಿತು ಎಂದು ಪೊಲೀಸರು ತಿಳಿಸಿದ್ದರು. ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆ ಮತ್ತು ಕೋಬ್ರಾ(ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ - ಸಿಆರ್‌ಪಿಎಫ್‌ನ ಗಣ್ಯ ಘಟಕ)ಗೆ ಸೇರಿದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.