Chhattisgarh Horror: ಛತ್ತೀಸ್‌ಗಢದಲ್ಲಿ ಐಇಡಿ ಸ್ಫೋಟ; ಇಬ್ಬರು CRPF ಕೋಬ್ರಾ ಕಮಾಂಡೋಗಳಿಗೆ ಗಂಭೀರ ಗಾಯ
ಛತ್ತೀಸ್‌ಗಡದ ಬಿಜಾಪುರದಲ್ಲಿ ಐಇಡಿ ಸ್ಫೋಟಗೊಂಡ ಪರಿಣಾಮ ಇಬ್ಬರು ಸಿಆರ್‌ಪಿಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಯ್ಪುರ ಜ.16 2025: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ನಕ್ಸಲೀಯರು ಅಳವಡಿಸಿದ್ದ ಐಇಡಿ (IED) ಸ್ಫೋಟಗೊಂಡು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಜಂಗಲ್ ವಾರ್ಫೇರ್ ವಿಭಾಗವಾದ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಘಟಕದ ಇಬ್ಬರು ಕಮಾಂಡೋಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಯೋಧರಿಗೆ ಕಾಲು ಮತ್ತು ಕಣ್ಣಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿಸಿದು ಬಂದಿದೆ.
ಗುರುವಾರ ಮುಂಜಾನೆ ಸ್ಫೋಟ ಸಂಭವಿಸಿದಾಗ ಸಿಆರ್‌ಪಿಎಫ್‌ನ 229 ನೇ ಬೆಟಾಲಿಯನ್ ಮತ್ತು ಕೋಬ್ರಾದ 206 ನೇ ಬೆಟಾಲಿಯನ್‌ನ ಸಿಬ್ಬಂದಿ ಮಾವೋವಾದಿ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದರು. ಭದ್ರತಾ ಸಿಬ್ಬಂದಿ ಅದರ ಸಂಪರ್ಕಕ್ಕೆ ಬಂದಾಗ ಐಇಡಿ ಸ್ಫೋಟಗೊಂಡಿದೆ. ಗಾಯಗೊಂಡ ಕಮಾಂಡೋಗಳನ್ನು 206 ನೇ ಕೋಬ್ರಾ ಬೆಟಾಲಿಯನ್‌ನ ಮೃದುಲ್ ಬರ್ಮನ್ ಮತ್ತು ಮೊಹಮ್ಮದ್ ಇಶಾಕ್ ಎಂದು ಗುರುತಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ ಬಸಗುಡ ಸಿಆರ್‌ಪಿಎಫ್ ಶಿಬಿರಕ್ಕೆ ಕರೆದೊಯ್ಯಲಾಗಿದೆ. ನಂತರ ಅವರನ್ನು ಸುಧಾರಿತ ವೈದ್ಯಕೀಯ ಆರೈಕೆಗಾಗಿ ರಾಯ್‌ಪುರಕ್ಕೆ ಕಳುಹಿಸಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅಪಾಯದಿಂದ ಪಾರಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಇದೇ ರೀತಿಯ ದಾಳಿಗಳು ವರದಿಯಾಗಿದ್ದವು. ಜನವರಿ 12 ರಂದು ಬಿಜಾಪುರದಲ್ಲಿ ಇದೇ ರೀತಿ ಸ್ಫೋಟ ಸಂಭವಿಸಿತ್ತು. 12 ವರ್ಷದ ಬಾಲಕಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು. ಜನವರಿ 11 ರಂದು ಬಿಜಾಪುರದಲ್ಲಿ ನಡೆದ ಮತ್ತೊಂದು ಸ್ಫೋಟದಲ್ಲಿ CRPF ಯೋಧ ಗಾಯಗೊಂಡಿದ್ದರು. ಜನವರಿ 10 ರಂದು, ನಾರಾಯಣಪುರ ಜಿಲ್ಲೆಯ ಓರ್ಚಾ ಪ್ರದೇಶದಲ್ಲಿ ಎರಡು ಐಇಡಿ ಸ್ಫೋಟಗಳಲ್ಲಿ ಗ್ರಾಮಸ್ಥರೊಬ್ಬರು ಪ್ರಾಣ ಕಳೆದುಕೊಂಡರೆ ಮೂವರು ಗಾಯಗೊಂಡಿದ್ದರು.
ಪ್ರತಿಯಾಗಿ ಭದ್ರತಾಪಡೆಗಳು ಭಾನುವಾರ ಕಾರ್ಯಾಚರಣೆ ನಡೆಸಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 5 ಮಂದಿಯನ್ನು ಹತ್ಯೆ ಮಾಡಿದ್ದರು. ಭದ್ರತಾ ಪಡೆಗಳ ಜಂಟಿ ತಂಡವೊಂದು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದಾಗ ಮದ್ದೇಡ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡೆಪಾರ-ಕೊರಂಜೆಡ್ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ಎನ್ ಕೌಂಟರ್ ನಡೆದಿದೆ ಎಂದು ಬಸ್ತಾರ್ ವಲಯದ ಐಜಿಪಿ ಪಿ. ಸುಂದರ್ ರಾಜ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Encounter in Chhattisgarh: ಛತ್ತೀಸ್‌ಗಢದಲ್ಲಿ ನಕ್ಸಲರೊಂದಿಗೆ ಎನ್‌ಕೌಂಟರ್; ಓರ್ವ ಹೆಡ್ ಕಾನ್ಸ್‌ಟೇಬಲ್ ಹುತಾತ್ಮ